ಬಿಜೆಪಿ ಅವಧಿಯಲ್ಲಿ ಅತ್ಯಾಚಾರ ಆಗಿಲ್ಲವೇ: ಸಿಎಂ ಸಿದ್ದರಾಮಯ್ಯ
ಬೆಂಗಳೂರಿನಲ್ಲಿ ಮಹಿಳೆಯೊಬ್ಬರ ಮೇಲೆ ಸಮೂಹಿಕ ಅತ್ಯಾಚಾರವಾಗಿದ್ದು. ಈ ಬೆಳವಣಿಗೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ಹಾಗೂ ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಸರಿಪಡಿಸಬೇಕು ಹಾಗೂ ಬಿಗಿಯಾದ ಆಡಳಿತ ನೀತಿಯನ್ನು ಜಾರಿ ಮಾಡಬೇಕು ಎನ್ನುವ ಬೇಡಿಕೆಗಳ ನಡುವೆಯೇ ಸಿಎಂ ಸಿದ್ದರಾಮಯ್ಯ ಅವರು ಈ ವಿಚಾರವಾಗಿ ಮಾತನಾಡಿರುವ ಮಾತುಗಳಿಗೆ ಸಾರ್ವಜನಿಕ ವಲಯದಿಂದಲೂ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ವಿರೋಧ ಪಕ್ಷಗಳು ಸಹಜವಾಗಿಯೇ ಇದನ್ನು ಅಸ್ತ್ರವನ್ನಾಗಿಸಿಕೊಂಡಿವೆ. ಬೆಂಗಳೂರಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದು ಏನು, ಇದಕ್ಕೆ ವಿರೋಧ ವ್ಯಕ್ತವಾಗುತ್ತಿರುವುದು ಯಾಕೆ ಎನ್ನುವ ವಿವರ ಇಲ್ಲಿದೆ.
ಬೆಂಗಳೂರಿನ ಜನನಿಬಿಡ ಪ್ರದೇಶಗಳಲ್ಲಿ ಒಂದಾಗಿರುವ ಸಿಟಿ ಮಾರ್ಕೆಟ್ ಭಾಗದಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆದಿದ್ದು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾನಾಡಿವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟಿರುವ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ.

ಬೆಂಗಳೂರಿನಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಬಿಜೆಪಿ ಟೀಕೆ ಮಾಡುತ್ತಿದೆ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಯಾಕೆ ಬಿಜೆಪಿ ಅವರ ಕಾಲದಲ್ಲಿ ಅತ್ಯಾಚಾರ ಆಗಿಲ್ಲವಾ ಎಂದು ಪ್ರಶ್ನೆ ಮಾಡಿದ್ದಾರೆ. ಮುಂದುವರಿದು ರೇಪ್ ಆಗಬಾರದು, ಮಹಿಳೆಯರಿಗೆ ರಕ್ಷಣೆ ಸಿಗಬೇಕು. ಆದರೆ ಸಮಾಜದಲ್ಲಿ ಕೆಲವೊಂದು ಸಮಾಜಘಾತುಕ ಶಕ್ತಿಗಳು ಇಂತಹ ಕೆಲಸಗಳನ್ನೆಲ್ಲ ಮಾಡುತ್ತವೆ. ಈ ರೀತಿ ಮಾಡುವವರ ಮೇಲೆ ನಾವು ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಬಿ ವೈ ವಿಜಯೇಂದ್ರ ವಿರೋಧ
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅವರು ಕೊಟ್ಟಿರುವ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಕೆಂಡಾಮಂಡಲರಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಅತ್ಯಾಚಾರ ಘಟನೆಗಳು ನಡೆದಿವೆ ಎನ್ನುವ ನೆಪದಲ್ಲಿ ಈಗ ನಡೆದಿರುವ ಘಟನೆಗಳನ್ನು ಸಮರ್ಥಿಸಿಕೊಳ್ಳುತ್ತಿರುವ ಆಘಾತಕಾರಿ ಹೇಳಿಕೆಯನ್ನು ಕೇಳಿ ದಿಗ್ಭ್ರಮೆಗೊಂಡಿದ್ದೇನೆ ಎಂದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂವೇದನೆ ಕಳೆದುಕೊಂಡು ಹೇಳಿಕೆ ಕೊಡುತ್ತಿದ್ದಾರೆ . ಇದರಿಂದ ಅತ್ಯಾಚಾರ ಸಂತ್ರಸ್ತರಿಗೆ ಎಷ್ಟು ನೋವಾಗಿರಬಹುದು ಎಂದಿದ್ದಾರೆ. ಮಹಿಳೆಯರಿಗೆ ಹೆಚ್ಚಿನ ಭದ್ರತೆ ಹಾಗೂ ರಕ್ಷಣೆಯ ಭರವಸೆ ಕೊಡುವ ಬದಲು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಡೀ ಘಟನೆಯನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭುವನೇಶ್ವರಿ ದೇವಿಯ ಪವಿತ್ರ ವಾಸಸ್ಥಾನವೆಂದು ಪರಿಗಣಿಸುವ ಕರ್ನಾಟಕದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಹಲ್ಲೆಯಂತಹ ಪ್ರಕರಣಗಳು ಹೆಚ್ಚುತ್ತಿರುವುದು ಆಘಾತಕಾರಿ ಬೆಳವಣಿಗೆ ಎಂದಿದ್ದಾರೆ.
ಕ್ಷಮೆ ಕೇಳುವುದಕ್ಕೆ ಆಗ್ರಹ: ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ರೀತಿಯ ಹೇಳಿಕೆಗೆ ತಕ್ಷಣ ಕ್ಷಮೆಯಾಚಿಸಬೇಕು. ಈ ಘಟನೆಗೆ ಕಾರಣರಾದವರ ಮೇಲೆ ಕೂಡಲೇ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಅಲ್ಲದೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಮೊದಲಿನಂತೆ ಜಾರಿಮಾಡಬೇಕು ಅಂತ ಆಗ್ರಹಿಸಿದ್ದಾರೆ.
ಕ್ರೈಂ ಕರ್ನಾಟಕ: ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಕರ್ನಾಟಕದಲ್ಲಿ ಕ್ರೈಂ ಹೆಚ್ಚಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ. ಬೀದರ್‌ನಿಂದ ಚಾಮರಾಜನಗರವರೆಗೆ ಕರ್ನಾಟಕ ಫುಲ್ ಕ್ರೈಂಮಯವಾಗಿದೆ. ಭ್ರಷ್ಟ ಕಾಂಗ್ರೆಸ್ ಸರ್ಕಾರದ ಅರಾಜಕತೆಯ ಆಡಳಿತದ ಪರಿಣಾಮದಿಂದ ರಾಜ್ಯದೆಲ್ಲೆಡೆ ಕೊಲೆ-ಸುಲಿಗೆ-ದರೋಡೆ-ಅತ್ಯಾಚಾರಗಳು ನಡೆಯುತ್ತಿವೆ ಎಂದು ಬಿಜೆಪಿ ದೂರಿದೆ. ಅಲ್ಲದೆ ಇದೆನಾ ನಿಮ್ಮ ಕರ್ನಾಟಕ ಮಾಡೆಲ್ ಅಂತ ಪ್ರಶ್ನೆ ಮಾಡಿದೆ.












Click it and Unblock the Notifications