ಸಾಲದ ಸುಳಿಯಲ್ಲಿ ಬಿಎಂಟಿಸಿ: ಶಾಂತಿನಗರ ಬಸ್ ನಿಲ್ದಾಣ ಅಡಮಾನ
ಬೆಂಗಳೂರು, ಏಪ್ರಿಲ್ 27: ದೇಶದಲ್ಲೇ ಪ್ರತಿಷ್ಟಿತ ಸಾರಿಗೆ ಸಂಸ್ಥೆಗಳಲ್ಲಿ ಬಿಎಂಟಿಸಿ ಸಹ ಒಂದು. ಆದರೆ ಈ ಬಿಎಂಟಿಸಿ ಸಾರಿಗೆ ಸಂಸ್ಥೆ ಈಗ ಕೋಟ್ಯಂತರ ರೂಪಾಯಿ ಸಾಲದಲ್ಲಿ ಸಿಲುಕಿದೆ. ಮೇಲಿಂದ ಮೇಲೆ ನಷ್ಟ ಹೊಂದುತ್ತಲೇ ಇದ್ದು ಲಾಭಕ್ಕೆ ಮರಳಿ ಬಾರದಷ್ಟು ಸಾಲದ ಹೊರೆ ಹೊತ್ತುಕೊಂಡಿದೆ. ಸಾಲದ ಶೂಲದಲ್ಲಿ ಸಿಲುಕಲು ಬಿಎಂಟಿಸಿ ತನ್ನ ಬಸ್ ನಿಲ್ದಾಣವನ್ನೇ ಅಡಮಾನವಿಟ್ಟಿದೆ.
ಆರ್‌ಟಿಐ ಕಾರ್ಯಕರ್ತ ಸಿದ್ದರಾಮಾರಾಧ್ಯ ಎಂಬುವವರು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ದಾಖೆಲೆಯಿಂದಾಗಿ ಬಿಎಂಟಿಸಿಯ ಸಾಲಹೊರೆ ಎಷ್ಟು ಎಂಬುದು ಪತ್ತೆಯಾಗಿದೆ.
994 ಕೋಟಿ ಸಾಲ ಮಾಡಿರುವ ಬಿಎಂಟಿಸಿ..!
ಬಿಎಂಟಿಸಿ, ಇದು ಬೆಂಗಳೂರಿನ ಅದೆಷ್ಟೋ ಜನರ ಜೀವನಾಡಿ. ಒಂದು ದಿನ ಬೆಂಗಳೂರಿನಲ್ಲಿ ಬಸ್ ನಿಂತುಕೊಂಡರೆ ಬೆಂಗಳೂರಿನ ಜನಜೀವನವೇ ಅಸ್ತವ್ಯಸ್ತ ವಾಗುತ್ತದೆ. ಆದರೆ ಇಂತಹ ನಿಗಮವೇ ದಯನೀಯ ಪರಿಸ್ಥಿತಿಗೆ ಬಂದು ನಿಂತುಕೊಂಡಿದೆ. ಲಾಭದ ಹಳಿಗೆ ಬಾರದಷ್ಟು ಬಹುದೂರ ಹೋಗಿದ್ದು, ನಷ್ಟದಿಂದ ಪಾರಾಗಲು ನೂರಾರು ಕೋಟಿ ಸಾಲ ಪಡೆದು ಬಡ್ಡಿ ಕಟ್ಟೋಕೆ ಆಗದೆ ಹೆಣಗಾಡುತ್ತಿದೆ. ಆಡಳಿತ ವೈಫಲ್ಯ ಹಾಗೂ ದುಂದುವೆಚ್ಚಕ್ಕೆ ನಿಯಂತ್ರಣ ಹಾಕಲು ಸಾಧ್ಯವಾಗದೇ ಇರುವುದರಿಂದ ನಿಗಮ ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿದೆ.

ಕಳೆದ ಹಲವು ವರ್ಷಗಳಿಂದ ಸಾಲದ ಸುಳಿಯಲ್ಲಿ ಸಿಲುಕಿ ನಲುಗುತ್ತಿದೆ. ಅದನ್ನ ಮೇಲಕ್ಕೆತ್ತಲು ಸಾಧ್ಯವಾಗದ ಸ್ಥಿತಿಯಲ್ಲಿದೆ ಸರ್ಕಾರ. ಬಿಎಂಟಿಸಿ ಇಂತಹ ದಯನೀಯ ಪರಿಸ್ಥಿತಿಗೆ ನಿಜವಾದ ಕಾರಣ ಯಾರು ಅನ್ನುವ ಪ್ರಶ್ನೆಗೆ ನಿಗಮದ ಅಧಿಕಾರಿಗಳು, ಸಾರಿಗೆ ಸಚಿವರೇ ಉತ್ತರ ನೀಡಬೇಕಿದೆ. BMTC ಇತಿಹಾಸದಲ್ಲೇ ಅತ್ಯಧಿಕ ಸಾಲ ಪಡೆದಿದ್ದು 2017 ರಿಂದ 2022 ಮಾರ್ಚ್‌ವರಿಗೆ ಬರೋಬ್ಬರಿ 994 ಕೋಟಿ ಸಾಲ ಪಡೆದಿದೆ.

ಬಿಎಂಟಿಸಿ ಯಾವೆಲ್ಲಾ ವರ್ಷದಲ್ಲಿ ಎಷ್ಟೆಷ್ಟು ಸಾಲ ಮಾಡಿದೆ..?
ವರ್ಷ - ಕೋಟಿ - ಬ್ಯಾಂಕ್
*2017-100 ಕೋಟಿ- ಕೆನರಾ ಬ್ಯಾಂಕ್ ನಿಂದ ಸಾಲ
*2018 - 125 ಕೋಟಿ KUIDFC ಬ್ಯಾಂಕ್ ನಿಂದ ಸಾಲ
*2019- 95 ಕೋಟಿ ಕೆನರಾ ಬ್ಯಾಂಕ್ ನಿಂದ ಸಾಲ
*2019-2020-160 ಕೋಟಿ ಸಾಲ
*2020-21- 407 ಕೋಟಿ ಸಾಲ
*2022- ಮಾರ್ಚ್ 183 ಕೋಟಿ KUIDFC ಸಾಲ ಪಡೆಯಲಾಗಿದ್ದು ಒಟ್ಟು = 994 ಕೋಟಿ ರೂಪಾಯಿ ಸಾಲ ಮಾಡಿದೆ.
ಸಾಲ ಸಾಲದ ಮೇಲಿನ ಬಡ್ಡಿ ಹೀಗೆ ಏಕಾಏಕಿ ಸಾಲವನ್ನು ಪಡೆಯದೆ ಹಂತಹಂತವಾಗಿ ಸಾಲವನ್ನು ಪಡೆದು 994 ಕೋಟಿ ಸಾಲವನ್ನು ಪಡೆಯುವ ಮೂಲಕ ಬಿಎಂಟಿಸಿ ತನ್ನ ದಿವಾಳಿತವನ್ನು ಜಗಜ್ಜಾಹೀರು ಮಾಡಿದೆ.

ಬಿಂಎಂಟಿಸಿ ಉಪಾಧ್ಯಕ್ಷ ಎಂ.ಆರ್. ವೆಂಕಟೇಶ್ ಹೇಳೋದೇನು..?
ಬಿಎಂಟಿಸಿ ಸಾಲದ ಸುಳಿಯಲ್ಲಿ ಸಿಲುಕಿರುವುದರ ಸಂಬಂಧ, ಬಿಎಂಟಿಸಿ ಉಪಾಧ್ಯಕ್ಷರನ್ನ ಏನ್ ಸರ್ ನಿಮ್ಮ ಅವಧಿಯಲ್ಲಿ ಹೆಚ್ಚು ಸಾಲ ಮಾಡಿದ್ದೀರಾ ಅಂತ ಪ್ರಶ್ನೆ ಮಾಡಿದಾಗ ""ಸಾಲ ಪಡೆಯುವುದು ತೀರಾ ಅನಿವಾರ್ಯವಾಗಿದೆ. ಟಿಕೆಟ್ ದರ ಸಹ ಹೆಚ್ಚಳ ಮಾಡಿಲ್ಲ, ಸಿಬ್ಬಂದಿಗಳ ವೇತನ, ಡಿಸೇಲ್ ಖರ್ಚು ಹೊಸ ಬಸ್ ನಿರ್ವಹಣೆ ಅನಿವಾರ್ಯ ಈ ಕಾರಣಗಳಿಂದ ಸಾಲದ ಮೊರೆ ಹೋಗಲಾಗಿದೆ'' ಎಂದು ಉತ್ತರಿಸುತ್ತಾರೆ.
ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣ ಅಡಮಾನ..!
ಬಿಎಂಟಿಸಿಗೆ ಸುಖಾಸುಮ್ಮನೆ ಬ್ಯಾಂಕ್ ಸಾಲ ನೀಡಲು ಸಾಧ್ಯವೇ. ಬಿಎಂಟಿಸಿ 300 ಕೋಟಿಗೂ ಅಧಿಕ ಸಾಲವನ್ನು ಪಡೆಯಲು ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣನ್ನು ಅಡಮಾನ ಇಡಲಾಗಿದೆ.
ಬಿಎಂಟಿಸಿ ನಿಗಮದ ಆಡಳಿತ ವೈಫಲ್ಯ, ನಿಯಂತ್ರಣಕ್ಕೆ ಬಾರದ ಅಕ್ರಮಗಳಿಂದ ನಿಗಮ ದಿವಾಳಿಯಾಗಿದ್ದು 2013 ರಿಂದಲೂ ಆರ್ಥಿಕವಾಗಿ ಚೇತರಿಕೆ ಕಾಣುತ್ತಿಲ್ಲ. ಇದರಿಂದ ಪಾರಾಗಲು ಕೋಟಿ ಕೋಟಿ ಸಾಲ ಪಡೆದು ಮರುಪಾವತಿಸಲು ಹೆಣಗಾಡುತ್ತಿದೆ. ನಿಗಮ ಹೀಗೆ ಸಾಲ ಮಾಡಿದರೆ ಮುಂದೊಂದು ದಿನ ಬಿಎಂಟಿಸಿಗೆ ಬೀಗ ಹಾಕುವ ಸ್ಥಿತಿ ನಿರ್ಮಾಣವಾಗಬಹುದು.












Click it and Unblock the Notifications