Bengaluru Second Airport: ಡಿಕೆಶಿ ತವರು ಜಿಲ್ಲೆಯಲ್ಲೇ ಹೊಸ ಏರ್‌ಪೋರ್ಟ್ ನಿರ್ಮಾಣ?
ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ನಿರ್ಮಿಸಲು ಕರ್ನಾಟಕ ಸರ್ಕಾರವು ತರಾತುರಿಯಲ್ಲಿದೆ. ಈಗಾಗಲೇ ಮೂರು ಸ್ಥಳಗಳನ್ನು ಅಂತಿಮಗೊಳಿಸಿದ್ದು, ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ. ಅಚ್ಚರಿ ಎಂದರೆ ಫಿಕ್ಸ್ ಆಗಿರುವ ಮೂರು ಸ್ಥಳಗಳ ಪೈಕಿ ಎರಡು ಸ್ಥಳಗಳು ಕನಪುರ ರಸ್ತೆಯಲ್ಲೇ ಇವೆ. ಇದರಲ್ಲಿ ಒಂದು ರಾಮನಗರ ಜಿಲ್ಲೆಯ ವ್ಯಾಪ್ತಿಯಲ್ಲಿದ್ದರೆ, ಮತ್ತೊಂದು ಬೆಂಗಳೂರು ನಗರ ಜಿಲ್ಲೆಗೆ ಸೇರಿಕೊಂಡಿದೆ. ಈ ಎರಡರಲ್ಲಿ ಯಾವ ಜಾಗ ನಿಗದಿಯಾದರೂ ಅದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ತವರು ಜಿಲ್ಲೆಯಾದ ರಾಮನಗರಕ್ಕೆ ಭಾರಿ ಲಾಭವಾಗಲಿದೆ ಎಂದು ಚರ್ಚೆಯಾಗುತ್ತಿದೆ.
ಈಗ ದೇವನಹಳ್ಳಿ ಬಳಿ ಇರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮೊದಲಿಗೆ ರಾಮನಗರ ಜಿಲ್ಲೆಯಲ್ಲಿ ಅದರಲ್ಲೂ ಕನಕಪುರ ಸಮೀಪ ನಿರ್ಮಿಸಲು ಅಂದಿನ ಸರ್ಕಾರ ನಿರ್ಧರಿಸಿತ್ತು. ಆದರೆ, ಕೊನೇ ಕ್ಷಣದಲ್ಲಿ ಇದು ದೇವನಹಳ್ಳಿಗೆ ಶಿಫ್ಟ್ ಆಗಿತ್ತು. ಹೀಗಾಗಿ ಈ ಎರಡನೇ ಏರ್‌ಪೋರ್ಟ್ ಆದರೂ ಈ ಭಾಗದಲ್ಲಿ ನಿರ್ಮಾಣವಾದರೆ ಈ ಪ್ರದೇಶಕ್ಕೆ ಹಲವು ಮಾರ್ಗಗಳಿಂದ ಲಾಭವಾಗುವುದಲ್ಲದೆ, ಇಲ್ಲಿನ ಭೂಮಿಗೂ ಬಂಗಾರದ ಬೆಲೆ ಸಿಗಲಿದೆ ಎಂಬ ಲೆಕ್ಕಾಚಾರವೂ ಇದೆ ಎನ್ನಲಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಹೇಗಾದರೂ ಮಾಡಿ ತಮ್ಮ ತವರು ಜಿಲ್ಲೆಯಲ್ಲೇ ಈ ಎರಡನೇ ಏರ್‌ಪೋರ್ಟ್ ನಿರ್ಮಾಣ ಮಾಡಬೇಕು ಎಂದು ಪಣ ತೊಟ್ಟಿದ್ದಾರಂತೆ.

ಇದೇ ಕಾರಣಕ್ಕೆ ಈಗ ನಿಗದಿಯಾಗಿರುವ ಮೂರು ಸ್ಥಳಗಳ ಪೈಕಿ ಎರಡು ಸ್ಥಳಗಳು ಕನಕಪುರ ರಸ್ತೆಯಲ್ಲೇ ಇವೆ. ಹಾರೋಹಳ್ಳಿ ಬಳಿ ಇರುವ ಪ್ರದೇಶದಲ್ಲಿ ಎರಡನೇ ಏರ್‌ಪೋರ್ಟ್ ನಿರ್ಮಾಣವಾದರೆ, ಸಹಜವಾಗಿ ಕನಕಪುರ ಭಾಗದ ಅಭಿವೃದ್ಧಿಗೂ ಅನುಕೂಲವಾಗುತ್ತದೆ ಎಂಬ ಅಂದಾಜಿನಲ್ಲಿ ಈ ಯೋಜನೆ ಸಿದ್ಧವಾಗುತ್ತಿದೆ. ಮತ್ತೊಂದು ನೆಲಮಂಗಲದ ಕುಣಿಗಲ್ ರಸ್ತೆ ಬಳಿ ನಿಗದಿಯಾಗಿರುವ ಸ್ಥಳವು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಗೆ ನೇರವಾಗಿ ಇರುವುದರಿಂದ ವಿಮಾನಗಳ ಹಾರಾಟ ದೃಷ್ಟಿಯಿಂದ ಇದನ್ನು ಕೈಬಿಡುವ ಸಾಧ್ಯತೆ ಇದ್ದು, ಒಟ್ಟಾರೆ ಕನಕಪುರ ರಸ್ತೆಯಲ್ಲಿ ಗೊತ್ತುಪಡಿಸಿರುವ ಈ ಎರಡು ಸ್ಥಳಗಳಲ್ಲಿ ಒಂದಂತೂ ಪಕ್ಕಾ ಆಗಲಿದೆ ಎಂದು ಚರ್ಚೆ ನಡೆಯುತ್ತಿದೆ.
ಕನಕಪುರದ ಗೇಮ್ ಚೇಂಜರ್!
ಈಗಾಗಲೇ ರಾಮನಗರವನ್ನು ಬೆಂಗಳೂರಿಗೆ ಸೇರಿಸಬೇಕು ಎನ್ನುವ ಪ್ರಸ್ತಾವನೆಯನ್ನು ಡಿಸಿಎಂ ಡಿಕೆ ಶಿವಕುಮಾರ್ ಅವರೇ ಮುಂದಿಟ್ಟಿದ್ದಾರೆ. ಈಗಾಗಲೇ ಮೆಟ್ರೋ ಮಾರ್ಗದ ಸಂಪರ್ಕದೊಂದಿಗೆ ಕನಕಪುರ ರಸ್ತೆ ಕೂಡ ಅಭಿವೃದ್ಧಿಯಲ್ಲಿ ಮುಂದಡಿ ಇಟ್ಟಿದೆ. ಈಗ ಎರಡನೇ ಏರ್‌ಪೋರ್ಟ್ ಇದೇ ಭಾಗದಲ್ಲಿ ನಿರ್ಮಾಣವಾಗುವುದರಿಂದ ಈ ಪ್ರದೇಶದ ಚಿತ್ರಣವೇ ಬದಲಾಗಲಿದ್ದು, ಕನಕಪುರಕ್ಕೂ ಭಾರಿ ಲಾಭವಾಗಲಿದೆ ಎನ್ನುವ ನಿರೀಕ್ಷೆ ಇದೆ. ಕನಕಪುರ ರಸ್ತೆ ಕಾಮಗಾರಿ ಕೂಡ ಭರದಿಂದ ಸಾಗಿದ್ದು, ಇದಕ್ಕೆ ಹತ್ತಿರವೇ ಏರ್‌ಪೋರ್ಟ್ ಬರಲಿದೆ ಎಂದು ಹೇಳಲಾಗುತ್ತಿದೆ.

ಎರಡನೇ ಏರ್‌ಪೋರ್ಟ್ ಬಗ್ಗೆ ಮಾತನಾಡಿದ್ದ ಡಿಕೆ ಶಿವಕುಮಾರ್, "ನೂತನ ವಿಮಾನ ನಿಲ್ದಾಣದ ಸಂಬಂಧ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ್ ಅವರು ಈಗಾಗಲೇ ಸಭೆಗಳನ್ನು ನಡೆಸಿದ್ದಾರೆ. ಬೆಂಗಳೂರು ನಗರದ ಅಭಿವೃದ್ಧಿ, ಅವಕಾಶ ಮತ್ತು ಪ್ರಯಾಣಿಕರು ಹಾಗೂ ಸರಕು ಸಾಗಣೆ ಒತ್ತಡ ಪರಿಗಣಿಸಿ, ಮುಂದಿನ ಹೆಜ್ಜೆ ಇಡಲಾಗುವುದು ಎಂದಿದ್ದರು.
ಬೆಂಗಳೂರು ಸಮೀಪವೇ 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ಶೀಘ್ರದಲ್ಲೇ ಸ್ಥಳ ಘೋಷಿಸುತ್ತೇವೆ. ವಿಮಾನ ನಿಲ್ದಾಣ ಸ್ಥಾಪನೆಗೆ ಹಲವು ಪ್ರದೇಶಗಳಿಂದ ಪ್ರಸ್ತಾವನೆ ಬಂದಿದ್ದವು. ಅವುಗಳನ್ನು ಕೂಲಂಕುಷವಾಗಿ ಪರಿಶೀಲಿಸಲಾಗಿದ್ದು, ಮುಂದಿನ ದಶಕಗಳಲ್ಲಿ ಆಗುವ ಬೆಳವಣಿಗೆ, ಸಂಚಾರ ಮತ್ತು ವಿಮಾನ ಹಾರಾಟ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಸ್ಥಳ ಆಯ್ಕೆ ಮಾಡಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದು, ಕನಕಪುರ ರಸ್ತೆಯಲ್ಲೇ ನಿರ್ಮಾಣವಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಡಿಕೆ ಶಿವಕುಮಾರ್ ಅವರು ತಮ್ಮ ತವರು ಜಿಲ್ಲೆ, ಕ್ಷೇತ್ರ ಅಭಿವೃದ್ಧಿಯ ದೃಷ್ಟಿಯಿಂದಲೂ ಹೊಸ ಏರ್‌ಪೋರ್ಟ್‌ಗೆ ವಿಶೇಷ ಕಾಳಜಿ ವಹಿಸಿದ್ದಾರೆ ಎನ್ನಲಾಗಿದೆ.
ರಾಮನಗರವನ್ನು ಬೆಂಗಳೂರಿಗೆ ಸೇರಿಸುವುದು ಸೇರಿದಂತೆ ಇಡೀ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯೊಂದಿಗೆ ಹಾರೋಹಳ್ಳಿ ಸಮೀಪ ಗುರುತಿಸಿರುವ ಜಾಗದಲ್ಲೇ ಎರಡನೇ ಏರ್‌ಪೋರ್ಟ್ ನಿರ್ಮಿಸುವುದು ಬಹುತೇಕ ಅಂತಿಮವಾಗಲಿದೆ. ಇದು ಬೆಂಗಳೂರಿನಿಂದ ಹೊರವಲಯವಾದ್ದರಿಂದ ಈ ಜಾಗವೇ ಏರ್‌ಪೋರ್ಟ್‌ಗೆ ಸೂಕ್ತ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಹಾಗಾಗಿ ಮೂರರ ಪೈಕಿ ಈ ಸ್ಥಳವೇ ಅಂತಿಮವಾಗುವುದು ಬಹುತೇಕ ಫಿಕ್ಸ್ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ ಕನಕಪುರ ರಸ್ತೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಕೂಡ ಗರಿಗೆದರಿದೆ.












Click it and Unblock the Notifications