8619 ಉದ್ಯೋಗ ಸೃಷ್ಟಿಸುವ 2750.55 ಕೋಟಿ ಮೊತ್ತದ ಯೋಜನೆಗಳಿಗೆ ಅನುಮೋದನೆ
ಬೆಂಗಳೂರು, ಸೆಪ್ಟೆಂಬರ್ 3: ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹಾಗೂ ಉದ್ಯಮಿದಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ಒಟ್ಟು 2750.55 ಕೋಟಿ ರುಪಾಯಿ ಮೊತ್ತದ 53 ಯೋಜನೆಗಳಿಗೆ ಅನುಮೋದನೆ ನೀಡಿದೆ.
ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ಶನಿವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಮುರುಗೇಶ್ ನಿರಾಣಿ ನೇತೃತ್ವದಲ್ಲಿ ನಡೆದ 134 ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಯಿತು.
ಒಟ್ಟು 53 ಯೋಜನೆಗಳಿಗೆ 2750.55 ಕೋಟಿ ರುಪಾಯಿ ಬಂಡವಾಳ ಹೂಡಿಕೆಯಾಗಲಿದ್ದು, ಇವುಗಳಿಂದ 8619 ಜನರಿಗೆ ಉದ್ಯೋಗವಕಾಶ ಲಭ್ಯವಾಗಲಿದೆ ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
50 ಕೋಟಿ ರುಪಾಯಿಗೂ ಹೆಚ್ಚು ಬಂಡವಾಳ ಹೂಡಿಕೆಯ ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇವುಗಳಿಂದ 1670.69 ಕೋಟಿ ರುಪಾಯಿ ಬಂಡವಾಳ ಹೂಡಿಕೆಯಾಗಲಿದ್ದು, ಸುಮಾರು 4000 ಜನರಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು.
ಇದೇ ರೀತಿ 15 ಕೋಟಿ ರುಪಾಯಿಗಳಿಂದ 50 ಕೋಟಿ ರುಪಾಯಿ ಒಳಗಿನ ಬಂಡವಾಳ ಹೂಡಿಕೆಯ 41 ಹೊಸ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳಿಗೆ 1062.01 ಕೋಟಿ ರುಪಾಯಿ ಬಂಡವಾಳ ಹೂಡಿಕೆಯಾಗಲಿದ್ದು ಅಂದಾಜು 4311 ಜನರಿಗೆ ಉದ್ಯೋಗಗಳು ಸೃಷ್ಟಿಯಾಗಲಿವೆ.
ಹೆಚ್ಚುವರಿ ಬಂಡವಾಳ ಹೂಡಿಕೆಯ 3 ಯೋಜನೆಗೆ ಅನುಮೋದನೆ ನೀಡಿದ್ದು, ಇದರಿಂದ 17.85 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದೆ. ಒಟ್ಟಾರೆ 53 ಯೋಜನೆಗಳಿಂದ 2750.55 ಕೋಟಿ ರುಪಾಯಿ ಬಂಡವಾಳ ಹೂಡಿಕೆಯಾಗಲಿದ್ದು, ಇವುಗಳಿಂದ 8619 ಜನರಿಗೆ ಉದ್ಯೋಗವಕಾಶ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಓ, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಹೂಡಿಕೆ ಮಾಡಲಿರುವ ಪ್ರಮುಖ ಉದ್ಯಮಗಳು
ಉಕೇಮ್ ಅಗ್ರೀ ಇನ್ಪಾ ಲಿಮಿಟೆಡ್ 497.95 ಕೋಟಿ ರುಪಾಯಿ ಹೂಡಿಕೆ ಮಾಡಲಿದ್ದು, 425 ಉದ್ಯೋಗಗಳನ್ನು ಸೃಷ್ಟಿಸಲಿದೆ. ಸುಂದರಿ ಶುಗರ್ಸ್ ಲಿಮಿಟೆಡ್ 402.24 ಕೋಟಿ ರುಪಾಯಿ ಹೂಡಿಕೆ ಮಾಡುತ್ತಿದ್ದು, ಹೊದಾಗಿ 270 ಉದ್ಯೋಗಗಳು ಸೃಷ್ಟಿಯಾಗಲಿವೆ.
ಎವರೆಸ್ಟ್ ಇಂಡಸ್ಟ್ರೀಸ್ ಲಿಮಿಟೆಡ್ 187 ಕೋಟಿ ರೂ. ಹೂಡಿಕೆ ಮಾಡಲಿದ್ದು 120 ಉದ್ಯೋಗಗಳನ್ನು ಸೃಷ್ಟಿಸಲಿದೆ. ಕೊಪ್ಪಳ ಟಾಯ್ಸ್ ಮೋಲ್ಡಿಂಗ್ ಕೋ ಪ್ರೈವೇಟ್ ಲಿಮಿಟೆಡ್ 131.94 ಕೋಟಿ ರುಪಾಯಿ ಹೂಡಿಕೆ ಮಾಡುತ್ತಿದ್ದು 800 ಉದ್ಯೋಗಗಳನ್ನು ಸೃಷ್ಟಿಸುತ್ತಿದೆ.
ಅಕ್ವೀಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ 118.27 ಕೋಟಿ ರೂ. ಹೂಡಿಕೆ ಮಾಡುತ್ತಿದ್ದು, 485 ಉದ್ಯೋಗಳು ಸೃಷ್ಟಿಯಾಗಲಿವೆ. ಕೆಆರ್ ಬಿಎಲ್ ಲಿಮಿಟೆಡ್ 110.25 ಕೋಟಿ ರುಪಾಯಿ ಹೂಡಿಕೆ ಮಾಡಲಿದ್ದು, 140 ಮಂದಿಗೆ ಕೆಲಸ ನೀಡಲಿದೆ.
ಅಕ್ವೀಸ್ ಟಾಯ್ಸ್ ಪ್ರೈವೇಟ್ ಲಿಮಿಟೆಡ್ ಡಿಟಿಎ ಯುನಿಟ್ 72.58 ಕೋಟಿ ರುಪಾಯಿ ಹೂಡಿಕೆಯೊಂದಿಗೆ 550 ಹೊಸ ಉದ್ಯೋಗಾವಕಾಶ ಸೃಷ್ಟಿಸುತ್ತಿದೆ. ಹೆಲ್ಲಾ ಇನ್ಫ್ರಾ ಮಾರ್ಕೆಟ್ ಪ್ರೈವೇಟ್ ಲಿಮಿಟೆಡ್ 71.66 ಕೋಟಿ ರುಪಾಯಿ ಹೂಡಿಕೆ ಮಾಡುತ್ತಿದ್ದು 1500 ಮಂದಿಗೆ ಉದ್ಯೋಗ ಅವಕಾಶ ಸಿಗಲಿದೆ. ಸಾವಿತ್ರಿ ಪ್ಲೈಬೋರ್ಡ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ 49.86 ಕೋಟಿ ರುಪಾಯಿ ಹೂಡಿಕೆ ಮಾಡುತ್ತಿದ್ದು 515 ಉದ್ಯೋಗಗಳನ್ನು ಸೃಷ್ಟಿಸುತ್ತಿದೆ.












Click it and Unblock the Notifications