ಬೆಂಗಳೂರು-ಮೈಸೂರು ನಡುವೆ ರಾತ್ರಿ ರೈಲು ಸಂಚಾರಕ್ಕೆ ಬೇಡಿಕೆ
ಬೆಂಗಳೂರು, ನವೆಂಬರ್ 08 : ಮೈಸೂರು-ಬೆಂಗಳೂರು ನಡುವೆ ರಾತ್ರಿ ರೈಲುಗಳ ಸಂಚಾರ ಆರಂಭಿಸಬೇಕು ಎಂದು ಬೇಡಿಕೆ ಇಡಲಾಗಿದೆ. ಉಭಯ ನಗರದ ನಡುವೆ ಜೋಡಿ ರೈಲು ಮಾರ್ಗ ನಿರ್ಮಾಣಗೊಂಡಿದ್ದು, ರೈಲು ಸೇವೆಯ ಗುಣಮಟ್ಟ ಏರಿಕೆಯಾಗಿದೆ.
ರಾತ್ರಿ 7 ರಿಂದ 11ರ ನಡುವೆ ಬೆಂಗಳೂರಿನಿಂದ ಮೈಸೂರಿಗೆ ಯಾವುದೇ ರೈಲುಗಳು ಸಂಚಾರ ನಡೆಸುತ್ತಿಲ್ಲ. ಆದ್ದರಿಂದ, ದುಬಾರಿ ದರ ನೀಡಿ ಬಸ್‌ಗಳಲ್ಲಿ ಸಂಚಾರ ನಡೆಸಬೇಕಿದೆ. ಇದರಿಂದಾಗಿ ರಾತ್ರಿ ರೈಲು ಸಂಚಾರ ಆರಂಭಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ.
ಪ್ರತಿನಿತ್ಯ ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಮಂಗಳೂರಿಗೆ ಸಂಚಾರ ನಡೆಸುತ್ತಿದ್ದ ಕಣ್ಣೂರು-ಕಾರವಾರ ಎಕ್ಸ್‌ಪ್ರೆಸ್ ರೈಲು ವಾರಕ್ಕೆ 2 ದಿನ ಮಾತ್ರ ಸಂಚಾರ ನಡೆಸುತ್ತಿದೆ. ಆದ್ದರಿಂದ, ಸಮಸ್ಯೆ ಎದುರಾಗಿದೆ.

ಸಂಜೆ 615ಕ್ಕೆ ಚಾಮುಂಡಿ ಎಕ್ಸ್‌ಪ್ರೆಸ್ ರೈಲು, ರಾತ್ರಿ 7ಕ್ಕೆ ಪ್ಯಾಸೆಂಜರ್ ರೈಲು ಬಿಟ್ಟರೆ ರಾತ್ರಿ 11ಕ್ಕೆ ಮತ್ತೊಂದು ಪ್ಯಾಸೆಂಜರ್ ರೈಲು ಇದೆ. 7 ರಿಂದ 11ರ ನಡುವೆ ಮತ್ತೊಂದು ರೈಲು ಓಡಿಸಬೇಕು ಎಂಬುದು ಬೇಡಿಕೆಯಾಗಿದೆ.
ರಾತ್ರಿ ರೈಲು ಸಂಚಾರ ಆರಂಭಿಸಬೇಕು ಎಂದು ನೈಋತ್ಯ ರೈಲ್ವೆಗೆ ಮೈಸೂರು ಗ್ರಾಹಕರ ಪರಿಷತ್, ವಿವಿಧ ಸಂಘ-ಸಂಸ್ಥೆಗಳು ಮನವಿ ಸಲ್ಲಿಸಿವೆ. ಚೆನ್ನೈ-ಬೆಂಗಳೂರು ನಡುವೆ ಸಂಚಾರ ನಡೆಸುತ್ತಿರುವ ಚೆನ್ನೈ-ಬೆಂಗಳೂರು ಇಂಟರ್ ಸಿಟಿ ರೈಲನ್ನು ಮೈಸೂರಿನ ತನಕ ವಿಸ್ತರಣೆ ಮಾಡಬೇಕು ಎಂದು ಗ್ರಾಹಕರ ಪರಿಷತ್ ಬೇಡಿಕೆ ಇಟ್ಟಿದೆ.
ಪ್ರತಿ ದಿನ ರಾತ್ರಿ 8ಕ್ಕೆ ಬೆಂಗಳೂರಿನಿಂದ ರಾಮನಗರಕ್ಕೆ ಮೆಮು ರೈಲು ಸಂಚಾರ ನಡೆಸುತ್ತದೆ. ಈ ರೈಲು ವಿದ್ಯುತ್ ಬಳಕೆ ಮಾಡಿಕೊಂಡು ಸಂಚರಿಸುತ್ತದೆ. ಈ ರೈಲನ್ನು ಮೈಸೂರಿನ ತನಕ ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಇಡಲಾಗಿದೆ.












Click it and Unblock the Notifications