ರಾಜಾಜಿನಗರದ ರಾಮಮಂದಿರ ಬಳಿ ಜೋಡಿ ಕೊಲೆ
ಬೆಂಗಳೂರು, ಸೆ. 15 : ರಾಜಾಜಿನಗರದ ರಾಮಮಂದಿರ ಬಳಿ ಜೋಡಿ ಕೊಲೆ ನಡೆದಿದೆ. ಪತ್ನಿ ಮತ್ತು ಪುತ್ರಿಯನ್ನು ಕೊಲೆ ಮಾಡಿರುವ ಕುಮಾರ್ ಎಂಬಾತ ನಂತರ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ಅಕ್ರಮ ಸಂಬಂಧವೇ ಕೊಲೆಗೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ.
ಸೋಮವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಈ ಕೊಲೆ ನಡೆದಿದೆ. ಟೈಲರ್ ಆಗಿದ್ದ ಕುಮಾರ್ (30) ಎಂಬಾತ ಪತ್ನಿ ಮಂಜುಳಾ (26) ಮತ್ತು ಪುತ್ರಿ ಹರ್ಷಿತಾ (6)ಳನ್ನು ರಾಮಮಂದಿರ ಬಳಿಯ ಮನೆಯಲ್ಲಿ ಕೊಲೆ ಮಾಡಿದ್ದು, ನಂತರ ರಾಜಾಜಿನಗರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಕುಮಾರ್‌ನನ್ನು ವಶಕ್ಕೆ ಪಡೆದಿರುವ ಪೊಲೀಸರು ಅವರ ನಿವಾಸಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಕುಮಾರ್ ಕೊಲೆಗೆ ಬಳಸಿದ ಚಾಕುವನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ. ಮೊದಲ ಮಗಳ ಮುಂದೆಯೇ ಪತ್ನಿ ಕೊಲೆ ಮಾಡಿದ ಈತ ನಂತರ ಮಗಳನ್ನು ಕೊಲೆ ಮಾಡಿದ್ದಾನೆ. ಕುಮಾರ್ ವಿಚಾರಣೆ ನಡೆಸಿದ ಪೊಲೀಸರು ಅವನ ಹೇಳಿಕೆ ಪಡೆದಿದ್ದಾರೆ.
ಮಗುವನ್ನು ಕೊಂದ : ಪೋಲಿಯೋಗೆ ತುತ್ತಾಗಿದ್ದ ಮಗಳು ಹರ್ಷಿತಾಳನ್ನು ಕುಮಾರ್ ಕೊಲೆ ಮಾಡಿದ್ದಾನೆ. ನಾನು ಜೈಲಿಗೆ ಹೋದರೆ ಮಗಳನ್ನು ನೋಡಿಕೊಳ್ಳುವವರು ಯಾರು ಇಲ್ಲವೆಂಬ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಿದೆ ಎಂದು ಕುಮಾರ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.
ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಪತ್ನಿ, ಪುತ್ರಿಯನ್ನು ಕೊಲೆ ಮಾಡಿರುವುದಾಗಿ ಕುಮಾರ್ ಒಪ್ಪಿಕೊಂಡಿದ್ದಾನೆ ಎಂದು ಉತ್ತರ ವಿಭಾಗದ ಡಿಸಿಪಿ ಟಿ.ಆರ್.ಸುರೇಶ್ ಹೇಳಿದ್ದಾರೆ. ಪತ್ನಿಗೆ ಯಾರ ಜೊತೆ ಅನೈತಿಕ ಸಂಬಂಧವಿತ್ತು ಎಂದು ಕುಮಾರ್ ಬಹಿರಂಗಪಡಿಸಿಲ್ಲ ಎಂದು ಅವರು ಹೇಳಿದ್ದಾರೆ.












Click it and Unblock the Notifications