ಅಂದು ದ್ರೌಪದಿ ವಸ್ತ್ರಾಪಹರಣ ವೇಳೆ ಅತಿರಥರು ಮೌನ; ಇಂದು ಅಧರ್ಮವಾದರೂ ಮಠಾಧೀಶರು ಮೌನ
ಬೆಂಗಳೂರು, ಏಪ್ರಿಲ್ 11: "ಮಹಾಭಾರತದ ಹಸ್ತಿನಾಪುರ ರಾಜಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣ ಆಗುತ್ತಿರುವ ಸಂದರ್ಭದಲ್ಲಿ ಭೀಷ್ಮ, ದ್ರೋಣಾಚಾರ್ಯರಂತಹ ಅತಿರಥರು ಉಪಸ್ಥಿತರಿದ್ದರು. ಆಗ ಅಲ್ಲಿ ಅಧರ್ಮ ನಡೆಯುತ್ತಿದ್ದರೂ ಅವರೆಲ್ಲರೂ ಮೌನವಾಗಿ ಕಣ್ಣುಮುಚ್ಚಿ ಕುಳಿತಿದ್ದರು". ಮುರುಘಾ ಮಠದ ಸಮಾನತ ದಿನ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮಾತುಗಳಿವು.
"ಅದೇ ರೀತಿ ಇಂದು ದೇಶದಲ್ಲಿ ಅಶಾಂತಿ, ಕೋಮು ಸಂಘರ್ಷ, ಗಲಭೆ, ಅಧರ್ಮ ಹೆಚ್ಚುತ್ತಿದ್ದು, ಇದನ್ನು ನೋಡಿಕೊಂಡು ಸ್ವಾಮೀಜಿಗಳು, ಮಠಾಧೀಶರು ಕಣ್ಣುಮುಚ್ಚಿಕೊಂಡು ಕೂರಬಾರದು. ಧರ್ಮ, ನ್ಯಾಯ, ಶಾಂತಿ ಹಾಗೂ ಎಲ್ಲರೂ ಒಂದಾಗಿ ಸಾಗಲು ಧ್ವನಿ ಎತ್ತಬೇಕು ಎಂದು ವಿನಮ್ರವಾಗಿ ಮನವಿ ಮಾಡುತ್ತೇನೆ," ಎಂದು ತಿಳಿಸಿದರು.
"ರಾಜ್ಯದಲ್ಲಿ ಎಲ್ಲ ಮಠಗಳು ಅಕ್ಷರ, ಅನ್ನ, ಆಶ್ರಯ, ಧರ್ಮ ದಾಸೋಹವನ್ನು ಸರ್ಕಾರಕ್ಕಿಂತ ಹೆಚ್ಚಾಗಿ ಮಾಡುತ್ತಿವೆ. ಉತ್ತಮ ಸಮಾಜ ಸೇವೆ ಮಾಡುತ್ತಿವೆ. ಈ ಮಠಗಳ ಬಗ್ಗೆ ಯಾರಾದರೂ ಅನಗತ್ಯವಾಗಿ ಮಾತನಾಡಿದರೆ ಅವರಂತಹ ಮೂರ್ಖರು ಮತ್ತೊಬ್ಬರಿಲ್ಲ. ಇಂತಹ ಮಠಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ".

"ರಾಜ್ಯದಲ್ಲಿ ಅಶಾಂತಿ ಮೂಡಿದೆ. ನಾವಿಂದು ಸಮಾನತ ದಿನ ಆಚರಿಸುತ್ತಿದ್ದು, ಮಠಗಳು ಸಮಾನತೆಯ ಅಡಿಪಾಯವಾಗಿವೆ. ಯಾವುದೇ ವ್ಯಕ್ತಿ ಆತ ಯಾವುದೇ ಜಾತಿ, ಧರ್ಮದವನಾಗಿದ್ದರೂ ಅವನು ಮಾನವೀಯತೆಯಿಂದ ಬದುಕಲು, ಅವನ ನೆಮ್ಮದಿಯ ಬದುಕಿಗೆ ನೀವು ಆಶೀರ್ವಾದ ಮಾಡಬೇಕು. ಅವನ ಪರ ಧ್ವನಿ ಎತ್ತಬೇಕು. ರಾಜ್ಯದಲ್ಲಿ ಶಾಂತಿ ಸ್ಥಾಪಿಸಲು ಪ್ರಯತ್ನಿಸಬೇಕು ಎಂದು ಕಳಕಳಿಯಿಂದ ಪ್ರಾರ್ಥಿಸುತ್ತೇನೆ," ಎಂದು ಹೇಳಿದರು.
"ಇದೊಂದು ಪವಿತ್ರವಾದ ದಿನ. ಪುರಂದರದಾಸರು ಒಂದು ಮಾತು ಹೇಳುತ್ತಾರೆ. ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ, ಪದುಮನಾಭನ ಪಾದ ಭಜನೆ ಪರಮ ಸುಖವಯ್ಯ ಎಂದು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನ್ನ ಭಾಗ್ಯ. ಇಂದು ನಾವೆಲ್ಲರೂ ಶಿವಮೂರ್ತಿ ಮುರುಘಾ ಶರಣರ ಜನ್ಮದಿನವನ್ನು ಆಚರಣೆ ಮಾಡುತ್ತಿದ್ದು, ಇದು ನಮ್ಮೆಲ್ಲರ ಭಾಗ್ಯ," ಎಂದರು.
ನಾನಿಲ್ಲಿಗೆ ಶರಣರ ಪಾದ ಸ್ಪರ್ಶಕ್ಕೆ ಬಂದಿದ್ದೇನೆ. ಕಾವೇರಿ, ಮೇಕೆದಾಟು ಪಾದಯಾತ್ರೆ ಮಾಡಿದಾಗ, ಎಷ್ಟೋ ಸ್ವಾಮೀಜಿಗಳು ಹೆದರಿ ಭಾಗವಹಿಸಲಿಲ್ಲ. ಆದರೆ ಮುರುಘಾ ಮಠದ ಸ್ವಾಮಿಗಳು ರಾಜ್ಯದ ಹಿತಕ್ಕಾಗಿ, ರಾಜ್ಯದ ನೀರಿಗಾಗಿ ಒಂದು ಡಜನ್‌ಗೂ ಹೆಚ್ಚು ಸ್ವಾಮೀಜಿಗಳನ್ನು ಕರೆದುಕೊಂಡು ಬಂದು ಆಶೀರ್ವಾದ ಮಾಡಿದರು. ಅದನ್ನು ನಾನು ನನ್ನ ಜೀವನದುದ್ದಕ್ಕೂ ಮರೆಯುವುದಿಲ್ಲ. ನಾನು ನಿಮಗೆ ಸದಾ ಶರಣಾಗಿರುತ್ತೇನೆ ಎಂದು ಹೇಳುತ್ತೇನೆ. ಕಷ್ಟಕಾಲದಲ್ಲಿ ನಮಗೆ ಯಾರು ಧೈರ್ಯ ಕೊಟ್ಟು, ಸ್ಫೂರ್ತಿ ಕೊಟ್ಟು ಆಶೀರ್ವಾದ ಮಾಡುತ್ತಾರೋ ಅದು ಬಹಳ ಮುಖ್ಯವೆಂದರು.
ನೊಂದ ಎಲ್ಲ ಸಮಾಜಗಳಿಗೂ ಪೀಠ ಸ್ಥಾಪನೆ ಮಾಡಿ ಎಲ್ಲರೂ ಸಮಾನತೆಯಿಂದ ಬಾಳಲು, ಬಸವಣ್ಣನವರ ಹಾದಿಯಲ್ಲಿ ಹೆಜ್ಜೆ ಹಾಕಿದ್ದರೆ, ಅದು ಮುರುಘಾ ಮಠದ ಶ್ರೀಗಳು ಎಂದು ಅನೇಕ ಸ್ವಾಮೀಜಿಗಳು ಹೇಳಿದ ಮಾತನ್ನು ನಾನು ಒಪ್ಪುತ್ತೇನೆ.
ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ, ಕರ್ಮ ಹಲವಾದರೂ ನಿಷ್ಠೆ ಒಂದೇ, ದೇವನೊಬ್ಬ ನಾಮ ಹಲವು. ನಾವು ಹುಟ್ಟುವಾಗ ಯಾರೂ ಇಂತಹ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟಲಿಲ್ಲ. ಹುಟ್ಟುವಾಗ ನಾವು ಯಾರು ಮುಹೂರ್ತ ನೋಡಿಲ್ಲ, ಸಾಯುವಾಗಲೂ ನೋಡುವುದಿಲ್ಲ. ಕಾರಣ ಮನುಷ್ಯನ ಹುಟ್ಟು ಆಕಸ್ಮಿಕವಾದುದು, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ.
ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ಶ್ರೀಗಳು ತಮ್ಮ ಬದುಕಿನಲ್ಲಿ ಅವರಿಗೆ ಸಿಕ್ಕ ಅವಕಾಶಗಳಲ್ಲಿ ಎಲ್ಲ ವರ್ಗದವರು ಹಾಗೂ ತುಳಿತಕ್ಕೆ ಒಳಗಾದವರಿಗೆ ಶಕ್ತಿ ಕೊಟ್ಟು ಧರ್ಮ ಉಳಿಸಲು ಪ್ರಯತ್ನಿಸಿದ್ದಾರೆ. ಹೀಗಾಗಿ ಅವರನ್ನು ಅಭಿನಂದಿಸಲು ನಾವೆಲ್ಲರೂ ಇಲ್ಲಿ ಸೇರಿದ್ದೇವೆ.
ನಮ್ಮ ಆಯಸ್ಸು ಕಡಿಮೆ ಮಾಡಿ ಇಂತಹ ಮಹಾನ್ ವ್ಯಕ್ತಿಗಳಿಗೆ ಕೊಡಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡಲಷ್ಟೇ ನಮ್ಮಿಂದ ಸಾಧ್ಯ. ರಂಭಾಪುರಿ ಜಗದ್ಗುರುಗಳಾಗಿದ್ದ ಶ್ರೀ ಗಂಗಾಧರೇಶ್ವರ ಸ್ವಾಮೀಜಿಗಳ ಒಂದು ವಾಣಿಯನ್ನು ನಾನು ಆಗಾಗ ನೆನೆಸಿಕೊಳ್ಳುತ್ತೇನೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದ ವಿಶ್ವಕ್ಕೆ ಶಾಂತಿ ಸಿಗಲಿ. ನಾಡು ಧರ್ಮ ಸಾಮ್ರಾಜ್ಯವಾಗಲಿ, ಭಕ್ತಿಯ ನೆಲೆ ಬೀಡಾಗಲಿ. ಧರ್ಮಕ್ಕಾಗಿ ಏಳಿರಿ, ಧರ್ಮಕ್ಕಾಗಿ ಬಾಳಿರಿ. ಧರ್ಮಕ್ಕಾಗಿ ಆಳಿರಿ, ಧರ್ಮಕ್ಕಾಗಿ ತಾಳಿರಿ ಎಂದು ಅವರು ಹೇಳಿದ್ದಾರೆ ಎಂದರು.
ನಾವು ಧರ್ಮ ಬೇಡ ಎಂದು ಎಷ್ಟೇ ಹೇಳಿದರೂ, ಧರ್ಮ ನಮ್ಮನ್ನು ಬಿಡುವುದಿಲ್ಲ. ನಾವು ಹುಟ್ಟುವಾಗ ನಮ್ಮ ಧರ್ಮ ಯಾವುದು ಎಂದು ಗೊತ್ತಿರುವುದಿಲ್ಲ. ಹೆಸರಿಡುತ್ತಾರೆ, ಉಡದಾರ ಹಾಕುತ್ತಾರೆ, ಮೂಗು ಚುಚ್ಚಿಸುತ್ತಾರೆ, ಎಲ್ಲವೂ ಧರ್ಮವೇ. ನಂತರ ನಾವು ಯಾವುದೇ ಧರ್ಮ ಬೇಡ ಎಂದರು ಒಂದು ಕಡೆ ಅಕ್ಕಿ, ಮತ್ತೊಂದು ಕಡೆ ಅರಿಶಿಣ ಸೇರಿ ಮಂತ್ರಾಕ್ಷತೆ ಆಗುವಂತೆ ಧರ್ಮ ನಮ್ಮನ್ನು ಬೆಸೆದುಕೊಳ್ಳುತ್ತದೆ. ನಾವು ಸತ್ತಾಗ ಅಂತ್ಯ ಸಂಸ್ಕಾರ ಮಾಡುವಾಗ ನಮ್ಮ ಧರ್ಮ ನೋಡುತ್ತಾರೆ. ಹೀಗೆ ನೀವು ಧರ್ಮ ಬಿಟ್ಟರು ಧರ್ಮ ನಿಮ್ಮನ್ನು ಬಿಡುವುದಿಲ್ಲ.
ಅಲೆಕ್ಸಾಂಡರ್ ಭಾರತ ವಶಪಡಿಸಿಕೊಳ್ಳಲು ನಿರ್ಧರಿಸಿ, ಅರಿಸ್ಟಾಟಲ್ ಅವರನ್ನು ಭೇಟಿ ಮಾಡಿದಾಗ ಅವರು ಅಲೆಕ್ಸಾಂಡರ್‌ಗೆ ಒಂದು ಮಾತು ಹೇಳುತ್ತಾರೆ. ನೀನು ಭಾರತವನ್ನು ಗೆಲ್ಲುತ್ತೀಯೋ ಇಲ್ಲವೋ, ನೀನು ಮರಳಿ ಇಲ್ಲಿಗೆ ಬರುವಾಗ ಐದು ವಸ್ತು ತೆಗೆದುಕೊಂಡು ಬಾ. ಒಂದು ರಾಮಾಯಣ ಗ್ರಂಥ, ಒಂದು ಮಹಾಭಾರತದ ಭಗವದ್ಗೀತೆ, ಕೃಷ್ಣನ ಕೊಳಲು, ಗಂಗಾ ಜಲ ಹಾಗೂ ಭಾರತದ ಧರ್ಮ ಪೀಠದ ಧರ್ಮ ಗುರುಗಳನ್ನು ಕರೆದುಕೊಂಡು ಬಾ. ಆಗ ನೀನು ಇಡೀ ಭಾರತವನ್ನೇ ತಂದಂತೆ ಎಂದು. ಇದು ನಮ್ಮ ದೇಶದ ಸಂಸ್ಕೃತಿ, ನಮ್ಮ ಆಸ್ತಿ ಎಂದು ಶಿವಕುಮಾರ್ ಹೇಳಿದರು.












Click it and Unblock the Notifications