Shobha Karandlaje: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಎಫ್‌ಐಆರ್
ಬೆಂಗಳೂರು, ಮಾರ್ಚ್ 21: ಕೇಂದ್ರ ಸಚಿವೆ ಹಾಗೂ ಉಡುಪಿ - ಚಿಕ್ಕಮಗಳೂರಿನ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಬೆಂಗಳೂರಿನ ಜಿಲ್ಲಾ ಚುನಾವಣಾಧಿಕಾರಿ ಅವರು ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮಾರ್ಚ್ 21ರ ಗುರುವಾರ ಎಫ್‌ಐಆರ್ ದಾಖಲಿಸಿದ್ದಾರೆ.
ನಗರದಲ್ಲಿ ನಡೆದ ಪ್ರತಿಭಟನೆಯ ವೇಳೆ ಸಚಿವೆ ಶೋಭಾ ಕರಂದ್ಲಾಜೆ ಅವರು ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತ ಆರೋಪಿ ಮತ್ತು ತಮಿಳುನಾಡನ್ನು ಹೊಂದಿಸಿ ಮಾತನಾಡಿದ್ದರು. ಹೀಗಾಗಿ ತಮಿಳುನಾಡಿನ ಆಡಳಿತ ಪಕ್ಷ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ಡಿಎಂಕೆ ದೂರಿನ ಮೇರೆಗೆ ಇಸಿಐ, ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಬೆಂಗಳೂರಿನ ಚುನಾವಣಾ ಅಧಿಕಾರಿಗೆ ಸೂಚಿಸಿತ್ತು. ಕೇಂದ್ರ ಸಚಿವೆ ವಿರುದ್ಧ ಜನತಾ ಪ್ರಾತಿನಿಧ್ಯ ಕಾಯ್ದೆಯ 23 (3ಎ), 125 ಮತ್ತು 123 (3) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
As per ECI direction, DEO Bangalore has filed an FIR against Ms. Shobha Karandlaje, Union Minister and MP u/s 123 (3A), 125 and 123 (3) of RP Act at Cottonpet Police Station of Bengaluru on 21.03.2024.
— Chief Electoral Officer, Karnataka (@ceo_karnataka) March 21, 2024
ಬೆಂಗಳೂರಿನಲ್ಲಿ ನಗರ್ತಪೇಟೆಯ ಅಂಗಡಿಯವರ ಮೇಲೆ ನಡೆದ ಹಲ್ಲೆಯ ವಿರುದ್ಧ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, "ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ತಮಿಳುನಾಡಿನಿಂದ ಬಂದವರು ಇಲ್ಲಿ ಬಾಂಬ್ ಇಡುತ್ತಾರೆ, ದೆಹಲಿಯ ಜನರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆಗಳನ್ನು ಕೂಗುತ್ತಾರೆ ಮತ್ತು ಕೇರಳದಿಂದ ಬಂದವರು ಆಸಿಡ್ ದಾಳಿಯಲ್ಲಿ ಭಾಗಿಯಾಗಿದ್ದಾರೆ" ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆದರೆ, ತೀವ್ರ ಆಕ್ಷೇಪ ವ್ಯಕ್ತವಾದ ಬಳಿಕ ತಮ್ಮ ಹೇಳಿಕೆ ವಾಪಸ್ ಪಡೆದು ಬೇಷರತ್ ಕ್ಷಮೆಯಾಚಿಸಿದರು.
ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಕೂಡ ಕೇಂದ್ರ ಸಚಿವರ ಮಾತನ್ನು ಖಂಡಿಸಿದ್ದು, ಚುನಾವಣಾ ಆಯೋಗ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಡಿಎಂಕೆ ಚುನಾವಣಾ ಆಯೋಗಕ್ಕೆ ಬರೆದ ದೂರಿನಲ್ಲಿ, "ಸಚಿವೆ ಶೋಭಾ ಕರಂದ್ಲಾಜೆ ತಮಿಳುನಾಡಿನಿಂದ ಬರುವ ಜನರು ಇಲ್ಲಿ ಬಾಂಬ್ ಇಡುತ್ತಾರೆ. ದೆಹಲಿಯ ಜನರು 'ಪಾಕಿಸ್ತಾನ್ ಜಿಂದಾಬಾದ್' ಘೋಷಣೆಗಳನ್ನು ಕೂಗುತ್ತಾರೆ ಮತ್ತು ಕೇರಳದಿಂದ ಬರುವ ಜನರು ಆಸಿಡ್ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ. ಈ ಹೇಳಿಕೆಯು ಕರ್ನಾಟಕ ಮತ್ತು ತಮಿಳುನಾಡಿನ ಜನರ ನಡುವೆ ದ್ವೇಷದ ಭಾವನೆಗಳನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ. ಇದು ತಮಿಳುನಾಡಿನ ಜನರನ್ನು ಭಯೋತ್ಪಾದಕರು ಎಂದು ಬಿಂಬಿಸಿದೆ. ಎರಡು ಸಮುದಾಯಗಳ ನಡುವೆ, ಅಂದರೆ ತಮಿಳಿಗರು ಮತ್ತು ಕನ್ನಡಿಗರ ನಡುವೆ ಹಗೆತನ ಮತ್ತು ದ್ವೇಷವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ" ಎಂದು ತಿಳಿಸಿತ್ತು. ಜೊತೆಗೆ ಪ್ರಜಾಪ್ರತಿನಿಧಿ ಕಾಯಿದೆ, 1951 ಸೆಕ್ಷನ್ ಅಡಿಯಲ್ಲಿ ಕ್ರಮ ಕೈಗೊಳ್ಳಲು ಒತ್ತಾಯಿಸಿತ್ತು.

ದೂರನ್ನು ಪರಿಗಣಿಸಿದ್ದ ಚುನಾವಣಾ ಆಯೋಗ "ಬಿಜೆಪಿ ನಾಯಕಿ ಮತ್ತು ಕೇಂದ್ರ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಕರ್ನಾಟಕದ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ ಎಂಸಿಸಿ ಉಲ್ಲಂಘನೆ ಆರೋಪದ ವಿರುದ್ಧ ಡಿಎಂಕೆ ದೂರಿನ ಕುರಿತು ತಕ್ಷಣ ಮತ್ತು ಸೂಕ್ತ ಕ್ರಮ ಕೈಗೊಳ್ಳುವಂತೆ ಇಸಿಐ ಸಿಇಒ ಕರ್ನಾಟಕಕ್ಕೆ ಸೂಚಿಸಿದೆ. 48 ಗಂಟೆಗಳ ಒಳಗೆ ಅನುಸರಣೆ ವರದಿ ನೀಡಬೇಕು" ಎಂದು ತಿಳಿಸಿತ್ತು.












Click it and Unblock the Notifications