ಯಡಿಯೂರಪ್ಪ ಮುಂದೆ ಕೆ. ಗೋಪಾಲಯ್ಯ ಇಟ್ಟ ಬೇಡಿಕೆ ಏನು?
ಬೆಂಗಳೂರು, ನವೆಂಬರ್ 04 : "ಉಪ ಚುನಾವಣೆ ಟಿಕೆಟ್ ನನಗೆ ಅಥವ ನನ್ನ ಪತ್ನಿಗೆ ನೀಡಬೇಕು" ಎಂದು ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಅನರ್ಹ ಶಾಸಕ ಕೆ. ಗೋಪಾಲಯ್ಯ ಬೇಡಿಕೆ ಇಟ್ಟಿದ್ದಾರೆ. ಡಿಸೆಂಬರ್ 5ರಂದು ಉಪ ಚುನಾವಣೆಗೆ ದಿನಾಂಕ ನಿಗದಿಯಾಗಿದೆ.
ಉಪ ಚುನಾವಣೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಿಜೆಪಿ ನಾಯಕರ ನಡುವೆಯೇ ಒಮ್ಮತವಿಲ್ಲ. ಇದರ ನಡುವೆಯೇ ಕೆ. ಗೋಪಾಲಯ್ಯ ಇಟ್ಟಿರುವ ಬೇಡಿಕೆ ಬೆಂಗಳೂರು ಬಿಜೆಪಿ ಘಟಕದಲ್ಲಿ ಅಸಮಾಧಾನಕ್ಕೆ ಕಾರಣವಾಗುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಯಡಿಯೂರಪ್ಪರನ್ನು ಡಾಲರ್ಸ್ ಕಾಲೋನಿ ನಿವಾಸದಲ್ಲಿ ಭೇಟಿ ಮಾಡಿದ ಕೆ. ಗೋಪಾಲಯ್ಯ, "ಉಪ ಚುನಾವಣೆ ಟಿಕೆಟ್ ನನಗೆ ಅಥವ ನನ್ನ ಪತ್ನಿಗೆ ನೀಡಬೇಕು" ಎಂದು ಬೇಡಿಕೆ ಇಟ್ಟಿದ್ದಾರೆ. ಹೇಮಲತಾ ಗೋಪಾಲಯ್ಯ ಬಿಬಿಎಂಪಿ ಸದಸ್ಯರಾಗಿದ್ದಾರೆ.
ಅನರ್ಹ ಶಾಸಕರು ಸ್ಫೀಕರ್ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಪೂರ್ಣಗೊಂಡಿದ್ದು, ತೀರ್ಪು ಕಾಯ್ದಿರಿಸಲಾಗಿದೆ. ಶಾಸಕರಿಗೆ ಚುನಾವಣಾ ಕಣಕ್ಕಿಳಿಯಲು ಅವಕಾಶ ಸಿಗಲಿದೆಯೇ? ಕಾದು ನೋಡಬೇಕಿದೆ.

ಕೆ. ಗೋಪಾಲಯ್ಯ ಬೇಡಿಕೆ
ಸುಪ್ರೀಂಕೋರ್ಟ್‌ನಲ್ಲಿ ಅನರ್ಹ ಶಾಸಕರ ಬಗ್ಗೆ ತೀರ್ಪು ಏನೇ ಬಂದರೂ ನಮ್ಮನ್ನು ಕೈ ಬಿಡಬಾರದು. ಉಪ ಚುನಾವಣೆಯಲ್ಲಿ ನನಗೆ ಅಥವ ನನ್ನ ಪತ್ನಿಗೆ ಟಿಕೆಟ್ ನೀಡಬೇಕು ಎಂದು ಅನರ್ಹ ಶಾಸಕ ಕೆ. ಗೋಪಾಲಯ್ಯ ಯಡಿಯೂರಪ್ಪ ಮುಂದೆ ಬೇಡಿಕೆ ಇಟ್ಟಿದ್ದಾರೆ.

ತನ್ನ ವಿರುದ್ಧ ಸಂಚು ರೂಪಿಸಲಾಗುತ್ತಿದೆ
ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ಬಿಜೆಪಿ ಮುಖಂಡರು ತನ್ನ ವಿರುದ್ಧ ಸಂಚು ರೂಪಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಜನರಿಗೆ ತಪ್ಪು ಸಂದೇಶ ರವಾನೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಕೆ. ಗೋಪಾಲಯ್ಯ ಯಡಿಯೂರಪ್ಪ ಬಳಿ ದೂರಿದ್ದಾರೆ.

ಸ್ಥಳೀಯ ನಾಯಕರಿಗೆ ಸೂಚನೆ ನೀಡಿ
ಕ್ಷೇತ್ರದಲ್ಲಿ ಉಪ ಚುನಾವಣೆ ವೇಳೆ ಒಡಕಿಗೆ ಅವಕಾಶ ಇಲ್ಲದಂತೆ, ಗೊಂದಲಗಳು ಆಗದಂತೆ ಸ್ಥಳೀಯ ಮುಖಂಡರಿಗೆ ಸೂಚನೆ ನೀಡಬೇಕು. ಕ್ಷೇತ್ರದ ಮತದಾರರಿಗೆ ನನ್ನ ಬಗ್ಗೆ ತಪ್ಪು ಸಂದೇಶ ರವಾನೆಯಾಗುವುದನ್ನು ನಿಯಂತ್ರಿಸಬೇಕು ಎಂದು ಮನವಿ ಮಾಡಿದ್ದಾರೆ.

ಉಪ ಚುನಾವಣೆ ಟಿಕೆಟ್ ಫೈಟ್
2018ರ ಚುನಾವಣೆಯಲ್ಲಿ ಕ್ಷೇತ್ರದಿಂದ ನೆ. ಲ. ನರೇಂದ್ರ ಬಾಬು ಬಿಜೆಪಿಯಿಂದ ಕಣಕ್ಕಿಳಿದಿದ್ದರು. 47, 118 ಮತಗಳನ್ನು ಪಡೆದು ಕೆ. ಗೋಪಾಲಯ್ಯ ವಿರುದ್ಧ ಸೋಲು ಕಂಡಿದ್ದರು. ಈಗ ಕೆ. ಗೋಪಾಲಯ್ಯಗೆ ಟಿಕೆಟ್ ನೀಡಲು ಸ್ಥಳೀಯ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.











Click it and Unblock the Notifications