ಡೆಂಗ್ಯೂ ಹೆಚ್ಚಳ: ಉಚಿತ ಡಯಾಲಿಸಿಸ್ ಕೇಂದ್ರ ಆರಂಭಿಸಲು ಸಚಿವರ ಸೂಚನೆ
ಬೆಂಗಳೂರು, ಜುಲೈ 19: ಬೆಂಗಳೂರಿನ ವಸಂತನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶೀಘ್ರ ಉಚಿತ ಡಯಾಲಿಸಿಸ್ ಕೇಂದ್ರ ಪ್ರಾರಂಭಿಸಲು ಆರೋಗ್ಯ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರಿನ ಪೂರ್ವ ವಲಯ ವ್ಯಾಪ್ತಿಯಲ್ಲಿ ಇಂದು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಸಂತನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಡಯಾಲಿಸಿಸ್ ಕೇಂದ್ರಕ್ಕೆಂದು ಸ್ಥಾಪಿಸಿರುವ ಕಟ್ಟಡದಲ್ಲಿ ಇನ್ನೂ ಡಯಾಲಿಸಿಸ್ ಕೇಂದ್ರ ಸ್ಥಾಪನೆಯಾಗಿಲ್ಲ.

ಈ ಸಂಬಂಧ ಸರ್ಕಾರಿ ಉಚಿತ ಡಯಾಲಿಸಿಸ್ ಸೇವೆ ಯೋಜನೆಯಡಿ, ಸದರಿ ಸ್ಥಳದಲ್ಲಿ ಡಯಾಲಿಸಿಸ್ ಸೇವೆ ಪ್ರಾರಂಭಿಸಬೇಕು. ಉಚಿತ ಡಯಾಲಿಸಿಸ್ ಸೇವೆ ಪ್ರಾರಂಭಿಸಿಸುವುದರಿಂದ ಇಲ್ಲಿನ ಸುತ್ತಮುತ್ತಲಿನ ಬಡವರ್ಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಅದಕ್ಕಾಗಿ ಅಗತ್ಯ ಉಪಕರಣಗಳ ವ್ಯವಸ್ಥೆ ಮಾಡಿಕೊಂಡು ತ್ವರಿತಗತಿಯಲ್ಲಿ ಕೇಂದ್ರವನ್ನು ಪ್ರಾರಂಭಿಸಬೇಕೆಂದು ಅವರು ಸೂಚಿಸಿದರು.
ವಸಂತನಗರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆರೋಗ್ಯ ಕೇಂದ್ರದ ಕಾರ್ಯವೈಖರಿಯನ್ನು ಪರಿಶೀಲಿಸಿದರು. ಪ್ರತಿನಿತ್ಯ ಎಷ್ಟು ಮಂದಿ ಆಸ್ಪತ್ರೆಗೆ ಭೇಟಿ ನೀಡುತ್ತಾರೆ, ಎಷ್ಟು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬಿತ್ಯಾದಿ ಮಾಹಿತಿ ಪಡೆದರು.

ಕೊಳಗೇರಿ ಪ್ರದೇಶದಲ್ಲಿ ಫೀವರ್ ಕ್ಲೀನಿಕ್
ಪೂರ್ವ ವಲಯದ ರಾಮಸ್ವಾಮಿ ಪಾಳ್ಯದ ಕೊಳಗೇರಿ ಪ್ರದೇಶದಲ್ಲಿ ಸ್ಥಾಪಿಸಿರುವ ಫೀವರ್ ಕ್ಲೀನಿಕ್ ಗೆ ಚಾಲನೆ ನೀಡಲಾಯಿತು. ಡೆಂಘೀ ಪ್ರಕರಣಗಳನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಹೆಚ್ಚು ಪ್ರಕರಣಗಳು ಕಂಡುಬರುವ ಕೊಳಗೇರಿ ಪ್ರದೇಶಗಳಲ್ಲಿ ಫೀವರ್ ಕ್ಲೀನಿಕ್ ಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ನಿರ್ದೇಶಿಸಿದರು.
ಸ್ವತಃ ಫಾಗಿಂಗ್ ಮಾಡಿದ ಸಚಿವರು
ರಾಮಸ್ವಾಮಿ ಪಾಳ್ಯದ ಕೊಳಗೇರಿ ಪ್ರದೇಶದ ರಸ್ತೆಗಳಲ್ಲಿ ಸೊಳ್ಳೆ ನಿಯಂತ್ರಣಕ್ಕಾಗಿ, ಆರೋಗ್ಯ ಸಚಿವರೇ ಸ್ವತ: ಪಾಗಿಂಗ್ ಮಾಡಿದರು. ಇದೇ ವೇಳೆ ಮನೆ ಮನೆ ಭೇಟಿ ನೀಡಿ ಬಿತ್ತಿ ಪತ್ರಗಳನ್ನು ವಿತರಿಸಿ, ನಾಗರೀಕರಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳಲು ಸೂಚನೆ ನೀಡಿದರು. ಸ್ವಚ್ಛ ನೀರಿನಿಂದ ಸೊಳ್ಳೆಗಳು ಉತ್ಪತ್ತಿಯಾಗಲಿದ್ದು, ನೀರನ್ನು ಶೇಖರಿಸಿಟ್ಟುಕೊಳ್ಳದೆ ಬದಲಾವಣೆ ಮಾಡುತ್ತಿರಬೇಕೆಂದು ಅರಿವು ಮೂಡಿಸಿದರು.
ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳಲ್ಲಿ ಅರಿವು
ಈ ಕೊಳಗೇರಿ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಡೀಟ್(Odomos) ಕ್ರೀಮ್ ವಿತರಿಸಿ ಕೈ ಮತ್ತು ಕಾಲುಗಳಿಗೆ ಹಚ್ಚಿಕೊಳ್ಳಲು ತಿಳಿಸಿದರು. ಅಲ್ಲದೆ ಡೆಂಘೀ ನಿಯಂತ್ರಣಕ್ಕಾಗಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಲು ನಿಮ್ಮ ಮನೆಯಲ್ಲಿ ಪೋಷಕರು ಹಾಗೂ ಸುತ್ತಮುತ್ತಲಿನ ಮನೆಯವರಲ್ಲಿ ಅರಿವು ಮೂಡಿಸಲು ವಿದ್ಯಾರ್ಥಿಗಳಲ್ಲಿ ತಿಳಿಸಿದರು.
2ಕ್ಕಿಂತ ಹೆಚ್ಚು ಡೆಂಘೀ ಕೇಸ್: ಹಾಟ್ ಸ್ಪಾಟ್
ಬೆಂಗಳೂರಿನಲ್ಲಿ 100 ಮೀಟರ್ ಪ್ರದೇಶದ ವ್ಯಾಪ್ತಿಯಲ್ಲಿ 2 ಕ್ಕಿಂತ ಹೆಚ್ಚು ಡೆಂಘೀ ಪ್ರಕರಣಗಳು ಕಂಡು ಬಂದರೆ ಅದನ್ನು ಹಾಟ್ ಸ್ಪಾಟ್ ಎಂದು ಗುರುತಿಸಬೇಕು. ಜೊತೆಗೆ 100 ಮೀಟರ್ ವ್ಯಾಪ್ತಿಯಲ್ಲಿ ಬರುವ ಮನೆಗಳಿಗೆ ಭೇಟಿ ನೀಡಿ ಫೀವರ್ ಪರೀಕ್ಷೆ, ಲಾರ್ವಾ ಸರ್ವೆ, ಫಾಗಿಂಗ್, ಸ್ಪ್ರೇ ಹಾಗೂ ಡೆಂಘೀ ಹರಡದಂತೆ ಮುಂಜಾಗ್ರತಾ ವಹಿಸಲು ಬಿತ್ತಿ ಪತ್ರಗಳನ್ನು ವಿತರಿಸಿ ಅರಿವು ಮೂಡಿಸಬೇಕು. ಇದಲ್ಲದೆ ಸೊಳ್ಳೆಗಳು ಕಚ್ಚದಂತೆ ಡೀಟ್(Odomos) ಕ್ರೀಮ್ ವಿತರಿಸಿ ಕೈ ಮತ್ತು ಕಾಲುಗಳಿಗೆ ಹಚ್ಚಿಕೊಳ್ಳಲು ತಿಳಿಸಬೇಕೆಂದು ಹೇಳಿದರು.
ನಗರದಲ್ಲಿ ಡೆಂಘೀ ತಡೆಗಟ್ಟಲು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸುಮಾರು 3161 ತಂಡಗಳಿಂದ 25 ಲಕ್ಷ ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಾಗುತ್ತಿದೆ. ನಗರದಲ್ಲಿ ಪ್ರತಿನಿತ್ಯ ಸರಾಸರಿ 130 ರಿಂದ 150 ಪ್ರಕರಣಗಳು ಕಂಡು ಬರುತ್ತಿವೆ.
ಈ ವೇಳೆ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ರಿಜ್ವಾನ್ ಹರ್ಷದ್, ಆರೋಗ್ಯ ಇಲಾಖೆಯ ಆಯುಕ್ತರಾದ ಡಿ. ರಂದೀಪ್, ರಾಷ್ಟರೀಯ ಆರೋಗ್ಯ ಮಿಷನ್ ನಿರ್ದೇಶಕರಾದ ಡಾ. ನವೀನ್ ಭಟ್, ಮುಖ್ಯ ಆರೋಗ್ಯಾಧಿಕಾರಿಗಳಾದ ಡಾ. ಸೈಯದ್ ಸಿರಾಜುದ್ದೀನ್ ಮದನಿ, ಡಾ. ನಿರ್ಮಲಾ ಬುಗ್ಗಿ, ಪಶ್ವಿಮ ವಲಯ ಆರೋಗ್ಯಾಧಿಕಾರಿಯಾದ ಡಾ. ಭಾಗ್ಯಲಕ್ಷ್ಮೀ, ಇನ್ನಿತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.












Click it and Unblock the Notifications