DG & IGP ಪ್ರವೀಣ ಸೂದ್ 'ನಾಲಾಯಕ್' ಎಂದು ಬೈದ ಡಿಕೆ ಶಿವಕುಮಾರ್: ಏಕವಚನದಲ್ಲೇ ಡಿಕೆಶಿ ವಾಗ್ದಾಳಿ
ಐಪಿಎಸ್ ಅಧಿಕಾರಿಯೂ ಆದ ಕರ್ನಾಟಕದ ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು (DG IGP) ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಾಲಾಯಕ್ ಎಂದು ಕರೆದಿದ್ದಾರೆ. ಅವರು ಹೀಗೆ ಕರೆಯಲು ಕಾರಣವೇನು, ನೀಡಿದ ಎಚ್ಚರಿಕೆ ಏನು? ತಿಳಿಯಿರಿ.
ಬೆಂಗಳೂರು, ಮಾರ್ಚ್ 15: ಹಿರಿಯ ಐಪಿಎಸ್ ಅಧಿಕಾರಿಯೂ ಆಗಿರುವ ಕರ್ನಾಟಕದ ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು (DG IGP) ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ನಾಲಾಯಕ್ ಎಂದು ಕರೆದಿದ್ದಾರೆ. ಅವನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಏಕವಚನದಲ್ಲಿ ಮಾತನಾಡಿದ್ದಾರೆ.
ಹಿರಿಯ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಅವರು ಕರ್ನಾಟಕದ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ (DG IGP) ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರನ್ನು ನಾಲಾಯಕ್ ಅಧಿಕಾರಿ ಎಂದು ಡಿ.ಕೆ.ಶಿವಕುಮಾರ್ ಬೈದಿದ್ದಾರೆ. ಅಲ್ಲದೇ ಡಿಜಿಐಜಿಪಿ ಸೇರಿದಂತೆ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ಅವರು ಹೇಳಿದ್ದಾರೆ.

ಬುಧವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸುದ್ದಿಗಾರರ ಹಲವು ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ವೇಳೆ ಈ ರೀತಿ ಬೈದಿದ್ದಾರೆ. 'ಪ್ರವೀಣ್ ಸೂದ್ ಅವನನ್ನು ಗೌರವಾನ್ವಿತ ಅಧಿಕಾರಿ ಎಂದುಕೊಂಡಿದ್ದೆ. ಆದರೆ ಅವನು ಹಾಗಿಲ್ಲ. ಅವನೊಬ್ಬ ನಾಲಾಯಕ್. ಕೂಡಲೇ ಅವನ ಮೇಲೆ ಕೇಸ್ ಹಾಕಿ ಬಂಧಿಸಬೇಕು' ಎಂದು ಆಗ್ರಹಿಸಿದರು.
ಭಾರತೀಯ ಚುನಾವಣೆ ಆಯೋಗದವರು ಈ ಬಗ್ಗೆ ಕ್ರಮ ವಹಿಸಬೇಕು. ಪ್ರವೀಣ್ ಸೂದ್ ಬಂದು ಮೂರು ವರ್ಷ ಆಗಿದೆ, ಇನ್ನು ಎಷ್ಟು ದಿನ ಅವರನ್ನೇ ಇಟ್ಟುಕೊಂಡು ಕೂತಿರುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ಈ ಪೊಲೀಸರು ಬಿಜೆಪಿ ಸರ್ಕಾರವನ್ನು ರಕ್ಷಿಸುತ್ತಿದ್ದಾರೆ. ಕಾಂಗ್ರೆಸ್‌ನವರು ಪ್ರತಿಭಟನೆ, ಹೋರಾಟ ಮಾಡಲು ಬಿಡಲ್ಲ. ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ 25 ಪ್ರಕರಣ ದಾಖಲಿಸಿದ್ದಾರೆ. ಬಿಜೆಪಿಯವರ ಮೇಲೆ ಒಂದೇ ಒಂದು ಪ್ರಕರಣ ಸಹ ದಾಖಲಿಸಿಲ್ಲ. ಅನೈತಿಕವಾಗಿ ಬಿಜೆಪಿಯವರು ಹೇಳಿದಂತೆ ಕೇಳಿ ಕೊಂಡು ಕೆಲಸ ಮಾಡುವ ಪ್ರವೀಣ್ ಸೂದ್ ಸೇರಿದಂತೆ ಎಲ್ಲ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಈ ಎಲ್ಲ ಪೊಲೀಸರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಆಕ್ರೋಶ ಹೊರಹಾಕಿದರು.












Click it and Unblock the Notifications