ಬೆಂಗಳೂರು ರೈಲು-ರಸ್ತೆ ಪ್ರಯಾಣಿಕರಿಗೆ ಡಬಲ್ ಬೂಸ್ಟ್: ಮೇಲ್ಸೇತುವೆ ಓಪನ್, ರೈಲು ನಿಲುಗಡೆಗೆ ಚಾಲನೆ
ಬೆಂಗಳೂರು: ಬಹುದಿನಗಳಿಂದ ನಿರ್ಮಾಣ ಹಂತದಲ್ಲಿದ್ದು, ದೈನಂದಿನ ಸಂಚಾರಕ್ಕೆ ತೊಂದೆಯಾಗಿದ್ದ ಬೆಂಗಳೂರಿನ ವಿಜಯನಗರ-ಮೈಸೂರು ರಸ್ತೆ ಮಧ್ಯದ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಸಾರ್ವಜನಿಕರಿಗೆ ಈ ಮೇಲ್ಸೇತುವೆಯನ್ನು ಮಂಗಳವಾರ ಮುಕ್ತಗೊಳಿಸುವ ಜೊತೆಗೆ ನಾಯಂಡಹಳ್ಳಿ ರೈಲು ನಿಲ್ದಾಣದಲ್ಲಿ ನಾಲ್ಕು ಎಕ್ಸ್‌ಪ್ರೆಸ್ ರೈಲುಗಳ ಹೆಚ್ಚುವರಿ ನಿಲುಗಡೆಗೆ ಚಾಲನೆ ನೀಡಿದರು. ಇದರಿಂದ ರಸ್ತೆ ಮೂಲಸೌಕರ್ಯ, ಪ್ರಯಾಣಿಕರ ಸೌಲಭ್ಯ ವೃದ್ಧಿ ಜೊತೆಗೆ ಪ್ರಾದೇಶಿಕ ಸಂಪರ್ಕಕ್ಕೆ ಉತ್ತೇಜನ ಸಿಕ್ಕಂತಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಮಿತಿ ಮೀರಿದೆ. ನಗರದಿಂದ ಬೇರೆ ಬೇರೆ ಊರುಗಳಿಗೆ ತೆರಳುವವರು ಈ ದಟ್ಟಣೆಯಲ್ಲಿ ತೆರಳಬೇಕಿದೆ. ನಿರ್ದಿಷ್ಟ ರೈಲುಗಳಿಗಾಗಿ ಕೆಂಗೇರಿ, ಮೆಜೆಸ್ಟಿಕ್ ನಿಲ್ದಾಣಗಳಿಗೆ ತೆರಳಬೇಕಿತ್ತು. ಇದೀಗ ಇಲ್ಲಿ ಪ್ರಮುಖ ರೈಲುಗಳ ನಿಲಗಡೆಯಿಂದ ನಾಯಂಡಹಳ್ಳಿ ಹಾಗೂ ಸುತ್ತಮುತ್ತಲಿನ ನಿವಾಸಿಗಳಿಗೆ ಸಾಕಷ್ಟು ಅನುಕೂಲವಾಗಿದೆ.

ಈ ನಾಯಂಡಹಳ್ಳಿ ರೈಲು ನಿಲ್ದಾಣದಲ್ಲಿ ಇಂದಿನಿಂದ ಮೈಸೂರು - ಕೆಎಸ್‌ಆರ್ ಸಿಟಿ ಚಾಮುಂಡಿ ಎಕ್ಸ್‌ಪ್ರೆಸ್ ರೈಲು (16215/16216), ಮೈಸೂರು-ಬಾಗಲಕೋಟೆ ಬಸವ ಎಕ್ಸ್‌ಪ್ರೆಸ್ ರೈಲು (16307/16308), ಟುಟಿಕೋರಿನ್-ಮೈಸೂರು ಎಕ್ಸ್‌ಪ್ರೆಸ್ ರೈಲು (16235/16236) ಹಾಗೂ ಮೈಸೂರು-ಪಂಡರಾಪುರ ಗೋಲ್ ಗುಂಬಜ್ ಎಕ್ಸ್‌ಪ್ರೆಸ್ ರೈಲು (16535/16536) ಹೆಚ್ಚುವರಿ ನಿಲುಗಡೆ ನೀಡಲಿವೆ ಎಂದು ಸಚಿವ ವಿ.ಸೋಮಣ್ಣ ಅವರು ಮಾಹಿತಿ ನೀಡಿದರು.
ನಾಯಂಡಹಳ್ಳಿ ರೈಲು ನಿಲ್ದಾಣ ಸಮೀಪವೇ ಮೆಟ್ರೋ ರೈಲು ನಿಲ್ದಾಣ ಇದೆ. ಹೊರ ವರ್ತುಲ ರಸ್ತೆ ಇದೇ ಭಾಗದಲ್ಲಿ ಹಾದು ಹೋಗುತ್ತದೆ. ಸಾಕಷ್ಟು ಕಚೇರಿ, ಮಾಲ್‌ಗಳು, ಪೊಲೀಸ್ ಕ್ವಾಟ್ರಸ್, ಪ್ರತಿಷ್ಠಿತ ಶಾಲಾ, ಕಾಲೇಜುಗಳು, ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳು ಇವೆ. ಪ್ರಯಾಣಿಕರು, ವಿದ್ಯಾರ್ಥಿಗಳು, ವ್ಯಾಪಾರಿಗಳು ಸೇರಿದಂತೆ ಲಕ್ಷಾಂತರ ಜನರಿಗೆ ಈ ರೈಲುಗಳ ಹೆಚ್ಚುವರಿ ನಿಲುಗಡೆಯಿಂದ ಪ್ರಯೋಜನ ದೊರೆಯಲಿದೆ.
ರಸ್ತೆ ಮೇಲ್ಸೇತುವೆ ಓಪನ್
ಒಟ್ಟಾರೆ 14.27 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಮೇಲ್ಸೇತುವೆ ಸಂಖ್ಯೆ 431 ಅನ್ನು ನಿರ್ಮಿಸಲಾಗುತ್ತದೆ. ಸಂಚಾರ ದಟ್ಟಣೆ ನಿಯಂತ್ರಿಸುವುದರ ಜೊತೆಗೆ ರಸ್ತೆ ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಮೂಲ ಸೌಕರ್ಯ ಅಭಿವೃದ್ಧಿ ಉತ್ತೇಜಿಸುತ್ತದೆ ಮತ್ತು ಪ್ರಾದೇಶಿಕ ಬೆಳವಣಿಗೆಗೆ ಕೊಡುಗೆ ನೀಡುವ ಮೇಲ್ಸೇತುವೆ ಇದಾಗಿದೆ. ವರ್ಷಗಳಿಂದ ವಿಜಯನಗರದಿಂದ ಮೈಸೂರು ರಸ್ತೆಗೆ ಗೋರಿಪಾಳ್ಯ ಮೂಲಕ ಸಂಪರ್ಕ ಕಡಿತವಾಗಿತ್ತು. ಇಂದಿನ ಲೋಕಾರ್ಪಣೆಯೊಂದಿಗೆ ಇದೀಗ ಮತ್ತೆ ಸಂಪರ್ಕ ಸಾಧ್ಯವಾಗಿದೆ.












Click it and Unblock the Notifications