ಮೋದಿ ಜತೆ ಕೈಜೋಡಿಸುವ ಮಾತೇ ಇಲ್ಲ : ಗೌಡ
ಬೆಂಗಳೂರು, ಮೇ 14 : ಚುನಾವಣೋತ್ತರ ಸಮೀಕ್ಷೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ಜೆಡಿಎಸ್ ರಾಷ್ಟ್ರಾಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು, ಬಿಜೆಪಿ ನೇತೃತ್ವದ ಎನ್‌ಡಿಎಗಾಗಲಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗಾಗಲಿ ಬೆಂಬಲ ಕೊಡುವ ಪ್ರಮೇಯವೇ ಇಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದಾರೆ.
ತೃತೀಯ ರಂಗದ ಜೊತೆ ಕೈಜೋಡಿಸಿ, ಸರಕಾರ ರಚಿಸುವ ಕನಸು ಕಾಣುತ್ತಿದ್ದ ನವೀನ್ ಪಟ್ನಾಯಕ್ ಅವರ ಬಿಜು ಜನತಾದಳ ಮತ್ತು ಜಯಲಲಿತಾ ಅವರ ಎಐಎಡಿಎಂಕೆ ಪಕ್ಷಗಳು ಮೋದಿ ಜೊತೆ ಸೇರಿಕೊಳ್ಳುವ ಇಂಗಿತ ವ್ಯಕ್ತಪಡಿಸಿವೆ. ಆದರೆ, ತೃತೀಯ ರಂಗದ ಜೊತೆ ಗುರುತಿಸಿಕೊಂಡಿರುವ ದೇವೇಗೌಡ ಅವರು, ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬುಧವಾರ ಸ್ಪಷ್ಟಪಡಿಸಿದರು. [ರಾಜ್ಯದಲ್ಲಿ ಯಾರಿಗೆ ಗೆಲುವು, ಸೋಲು?]

ಹಾಸನ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿರುವ ಅವರು ಎಕ್ಸಿಟ್ ಪೋಲ್ ಬಗ್ಗೆ ಪ್ರತಿಕ್ರಿಯಿಸಿ, "ಈ ಸಮೀಕ್ಷೆಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಒಂದರಿಂದ ಮತ್ತೊಂದಕ್ಕೆ ಅವು ಬದಲಾಗುತ್ತವೆ. ಈ ಸಮೀಕ್ಷೆಗಳ ಸತ್ಯಾಸತ್ಯತೆಯ ಬಗ್ಗೆ ನನಗೆ ನಂಬಿಕೆಯೂ ಇಲ್ಲ. ಆದ್ದರಿಂದ, ಎನ್‌ಡಿಎ ಅಥವಾ ಮೋದಿಗೆ ಜೆಡಿಎಸ್ ಬೆಂಬಲ ನೀಡುತ್ತದಾ ಎಂಬ ಪ್ರಶ್ನೆಯೇ ಇಲ್ಲಿ ಅಪ್ರಸ್ತುತ" ಎಂದು ಸುದ್ದಿಗಾರರಿಗೆ ತಿಳಿಸಿದರು.
ಮತದಾನದ ನಂತರ ಹಲವಾರು ಏಜೆನ್ಸಿಗಳು ನಡೆಸಿರುವ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, ಎನ್‌ಡಿಎ ಸ್ಪಷ್ಟ ಬಹುಮತ ಗಳಿಸಲಿದೆ ಅಥವಾ ಅತ್ಯಧಿಕ ಸೀಟುಗಳನ್ನು ಗೆಲ್ಲಲಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ರಂಗದಲ್ಲಿ ಭಾರೀ ಬಿರುಸಿನ ಚಟುವಟಿಕೆಗಳು ನಡೆದಿವೆ. ತೃತೀಯ ರಂಗದ ಜೊತೆ ಗುರುತಿಸಿಕೊಂಡ ಕೆಲ ಪಕ್ಷಗಳು ಈಗ ತಮ್ಮ ನಿಲುವನ್ನು ಬದಲಿಸುತ್ತಿರುವುದು ಗೋಚರಿಸುತ್ತಿದೆ. [ಎಕ್ಸಿಟ್ ಪೋಲ್ ಸಮೀಕ್ಷೆಗಳ ಸಂಗ್ರಹ]
ಕೇಂದ್ರದಲ್ಲಿ ತೃತೀಯ ರಂಗವೇ ಸರಕಾರ ರಚಿಸುತ್ತದೆ ಎಂದು ಸಾರಿದ್ದ ಬಿಜೆಡಿ ಪಕ್ಷದ ನಾಯಕ ನವೀನ್ ಪಟ್ನಾಯಕ್ ಅವರು, ನರೇಂದ್ರ ಮೋದಿ ನಾಯಕತ್ವದ ಎನ್‌ಡಿಎ ಸರಕಾರ ರಚಿಸಿದರೆ ಬೆಂಬಲ ನೀಡುವುದಾಗಿ ಪ್ರಕಟಿಸಿದ್ದಾರೆ. ಆದರೆ, ಓರಿಸ್ಸಾ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದರೆ ಮಾತ್ರ ಬೆಂಬಲ ನೀಡುವುದಾಗಿಯೂ ಷರತ್ತನ್ನು ಒಡ್ಡಿದ್ದಾರೆ.
ಎಐಎಡಿಎಂಕೆ ಪಕ್ಷದ ನಾಯಕ ಕೆ. ಮಲೈಸ್ವಾಮಿ ಕೂಡ ಮೋದಿ ಪರ ಒಲವನ್ನು ಬಹಿರಂಗಪಡಿಸಿದ್ದು, ನರೇಂದ್ರ ಮೋದಿ ಮತ್ತು ಜಯಲಲಿತಾ ನಡುವೆ ರಾಜಕೀಯವಾಗಿ ಭಿನ್ನಾಭಿಪ್ರಾಯಗಳಿದ್ದರೂ, ಅವರಿಬ್ಬರೂ ಅತ್ಯುತ್ತಮ ಸ್ನೇಹಿತರಾಗಿದ್ದಾರೆ. ಒಂದು ವೇಳೆ ನರೇಂದ್ರ ಮೋದಿ ಪ್ರಧಾನಿಯಾದರೆ ಜಯಲಲಿತಾ ಅವರು ಎನ್‌ಡಿಎ ಜೊತೆ ಮೈತ್ರಿ ಬೆಳೆಸಲಿದ್ದಾರೆ ಎಂದಿದ್ದಾರೆ. ಇದಕ್ಕೆ ಜಯಲಲಿತಾ ಏನನ್ನುತ್ತಾರೋ?












Click it and Unblock the Notifications