ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ಇವರ ಹೆಸರು ಬೇಡವೇ ಬೇಡ: ಶಾಸಕ
ಬೆಂಗಳೂರು, ಸೆಪ್ಟೆಂಬರ್, 09: ಬೆಂಗಳೂರು ಜನರ ಜೀವನಾಡಿ ಸಾರಿಗೆಗಳಲ್ಲಿ ನಮ್ಮ ಮೆಟ್ರೋ ಕೂಡ ಒಂದಾಗಿದೆ. ಇನ್ನು ಇಲ್ಲಿನ ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ಸೇಂಟ್ ಮೇರಿ ಹೆಸರಿಡುವ ಬಗ್ಗೆ ಸಿಎಂ ಪ್ರಸ್ತಾಪಿಸಿದ್ದರು. ಈ ಬಗ್ಗೆ ತಮ್ಮ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಶಾಸಕ ಬಸನಗೌಡ ಯತ್ನಾಳ್ ಏನು ಬರೆದುಕೊಂಡಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ಶಿವಾಜಿನಗರದ ಮೆಟ್ರೋ ನಿಲ್ದಾಣಕ್ಕೆ ಸೇಂಟ್ ಮೇರಿ ಹೆಸರಿಡುವಂತೆ ಮನವಿ ಸಲ್ಲಿಕೆಗೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಟ್ವೀಟ್ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ.

"ಒಂದು ಸಂಸ್ಕೃತಿಯನ್ನು ಹೇಗೆ ನಾಶ ಮಾಡಬಹುದು ಎಂಬುದಕ್ಕೆ ಇದೆ ಉದಾಹರಣೆ ಆಗಿದೆ. ಹಿಂದೂಗಳ ಆರಾಧ್ಯದೈವ, ಔರಂಗಜೇಬನ ಹುಟ್ಟಡಗಿಸಿದ ಗಂಡುಗಲಿ, ಮಹಾಪರಾಕ್ರಮಿ ಶಿವಾಜಿ ಮಹಾರಾಜರು ತಮ್ಮ ಬಾಲ್ಯವನ್ನು ಕಳೆದಂತ ಶಿವಾಜಿನಗರದ ಮೆಟ್ರೋಗೆ ಸಂತ ಮೇರಿ ಹೆಸರನ್ನು ಇಡಬೇಕಂತೆ," ಎಂದು ಆಕ್ರೊಶ ವ್ಯಕ್ತಪಡಿಸಿದ್ದಾರೆ.
"ಇತಿಹಾಸ ಅರಿಯದ ಮೂಢರಷ್ಟೇ ಈ ರೀತಿ ಸಲಹೆ ಕೊಡಬಲ್ಲರು. 150 ವರ್ಷಗಳ ಇತಿಹಾಸವಿರುವ ಏಕಾಂಬರೇಶ್ವರ ಸ್ವಾಮಿಯ ದೇವಸ್ಥಾನ, ಮುತ್ಯಾಲಮ್ಮ ದೇವಸ್ಥಾನ, ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನ, ಅಂಗಾಲ ಪರಮೇಶ್ವರಿ ಅಮ್ಮನವರ ದೇವಸ್ಥಾನಗಳು ಶಿವಾಜಿನಗರದಲ್ಲಿವೆ," ಎಂದು ಹೇಳಿದ್ದಾರೆ.
"ಓಲೈಕೆ ರಾಜಕಾರಣಕ್ಕೆ, ಹೆಚ್ಚು ವೋಟು ಬೀಳುತ್ತಿರುವ ಸಮುದಾಯವನ್ನು ಸಂತುಷ್ಟಗೊಳಿಸಲು ಈ ರೀತಿ ವ್ಯರ್ಥ ಪ್ರಯತ್ನಗಳು ಬೇಕಾಗಿಲ್ಲ. ನಮ್ಮ ಸಂಸ್ಕೃತಿ, ಪರಂಪರೆ, ಧರ್ಮವನ್ನು ಹೆಸರನ್ನು ಉಳಿಸಿದವರನ್ನೆಲ್ಲ ಬಿಟ್ಟು ರಾಜಕೀಯ ಕಾರಣಕ್ಕಾಗಿ ಮೇರಿಯಮ್ಮನ ಹೆಸರು ನಾಮಕರಣ ಮಾಡುವ ಅವಶ್ಯಕತೆ ಇಲ್ಲ," ಎಂದು ಬರೆದುಕೊಂಡಿದ್ದಾರೆ.
ಇನ್ನು ಸೆಪ್ಟೆಂಬರ್ 8ರಂದು ಶಿವಾಜಿನಗರದ ಸಂತ ಮೇರಿ ಜಯಂತ್ಯುತ್ಸವ ಹಿನ್ನೆಲೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ ಆಗಿದ್ದರು. ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ಸೇಂಟ್ ಮೇರಿಸ್ ಮೆಟ್ರೋ ನಿಲ್ದಾಣ ಎಂದು ನಾಮಕರಣ ಮಾಡಬೇಕು. ಇದರಿಂದ ಪುಣ್ಯಕ್ಷೇತ್ರ ಮೇರಿ ಚರ್ಚೆಗೆ ಹೆಚ್ಚು ಜನರು ಬರಲು ಅನುಕೂಲವಾಗುತ್ತದೆ ಎಂದು ಹೇಳಿದ್ದರು. ಇದೀಗ ಇದಕ್ಕೆ ಶಾಸಕ ಯತ್ನಾಳ್ ವಿರೋಧ ವ್ಯಕ್ತಪಡಿಸಿದ್ದಾರೆ.
ಸಿಟಿ ರವಿ ವಿರುದ್ಧ ಆಕ್ರೋಶ: ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಆರೋಪ ಕೇಳಿಬಂದಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ವಿಪಕ್ಷಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯುತ್ತಲೇ ಇದ್ದಾರೆ. ಇದರ ಬೆನ್ನಲ್ಲೆ ಸಿಎಂ ಬದಲಾವಣೆಯ ಚರ್ಚೆಗಳು ಆಗುತ್ತಿದ್ದು, ಈ ಬಗ್ಗೆ ಮಾತನಾಡಿದ ಸಿಟಿ ರವಿ ಅವರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಚಾಮರಾಜನಗರದಲ್ಲಿ ತಿರುಗೇಟು ನೀಡಿದ್ದಾರೆ.
ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿ ಹುಟ್ಟಿದ ಕಾಲದಿಂದಲೂ ಸಿಎಂ ಬದಲು ಅಂಥಾನೇ ಹೇಳಿಕೊಂಡು ಬರುತ್ತಿದ್ದಾರೆ. ಅವರು ಈ ಬಗ್ಗೆ ಎಷ್ಟು ಬಾರಿ ಹೇಳಿಲ್ಲ ಎಂದು ಏಕವಚನದಲ್ಲಿ ಎಂಎಲ್‌ಸಿ ಸಿ.ಟಿ.ರವಿ ವಿರುದ್ಧ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುಡುಗಿದರು.
ಸಿಎಂ ಬದಲಾವಣೆ ಅದು ರವಿಯ ಕನಸಿನ ಮಾತು. ಅದೆಲ್ಲ ಸಾಧ್ಯವೇ ಇಲ್ಲ. ಅವನ ಕೈಯಲ್ಲಿ ತಾನೇ ಗೆಲ್ಲಲು ಆಗಿಲ್ಲ, ಎಂಎಲ್‌ಸಿ ಆಗ್ಬಿಟ್ಟು ಇಷ್ಟೆಲ್ಲಾ ಬುರುಡೆ ಬಿಡುತ್ತಾನೆ ಎಂದು ಆಕ್ರೊಶ ಹೊರಹಾಕಿದರು.












Click it and Unblock the Notifications