ದೆಹಲಿ ಮಾದರಿಯಲ್ಲಿ ರಾಜ್ಯ ವಕೀಲರಿಗೆ ಆರೋಗ್ಯ ವಿಮೆ ಸೌಲಭ್ಯ
ಬೆಂಗಳೂರು, ಜು. 01: ರಾಜ್ಯದ ವಕೀಲರಿಗೆ ಸಂತಸದ ಸುದ್ದಿ. ದೆಹಲಿ ಮಾದರಿಯಲ್ಲಿ ರಾಜ್ಯದ ವಕೀಲರಿಗೂ ಜೀವ ವಿಮೆ ಮತ್ತು ಆರೋಗ್ಯ ವಿಮೆ ಸಿಗುವ ಕಾಲ ಸಮೀಪಿಸಿದೆ. ದೆಹಲಿ ಮಾದರಿಯಲ್ಲಿ ರಾಜ್ಯದ ವಕೀಲರಿಗೆ ಜೀವ ವಿಮೆ ಹಾಗೂ ಆರೋಗ್ಯ ವಿಮೆ ಯೋಜನೆಯನ್ನು ಪರಿಶೀಲಿಸಿ ಸರ್ಕಾರ ಪರಿಗಣಿಸಬಹುದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ನಡೆದಿರುವ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ದೆಹಲಿ ಮಾದರಿಯಲ್ಲಿ ರಾಜ್ಯದಲ್ಲೂ ವಕೀಲರಿಗೆ ಜೀವವಿಮೆ ಮತ್ತು ಆರೋಗ್ಯ ವಿಮೆ ಒದಗಿಸಲು ಸೂಕ್ತ ಯೋಜನೆ ರೂಪಿಸುವಂತೆ ಕರ್ನಾಟಕ ಹೈಕೋರ್ಟ್ ಈ ಹಿಂದೆ ಸೂಚಿಸಿತ್ತು. ಕೊರೊನಾ ಸಂದರ್ಭದಲ್ಲಿಯೂ ಜೀವ ಲೆಕ್ಕಿಸದೆ ಕೆಲಸ ಮಾಡುತ್ತಿರುವ ವಕೀಲರಿಗೆ ವಿಮೆ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಪತ್ರ ಬರೆದಿದ್ದರು. ಪತ್ರ ಆಧರಿಸಿ ಹೈಕೋರ್ಟ್ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿತ್ತು. ವಕೀಲರ ಸಂಘ, ಕರ್ನಾಟಕ ವಕೀಲರ ಪರಿಷತ್ ಪದಾಧಿಕಾರಿಗಳು ಮತ್ತು ವಿಮಾ ಕಂಪೆನಿಗಳೊಂದಿಗೆ ಸಭೆ ನಡೆಸಿ ಅಭಿಪ್ರಾಯ ಆಧರಿಸಿ ವಕೀಲರಿಗೆ ಜೀವ ವಿಮೆ ಹಾಗೂ ಆರೋಗ್ಯ ವಿಮೆ ಒದಗಿಸುವ ಸಂಬಂಧ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಸೂಚಿಸಲಾಗಿತ್ತು.'

Recommended Video
ನ್ಯಾಯಾಲಯ ಆದೇಶದ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್, ಸುರಕ್ಷ ಆರೋಗ್ಯ ಟ್ರಸ್ಟ್, ನ್ಯೂ ಇಂಡಿಯಾ ಅಶೂರೆನ್ಸ್ ಇಂಡಿಯಾ ಒದಗಿಸಿರುವ ಪಾಲಿಸಿಗಳ ಬಗ್ಗೆ ವಿವರಣೆ ನೀಡಿದ್ದರು. ದೆಹಲಿಯಲ್ಲಿ ವಕೀಲರಿಗೆ ಕಲ್ಪಿಸಿರುವ ವಿಮಾ ಸೌಲಭ್ಯದಿಂಧ 23 ಸಾವಿರ ವಕೀಲರು ಸೌಲಭ್ಯ ಪಡೆದುಕೊಂಡಿದ್ದು, ರಾಜ್ಯದಲ್ಲಿ ಒಂದು ಲಕ್ಷ ವಕೀಲರು ಇರುವ ಬಗ್ಗೆ ವಿವರಣೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯದಲ್ಲೂ ವಕೀಲರಿಗೆ ದೆಹಲಿ ಮಾದರಿಯಲ್ಲಿ ಜೀವ ವಿಮೆ ಮತ್ತು ಆರೋಗ್ಯ ವಿಮೆ ಸೌಲಭ್ಯ ವಿಸ್ತರಣೆ ಮಾಡುವ ನಿರ್ಧಾರ ತೆಗೆದುಕೊಳ್ಳಬಹುದು ಎಂದು ತೀರ್ಮಾನಿಸಲಾಗಿದೆ ಎಂದು ವಕೀಲ ಸಂಘದ ಮೂಲಗಳು ಸ್ಪಷ್ಟಪಡಿಸಿವ.












Click it and Unblock the Notifications