Bengaluru: ವರ್ಷಾಂತ್ಯಕ್ಕೆ ಬೆಂಗಳೂರಿನಲ್ಲಿ ವೆದರ್ ಡಾಪ್ಲರ್ ರಾಡಾರ್ ಸ್ಥಾಪನೆ
ರಾಜ್ಯದ ಹವಾಮಾನ ವೀಕ್ಷಕರ ಬೇಡಿಕೆಗೆ ಮನ್ನಣೆ ಸಿಕ್ಕಿದೆ. ಕಳೆದ ಕೆಲವು ವರ್ಷಗಳಿಂದ ಇದ್ದ ಬೇಡಿಕೆಯನ್ನು ಈಡೇರಿಸಲು ಭಾರತೀಯ ಹವಾಮಾನ ಇಲಾಖೆ ಮುಂದಾಗಿದ್ದು, ಬೆಂಗಳೂರಿನಲ್ಲಿ ಡಾಪ್ಲರ್ ರಾಡಾರ್ ಸ್ಥಾಪನೆಗೆ ಅನುಮೋದನೆ ನೀಡಿದೆ.
ಹವ್ಯಾಸಿ ಹವಾಮಾನ ವೀಕ್ಷಕ ರವಿಕುಮಾರ್ ಅವರು ಹಲವು ವರ್ಷಗಳಿಂದ ರಾಜ್ಯಕ್ಕೆ ವೆದರ್ ಡಾಪ್ಲಾರ್ ಬೇಕು ಎನ್ನುವ ಬೇಡಿಕೆ ಇಟ್ಟಿದ್ದರು. ಎಂಎಸ್‌ಎಂಇ ಮತ್ತು ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಹಾಗೂ ಬೆಂಗಳೂರು ಉತ್ತರ ಸಂಸದೆ ಶೋಭಾ ಕರಂದ್ಲಾಜೆ ಅವರಿಗೂ ಈ ಬಗ್ಗೆ ಮನವಿ ಮಾಡಿದ್ದರು. ಬೇಡಿಕೆಗೆ ಸ್ಪಂದಿಸಿದ್ದ ಶೋಭಾ ಕರಂದ್ಲಾಜೆ, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು.

ಬೇಡಿಕೆಗೆ ಸ್ಪಂದಿಸಿರುವ ಭಾರತೀಯ ಹವಾಮಾನ ಇಲಾಖೆ ಡಾಪ್ಲರ್ ರಾಡಾರ್ ಅನ್ನು ಸ್ಥಾಪಿಸಲು ಅನುಮೋದನೆ ನೀಡಿದೆ. ಉತ್ತಮ ಹವಾಮಾನ ಮುನ್ಸೂಚನೆ ಮತ್ತು ನೈಸರ್ಗಿಕ ವಿಕೋಪಗಳಿಗೆ ಸಜ್ಜಾಗಲು ಇದು ಅನುಕೂಲವಾಗಲಿದೆ.
ಏನಿದರ ಉಪಯೋಗ?
ಈ ವರ್ಷದೊಳಗೆ ಬೆಂಗಳೂರಿನಲ್ಲಿ ಸಿ-ಬ್ಯಾಂಡ್ ಡಾಪ್ಲರ್ ವೆದರ್ ರಾಡಾರ್ ಅನ್ನು ಸ್ಥಾಪಿಸುವುದಾಗಿ ಹವಾಮಾನ ಸಂಸ್ಥೆ ಘೋಷಿಸಿತು. ರಾಡಾರ್ ಅಳವಡಿಕೆಗೆ ಸ್ಥಳವನ್ನು ಈಗಾಗಲೇ ಗುರುತಿಸಲಾಗಿದ್ದು, ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರದ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುತ್ತಿದೆ.
ಈ ರಾಡಾರ್, 250 ಕಿಮೀ ಕಾರ್ಯಾಚರಣೆಯ ವ್ಯಾಪ್ತಿಯನ್ನು ಹೊಂದಿದ್ದು, ಮುಂಚಿನ ಎಚ್ಚರಿಕೆ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ, ಇದರಿಂದ ಹವಾಮಾನ ಇಲಾಖೆ, ಹವಾಮಾನ ವೀಕ್ಷಕರು ಮತ್ತು ನಾಗರಿಕರಿಗೆ ಸಾಕಷ್ಟು ಅನುಕೂಲವಾಗಲಿದೆ.
ರಾಡಾರ್ ಅಳವಡಿಕೆ ಮಾಡುವುದರಿಂದ ಹವಾಮಾನ ವರದಿಯನ್ನು ಸ್ಪಷ್ಟವಾಗಿ ಪಡೆಯಬಹುದು, ಮಳೆ ಮುನ್ಸೂಚನೆ, ಚಂಡಮಾರುತ ಸೇರಿದಂತೆ ಹಲವು ಪ್ರಕೃತಿ ವಿಕೋಪಗಳ ಬಗ್ಗೆ ಮೊದಲೇ ಸೂಚನೆ ಸಿಗುವುದರಿಂದ ಪ್ರವಾಹದಂತಹ ಪರಿಸ್ಥಿತಿಗೆ ಸಿದ್ಧವಾಗಬಹುದು ಇದರಿಂದ ಹೆಚ್ಚಿನ ಹಾನಿಯನ್ನು ತಪ್ಪಿಸಬಹುದು.
ಜೂನ್ 26 ರಂದು ಡಾ. ಜಿತೇಂದ್ರ ಸಿಂಗ್ ಅವರಿಗೆ ಬರೆದ ಪತ್ರದಲ್ಲಿ, ಕರಂದ್ಲಾಜೆ ಅವರು ಡಾಪ್ಲರ್ ವೆದರ್ ರಾಡಾರ್‌ನ ಬೆಂಗಳೂರಿನ ನಿವಾಸಿಗಳ ದೀರ್ಘಕಾಲದ ಮತ್ತು ತುರ್ತು ಅಗತ್ಯದ ಬಗ್ಗೆ ಹೇಳಿದ್ದರು.
ಭಾರತದ ಸಿಲಿಕಾನ್ ವ್ಯಾಲಿ ಎಂದು ಸಾಮಾನ್ಯವಾಗಿ ಉಲ್ಲೇಖಿಸಲ್ಪಡುವ ಬೆಂಗಳೂರು, ಜನಸಂಖ್ಯೆಯೊಂದಿಗೆ ವೇಗವಾಗಿ ಬೆಳೆಯುತ್ತಿರುವ ಮಹಾನಗರವಾಗಿದೆ, ಇದು ಹವಾಮಾನ-ಸಂಬಂಧಿತ ಅಡಚಣೆಗಳಿಗೆ ವಿಶೇಷವಾಗಿ ಮಳೆಗಾಲದ ಅವಧಿಯಲ್ಲಿ ಹೆಚ್ಚು ದುರ್ಬಲವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಅನಿರೀಕ್ಷಿತ ಭಾರೀ ಮಳೆಯ ಹೆಚ್ಚಳವು ತುರ್ತು ಪ್ರವಾಹ ಪರಿಸ್ಥಿತಿಗೆ ಕಾರಣವಾಯಿತು. ಇಂತಹ ನೈಸರ್ಗಿಕ ವಿಕೋಪಗಳ ದುಷ್ಪರಿಣಾಮಗಳನ್ನು ತಗ್ಗಿಸಲು ಸುಧಾರಿತ ಹವಾಮಾನ ಮುನ್ಸೂಚನೆ ವ್ಯವಸ್ಥೆಗಳ ತುರ್ತು ಅಗತ್ಯವಿದೆ ಎಂದು ಪತ್ರದಲ್ಲಿ ಮನವಿ ಮಾಡಲಾಗಿತ್ತು.
ಕರ್ನಾಟಕದಲ್ಲಿ ಮಳೆ ಮುನ್ಸೂಚನೆ ವರದಿಗಾಗಿ ಈಗಲೂ ತಮಿಳುನಾಡು ಮತ್ತು ಕೇರಳದಲ್ಲಿರುವ ವೆದರ್ ಡಾಪ್ಲರ್ ರಾಡಾರ್ ಗಳ ಮೇಲೆ ಅವಲಂಬಿತವಾಗಿದೆ. ಈಗ ಬೆಂಗಳೂರಿನಲ್ಲಿ ಸ್ಥಾಪನೆ ಮಾಡುವುದರಿಂದ 250 ಕಿಮೀ ಪರಿಧಿಯಲ್ಲಿ ಸ್ಪಷ್ಟ ಮುನ್ಸೂಚನೆ ಸಿಗಲಿದೆ.
ಮುಂದಿನ ದಿನಗಳಲ್ಲಿ ಕರಾವಳಿ ಮತ್ತು ಉತ್ತರ ಒಳನಾಡಿನ ಭಾಗದಲ್ಲಿ ಕೂಡ ವೆದರ್ ಡಾಪ್ಲರ್ ರಾಡಾರ್ ಗಳನ್ನು ಅಳವಡಿಸುವಂತೆ ಒತ್ತಾಯ ಮಾಡಲಾಗಿದೆ.












Click it and Unblock the Notifications