ಮಗು ಹುಟ್ಟಿ 15 ದಿನ ಆಗಿದೆ: ಗ್ಯಾರಂಟಿಗಳ ಬಗ್ಗೆ ಟೀಕೆಗೆ ಡಿಕೆ ಶಿವಕುಮಾರ್ ಉತ್ತರ
ಬೆಂಗಳೂರು, ಮೇ 28: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಾಂಗ್ರೆಸ್‌ನ ಗ್ಯಾರಂಟಿಗಳ ಬಗ್ಗೆ ವಿಪಕ್ಷಗಳು ಮಾಡುತ್ತಿರುವ ಟೀಕೆಗೆ ತಿರುಗೇಟು ಕೊಟ್ಟಿದ್ದಾರೆ. ಬಿಜೆಪಿ ಮಾಡುತ್ತಿರುವ ಟೀಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು 15 ಲಕ್ಷ ರುಪಾಯಿ ಅಕೌಂಟ್‌ಗೆ ಹಾಕ್ತೀವಿ ಅಂದಿದ್ರಲ್ಲ ಹಾಕಿದ್ರಾ? ಒಂದು ಲಕ್ಷ ರುಪಾಯಿ ಸಾಲ ಮನ್ನಾ ಮಾಡ್ತೀವಿ ಅಂದಿದ್ರು ಅದೇನಾಯ್ತು, ಅವರು ನೀಡಿದ್ದ ಭರವಸೆಗಳನ್ನು ಎಷ್ಟು ಪೂರೈಸಿದ್ದಾರೆ ಎನ್ನುವುದರ ಬಗ್ಗೆ ಮೊದಲ ಮಾತನಾಡಲಿ ಎಂದು ಪ್ರಶ್ನಿಸಿದರು.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಗು ಹುಟ್ಟಿ ಇನ್ನೂ 15 ದಿನಗಳಷ್ಟೇ ಆಗಿದೆ, ಇನ್ನೂ ಅಳತೆ ಕೊಡಬೇಕು, ಬಟ್ಟೆ ಹೊಲಿಸಬೇಕು ಎಂದು ವಿರೋಧ ಪಕ್ಷಗಳ ಟೀಕೆಗಳಿಗೆ ಉತ್ತರ ನೀಡಿದ್ದಾರೆ. ಜೂನ್ 1ರಂದು ಸಚಿವ ಸಂಪುಟ ಸಭೆ ಕರೆಯಲಾಗಿದೆ, 5 ಗ್ಯಾರಂಟಿ ಜಾರಿಗಳ ಬಗ್ಗೆ ಎಲ್ಲಾ ವಿವರಗಳು ತಿಳಿಯಲಿವೆ. ಪ್ರತಿಭಟನೆ ಮಾಡ್ತೀವಿ ಅಂದವರು ಮಾಡಲಿ ನಾವೇನು ಬೇಡ ಅನ್ನಲ್ಲ ಎಂದು ಹೇಳಿದರು.

ರಾಮಲಿಂಗಾರೆಟ್ಟಿ ಮನವೊಲಿಸಿದ ಡಿಕೆಶಿ
ಕಾಂಗ್ರೆಸ್‌ನ ಟ್ರಬಲ್ ಶೂಟರ್ ಎನಿಸಿಕೊಂಡಿರುವ ಡಿಕೆ ಶಿವಕುಮಾರ್ ಮತ್ತೊಮ್ಮೆ ಅದನ್ನು ಸಾಬೀತು ಮಾಡಿದ್ದಾರೆ. ಸಾರಿಗೆ ಇಲಾಖೆ ಖಾತೆ ಬೇಡ ಎಂದು ಮುನಿಸಿಕೊಂಡಿದ್ದ ಸಚಿವ ರಾಮಲಿಂಗಾರೆಡ್ಡಿ ಅವರ ಮನವೊಲಿಸುವಲ್ಲಿ ಡಿಕೆ ಶಿವಕುಮಾರ್ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ರಾಮಲಿಂಗಾರೆಡ್ಡಿ ನಿವಾಸಕ್ಕೆ ಆಗಮಿಸಿದ ಡಿಕೆಶಿ ಹಿರಿಯ ಶಾಸಕರ ಮನವೊಲಿಸುವಲ್ಲಿ ಯಶಸ್ವಿಯಾದರು. ಈ ಬಗ್ಗೆ ಮಾತನಾಡಿದ ಅವರು, "ಪಕ್ಷದ ತೀರ್ಮಾನಕ್ಕೆ ರಾಮಲಿಂಗಾರೆಡ್ಡಿ ಬದ್ಧರಾಗಿರುತ್ತಾರೆ. ಅವರು 8 ಬಾರಿ ಶಾಸಕರಾಗಿದ್ದಾರೆ. 2018ರಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದಾಗ ಅವರಿಗೆ, ನನಗೆ ಸಚಿವ ಸ್ಥಾನ ಇರಲಿಲ್ಲ, ಕೋಪ ಮಾಡಿಕೊಂಡು ಪಕ್ಷ ಬಿಟ್ಟು ಹೋಗಿದ್ದರೆ ಈಗ ಏನೇನೋ ಆಗಿರಬಹುದಾಗಿತ್ತು, ಆದರೆ ಕೆಲವು ಬಾರಿ ಪಕ್ಷದ ತೀರ್ಮಾನಗಳಿಗೆ ಬದ್ಧವಾಗಿರಬೇಕಾಗುತ್ತದೆ" ಎಂದು ಹೇಳಿದರು.
ನಾವು ಪಕ್ಷವನ್ನು ಕಟ್ಟಿ ಬೆಳೆಸಿದವರು, ರಾಜಕೀಯ ಅಂದ ಮೇಲೆ ಹಿರಿತನ ಬರುತ್ತೆ, ಕೆಲವು ಬಾರಿ ಏನೂ ಮಾಡಲು ಆಗುವುದಿಲ್ಲ, ಬಹಳಷ್ಟು ಬಾರಿ ನೋವು ತಿಂದಿದ್ದೇವೆ. ಜನರಿಗೆ ಕೊಟ್ಟ ಭರವಸೆ ಈಡೇರಿಸಬೇಕು ಅದೇ ನಮಗೆ ಮುಖ್ಯ, ಖಾತೆ ಹಂಚಿಕೆಯ ವಿಚಾರದಲ್ಲಿ ಗೊಂದಲಗಳಿಲ್ಲ, ನನಗೆ ಇನ್ನೂ ಖಾತೆ ಹಂಚಿಕೆಯ ಪಟ್ಟಿಯೇ ಸಿಕ್ಕಿಲ್ಲ ಎಂದರು. ರಾಮಲಿಂಗಾರೆಡ್ಡಿ ಅವರಿಗೆ ಸಾರಿಗೆ ಇಲಾಖೆ ಬಹುತೇಕ ಖಚಿತವಾಗಿದ್ದು, ಇತರೆ ಜವಾಬ್ದಾರಿ ನೀಡುವ ಭರವಸೆ ನೀಡಲಾಗಿದೆ.












Click it and Unblock the Notifications