ಡಿ.ಕೆ ಶಿವಕುಮಾರ್ ಸೂಚನೆ ಬೆನ್ನಲ್ಲೇ ಬೆಂಗಳೂರಲ್ಲಿ ಅಭಿವೃದ್ಧಿ ಕಾರ್ಯ ಚುರುಕು!
ಬೆಂಗಳೂರಿನ ಸ್ವಚ್ಛತೆ, ರಸ್ತೆಗುಂಡಿ ಹಾಗೂ ಮೂಲಸೌಕರ್ಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆ ಆಗುತ್ತಿರುವಾಗಲೇ ಬೆಂಗಳೂರಿನಲ್ಲಿ ವಿವಿಧ ಕೆಲಸಗಳು ಚುರುಕು ಪಡೆದುಕೊಂಡಿವೆ. ಬೆಂಗಳೂರು ನಗರದಲ್ಲಿನ ರಸ್ತೆ ಗುಂಡಿ ಮುಚ್ಚುವ/ಪ್ಯಾಚ್ ವರ್ಕ್, ಡಾಂಬರೀಕರಣ ಹಾಗೂ ವೈಟ್ ಟಾಪಿಂಗ್ ರಸ್ತೆಗಳ ಪ್ರಗತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಆದೇಶ ಹಾಗೂ ಉಪಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ನೀಡಿದ ನಿರಂತರ ಸೂಚನೆಯ ಮೇರೆಗೆ ಬೆಂಗಳೂರು ನಗರ ಪಾಲಿಕೆಯ ಆಯುಕ್ತರಾದ ರಾಜೇಂದ್ರ ಚೋಳನ್ ಅವರು ದ್ವಿಚಕ್ರ (ಬೈಕ್) ವಾಹನದ ಮೂಲಕ ನಿರಂತರ ಸ್ಥಳ ತಪಾಸಣೆಗಳನ್ನು ನಡೆಸುತ್ತಿದ್ದಾರೆ ಎಂದು ಪಾಲಿಕೆಯ ಅಧಿಕಾರಿಗಳು ಹೇಳಿದ್ದಾರೆ.
ಈ ತಪಾಸಣೆ ಸಂದರ್ಭದಲ್ಲಿ ಹಾಳಾದ ರಸ್ತೆಗಳನ್ನು ಮುಖ್ಯ ಎಂಜಿನಿಯರರ ನೇತೃತ್ವದಲ್ಲಿ ತುರ್ತಾಗಿ ಅಭಿವೃದ್ಧಿಪಡಿಸಲು ಟಾಸ್ಕ್ ನೀಡಿದ್ದರ ಮೇರೆಗೆ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಮುತುವರ್ಜಿಯಿಂದ ನಿರ್ವಹಿಸುವ ಮೂಲಕ ಸಾರ್ವಜನಿಕ ಸಂಚಾರಕ್ಕೆ ಮೋಟಾರೆಬಲ್ ರಸ್ತೆಗಳನ್ನಾಗಿಸಲು ಕ್ರಮ ವಹಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಕಳೆದ 2 ದಿನಗಳಲ್ಲಿ ರಸ್ತೆ ಗುಂಡಿ/ಪ್ಯಾಚ್ ವರ್ಕ್ ಹಾಗೂ ಡಾಂಬರೀಕರಣ ಕಾಮಗಾರಿ ನಿರ್ವಹಿಸಿದ ರಸ್ತೆಗಳ ವಿವರ:
* ಹೊಸೂರು ರಸ್ತೆ
* ರಿಚ್ಮಂಡ್ ರಸ್ತೆ
* ಕಾರ್ನವೆಲ್ ರಸ್ತೆ
* ಅಲೆಕ್ಸಾಂಡರ್ ರಸ್ತೆ
* ಅಲಿ ಆಸ್ಕರ್ ರಸ್ತೆ
* ಡಿಕೆನ್ಸನ್ ರಸ್ತೆ
* ಕುಮಾರ ಕೃಪ ರಸ್ತೆ
* ಮೈಸೂರು ರಸ್ತೆ
* ಸುಂಕೇನಹಳ್ಳಿ ವಾರ್ಡ್ ವ್ಯಾಪ್ತಿಯ ರಸ್ತೆಗಳು
* ಓಲ್ಡ್ ಏರ್ ಪೋರ್ಟ್ ರಸ್ತೆ
ವೈಟ್ ಟಾಪಿಂಗ್ ಕಾಮಗಾರಿಯಲ್ಲಿ ಪ್ರಗತಿ: ಶಾಂತಿನಗರದ ಪಾಲ್ಮಗ್ರೋವ್ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿಯಲ್ಲಿ ಪ್ರಗತಿಯಲ್ಲಿದೆ. ಜೆ.ಸಿ. ರಸ್ತೆ ವೈಟ್ ಟಾಪಿಂಗ್ ಕಾಮಗಾರಿಯಲ್ಲಿ ಪ್ರಗತಿಯಲ್ಲಿದ್ದು, ಫ್ರೆಜರ್ ಟೌನ್ ವೈಟ್ ಟಾಪಿಂಗ್ ಕಾಮಗಾರಿಯಲ್ಲಿ ಪ್ರಗತಿ ಎಂದು ಹೇಳಲಾಗಿದೆ.
ಸಾಮೂಹಿಕ ಸ್ವಚ್ಛತಾ ಕಾರ್ಯ: ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ಅವರು ತಪಾಸಣೆ ಕೈಗೊಂಡ ಸಂದರ್ಭದಲ್ಲಿ ಬ್ಲಾಕ್ ಸ್ಪಾಟ್‌ಗಳು/ತ್ಯಾಜ್ಯ/ ಕಟ್ಟಡಗಳ ಅವಶೇಷಗಳು/ಅನುಪಯುಕ್ತ ವಸ್ತುಗಳು ಕಂಡಲ್ಲಿ ಅವುಗಳನ್ನು ಆ ತಕ್ಷಣವೇ ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತಿರುವ ಹಿನ್ನೆಲೆಯಲ್ಲಿ ಸ್ವಚ್ಛತೆ ಕಾರ್ಯವು ಸಹ ನಿರಂತರವಾಗಿ ನಡೆಯುತ್ತಿದ್ದು, ಇಂದು ರಿಚ್ಮಂಡ್ ರಸ್ತೆ ಹಾಗೂ ವಿಕ್ಟೋರಿಯಾ ರಸ್ತೆಗಳಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯ ನಡೆಸಲಾಯಿತು ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications