DK Suresh: ಐಶ್ವರ್ಯಾ ಗೌಡ ವಿರುದ್ಧ ದೂರು ದಾಖಲಿಸಿದ ಡಿಕೆ ಸುರೇಶ್
ವಾರಾಹಿ ಜ್ಯುವೆಲ್ಲರಿ ಅಂಗಡಿ ಮಾಲಕಿ ವನಿತಾಗೆ ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಐಶ್ವರ್ಯಾ ಮತ್ತು ಆತನ ಪತಿ ಹರೀಶ್‌ಗೆ ಜನವರಿ 6ರವರೆಗೂ ಪೊಲೀಸ್ ವಶಕ್ಕೆ ನೀಡಿ 4ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ. ಪೊಲೀಸ್ ವಶದಲ್ಲಿರುವ ಐಶ್ವರ್ಯಾಗೆ ಮತ್ತೊಂದು ಶಾಕ್ ಸಿಕ್ಕಿದೆ. ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ಡಿಕೆ ಸುರೇಶ್ ಐರ್ಶರ್ಯಾ ವಿರುದ್ಧ ದೂರು ದಾಖಲಿಸಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಮಾಜಿ ಸಂಸದ ಡಿ.ಕೆ ಸುರೇಶ್, ಐರ್ಶರ್ಯಾ ಗೌಡ ನನ್ನ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ತಮ್ಮ ಟ್ವಿಟರ್ ಖಾತೆಯಲ್ಲಿ ಡಿಕೆ ಸುರೇಶ್ ಈ ಸಂದೇಶ ಹಂಚಿಕೊಂಡಿದ್ದು, "ಐಶ್ವರ್ಯ ಗೌಡ ಉರುಫ್ ನವ್ಯಶ್ರೀ ಎಂಬುವವರು ನನ್ನ ಹೆಸರನ್ನು ದುರುಪಯೋಗಪಡಿಸಿಕೊಂಡು, ಜನರಿಗೆ ವಂಚನೆ ಮಾಡುತ್ತಿರುವುದು ಮಾಧ್ಯಮಗಳಲ್ಲಿ ಕೆಲವು ದಿನಗಳಿಂದ ವರದಿಯಾಗುತ್ತಿದೆ. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಅವರ ಮೇಲೆ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳುತ್ತಿದ್ದು, ಬೆಂಗಳೂರಿನ ನಗರ ಪೋಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದೇನೆ. ನನ್ನ ಸಾರ್ವಜನಿಕ ಜೀವನವನ್ನು, ಜನಸೇವೆಯ ಕಾರ್ಯವನ್ನು ದುರುಪಯೋಗಪಡಿಸಿಕೊಳ್ಳುವವರಿಗೆ ಇದೊಂದು ಪಾಠವಾಗಲಿ.
ಯಾವುದೇ ಕಾರಣಕ್ಕೂ ನನ್ನ ಹೆಸರನ್ನು ಹೇಳಿಕೊಂಡು ಲಾಭ ಪಡೆದುಕೊಳ್ಳಲು ಪ್ರಯತ್ನಿಸಿದರೆ ಮೋಸ ಹೋಗಬೇಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿಕೊಳ್ಳುತ್ತೇನೆ." ಎಂದು ಸಂದೇಶ ಹಂಚಿಕೊಂಡಿದ್ದು ದೂರಿನ ಪ್ರತಿಯನ್ನು ಹಂಚಿಕೊಂಡಿದ್ದಾರೆ.
ಯಾರು ಈ ಐಶ್ವರ್ಯಾ ಗೌಡ?
ನಾನು ಡಿಕೆ ಸುರೇಶ್ ಎಂದು ಹೇಳಿಕೊಂಡಿರುವ ಐರ್ಶರ್ಯಾ ಗೌಡ ಬೆಂಗಳೂರಿನಲ್ಲಿರುವ ವಾರಾಹಿ ಚಿನ್ನಾಭರಣ ಅಂಗಡಿ ಮಾಲಕಿ ವನಿತಾ ಎನ್ನುವವರಿಂದ ಕೋಟಿ ಕೋಟಿ ಹಣ ಲೂಟಿ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ವಂಚನೆಗೊಳಗಾದ ವನಿತಾ ದೂರು ಕೊಟ್ಟಿದ್ದು ಪೊಲೀಸರು ಐರ್ಶರ್ಯಾಗೆ ನೋಟಿಸ್ ಕೊಟ್ಟಿದ್ದರು.
ನೋಟಿಸ್ ನೀಡಿದ ಬಳಿಕ ಐಶ್ವರ್ಯಾ ಚಂದ್ರ ಲೇಔಟ್ ಪೊಲೀಸರ ಮುಂದೆ ತನಿಖೆಗೆ ಹಾಜರಾಗಿದ್ದರು. ಐಶ್ವರ್ಯ ಗೌಡ ಮತ್ತು ಆಕೆಯ ಪತಿ ಹರೀಶ್‌ರನ್ನು ವಿಚಾರಣೆ ಮಾಡಿದ ಪೊಲೀಸರು ಇಬ್ಬರನ್ನು ಬಂಧಿಸಲಾಗಿತ್ತು. ಸೋಮವಾರ ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜನವರಿ 6ರವರೆಗೂ ಇಬ್ಬರನ್ನು ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ.












Click it and Unblock the Notifications