DK Shivakumar: ಬೆಂಗಳೂರು ಅಭಿವೃದ್ಧಿಗೆ 3 ವರ್ಷದಿಂದ ಪ್ರಯತ್ನಿಸುತ್ತಿದ್ದೇವೆ, ಈ ಕೆಲಸ ಮಾಡಲಿದ್ದೇವೆ: ಡಿ.ಕೆ ಶಿವಕುಮಾರ್
DK Shivakumar: ಬೆಂಗಳೂರಿನಲ್ಲಿ ವಿಶ್ವದರ್ಜೆ ಪ್ರಗತಿ ಹಬ್ ಮಾಡಲು ಕಳೆದ ಮೂರು ವರ್ಷಗಳಿಂದ ಪ್ರಯತ್ನ ಮಾಡುತ್ತಲೇ ಇದ್ದೇವೆ. ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ಆರ್ಥಿಕ ಶಕ್ತಿ ನೀಡಿದ್ದೇವೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಬೆಂಗಳೂರನ್ನು ವಿಶ್ವದರ್ಜೆಯ ಪ್ರಗತಿಯ ಹಬ್ ಆಗಿ ಪರಿವರ್ತಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದಕ್ಕೆ ಅಗತ್ಯವಿರುವ ಆರ್ಥಿಕ ಮಾಸ್ಟರ್ ಪ್ಲಾನ್ ರೂಪಿಸಲು ಸುಸ್ಥಿರ ಉದ್ಯೋಗ ಮತ್ತು ಅಭಿವೃದ್ಧಿ ದತ್ತಿ (ISEG) ಸಂಸ್ಥೆಯೊಂದಿಗೆ ಉದ್ದೇಶ ಪತ್ರಕ್ಕೆ (Joint Statement of Intent) ಸಹಿ ಹಾಕಲಾಗಿದೆ.

ವಿಧಾನಸೌಧದಲ್ಲಿ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಹಾಗೂ ISEGಯ ನಿರ್ದೇಶಕ ಡಾ. ಶಿರೀಶ್ ಸಂಖೆರವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ಪರಸ್ಪರ ಸಹಿ ಹಾಕಿ ಪತ್ರ ವಿನಿಮಯ ಮಾಡಿಕೊಂಡರು. ಈ ಸಂದರ್ಭದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಒಡಂಬಡಿಕೆ ಉದ್ದೇಶದ ಬಗ್ಗೆ ವಿವರಿಸಿ, ಸಲಹೆ ಸೂಚನೆ ನೀಡಿದರು.
ಬೆಂಗಳೂರಿನಲ್ಲಿ ವಿಶ್ವದರ್ಜೆ ಪ್ರಗತಿ ಹಬ್ ಮಾಡಲು ಕಳೆದ ಮೂರು ವರ್ಷಗಳಿಂದ ಪ್ರಯತ್ನ ಮಾಡುತ್ತಲೇ ಇದ್ದೇವೆ. ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ಆರ್ಥಿಕ ಶಕ್ತಿ ನೀಡಿದ್ದೇವೆ. ಬೆಂಗಳೂರು ಮೆಟ್ರೋಪಾಲಿಟಿನ್ ಪ್ರದೇಶದಲ್ಲಿ ತಲಾದಾಯ 8.850 ಡಾಲರ್ ನಷ್ಟಿದೆ ಇದೆ.
ರಾಜ್ಯದ ಸರಾಸರಿಗಿಂತ ದುಪ್ಪಟ್ಟಿದೆ. 8 ಸಾವಿರ ಚದರ ಕಿ.ಮೀಗಿಂತ ಹೆಚ್ಚು ಪ್ರದೇಶದಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ದಕ್ಷಿಣ ಜಿಲ್ಲೆಗಳು ಹರಡಿದ್ದು, 1.6 ಬಿಲಿಯನ್ ಜನ ಇಲ್ಲಿದ್ದಾರೆ. ಭಾರತದ ಸಾಫ್ಟ್ವೇರ್ ರಫ್ತಿನಲ್ಲಿ 42% ಕೊಡುಗೆ ಬೆಂಗಳೂರು ನೀಡುತ್ತಿದೆ. ಬೆಂಗಳೂರು ನಗರಕ್ಕೆ 500 ವರ್ಷಗಳು ಪೂರ್ಣಗೊಳ್ಳುತ್ತಿದ್ದು, ಈ ಸಂದರ್ಭದಲ್ಲಿ 2032ರಿಂದ 2037ರ ಅವಧಿಯಲ್ಲಿ ಕೈಗೊಳ್ಳಬೇಕಾದ ಆರ್ಥಿಕ ಮಾಸ್ಟರ್ ಪ್ಲಾನ್ ಅನ್ನು ರೂಪಿಸಲು ಚಿಂತನೆ ನಡೆಸಿದ್ದೇವೆ. ಹೀಗಾಗಿ ಬೆಂಗಳೂರಿಗೆ ಹೊಸ ರೂಪ, ಶಕ್ತಿ ನೀಡಬೇಕು ಎಂದು ತೀರ್ಮಾನಿಸಿದ್ದೇವೆ ಎಂದಿದ್ದಾರೆ.
ಬೆಂಗಳೂರು ಟ್ರಾಫಿಕ್ ಜಾಮ್ ಸಮಸ್ಯೆ
ಎಲ್ಲಿ ಉದ್ಯೋಗ ಸೃಷ್ಟಿಸಬೇಕು, ಎಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕು, ಎಲ್ಲಿ ವಸತಿ ಯೋಜನೆಗಳನ್ನು ತರಬೇಕು, ಸಂಚಾರ ದಟ್ಟಣೆ ನಿವಾರಣೆಗೆ ಸಂಬಂಧಿಸಿದಂತೆ ನಕ್ಷ ರೂಪಿಸಲಾಗುವುದು. ದಶದ ಇತರೆ ನಗರಗಳಾದ ಮುಂಬೈ, ದೆಹಲಿ, ಕೋಲ್ಕತ್ತಾಗಳಲ್ಲಿ ಇಲ್ಲಿಗಿಂತ ಹೆಚ್ಚು ಸಂಚಾರ ದಟ್ಟಣೆ ನೋಡಿದ್ದೇನೆ. ನಾನು ಅವರನ್ನು ದೂರುತ್ತಿಲ್ಲ. ಈ ಸಮಸ್ಯೆಗೆ ಪರಿಹಾರ ಯಾವ ರೀತಿ ನೀಡಬೇಕು ಯೋಜನೆ ರೂಪಿಸಿದ್ದೇವೆ. ಸುಮಾರು 2 ಲಕ್ಷ ಕೋಟಿ ಮೌಲ್ಯದ ಯೋಜನೆ ರೂಪಿಸಿದ್ದು ಹಂತ ಹಂತವಾಗಿ ಇದನ್ನು ಕಾರ್ಯಗತಗೊಳಿಸಲಾಗುತ್ತಿದೆ ಎಂದು ವಿವರಿಸಿದರು.
ದತ್ತಾಂಶ ಆಧಾರಿತ ಆರ್ಥಿಕ ಮಾಸ್ಟರ್ ಪ್ಲಾನ್ ರೂಪಿಸಲು ಸೂಚಿಸಲಾಗುತ್ತಿದೆ. ಇದಕ್ಕೆ ನಮ್ಮ ಆರ್ಥಿಕ ಹೊರೆ ಇರುವುದಿಲ್ಲ. ಇಂಧನ, ಪಾಲಿಕೆ, ಜಲ, ನಗರಾಭಿವೃದ್ಧಿ, ಮಾಹಿತಿ ತಂತ್ರಜ್ಞಾನ, ಕೈಗಾರಿಕೆ ಕ್ಷೇತ್ರಗಳು ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಸಾರ್ವಜನಿಕರ ಅಭಿಪ್ರಾಯ, ಸಲಹೆ ಪಡೆಯಲಾಗುವುದು. ಬೆಂಗಳೂರನ್ನು ವಿಶ್ವದರ್ಜೆ ಪ್ರಗತಿ ಹಬ್ ಮಾಡಲು ಕೈಗೊಳ್ಳಲಾಗಿರುವ ತೀರ್ಮಾನಕ್ಕೆ ಹೊಸರೂಪ ನೀಡುತ್ತಿದ್ದೇವೆ. ಜಾಗತಿಕ ನಗರಗಳ ಜೊತೆ ಸ್ಪರ್ಧೆ ಮಾಡಲಾಗುತ್ತಿದೆ.
ನಮ್ಮ ಜತೆ ಒಡಂಬಡಿಕೆ ಮಾಡಿಕೊಳ್ಳಲು ಮುಂದೆ ಬಂದಿರುವ ಐಎಸ್ಇಜಿ ಫೌಂಡೇಷನ್ ಸಂಸ್ಥೆ ಮುಂಬೈ, ವಿಶಾಖಪಟ್ಟಣ, ಪುಣೆ, ವಾರಣಾಸಿಗಳಲ್ಲಿ ಈ ಯೋಜನೆ ರೂಪಿಸಿದ್ದಾರೆ. ಇವರಿಗೆ 4 ತಿಂಗಳ ಕಾಲಾವಕಾಶ ನೀಡಿದ್ದು, ಈ ಅವಧಿಯಲ್ಲಿ ಅವರು ನಕ್ಷೆ ರೂಪಿಸಲಿದ್ದಾರೆ. ಇವರಿಗೆ ಅಗತ್ಯವಿರುವ ಸಹಕಾರವನ್ನು ನೀಡಬೇಕು ಎಂದು ನಮ್ಮ ಅಧಿಕಾರಿಗಳಿಗೆ ಸೂಚಿಸುತ್ತಿದ್ದೇನೆ. ಬೆಂಗಳೂರಿನ ನಾಗರೀಕರು, ಡೆವಲಪರ್ ಗಳು, ಉದ್ದಿಮೆದಾರರು, ಶೈಕ್ಷಣಿಕ ಸಂಸ್ಥೆಗಳನ್ನು ವಿಶ್ವಾಸಕ್ಕೆ ಪಡೆದು ದೊಡ್ಡ ಮಾಸ್ಟರ್ ಪ್ಲಾನ್ ಸೃಷ್ಟಿಸಬೇಕು ಎಂದು ಹೇಳಿದ್ದಾರೆ.














Click it and Unblock the Notifications