ಬೆಂಗಳೂರಿನ 75 ಜಂಕ್ಷನ್‌ಗಳ ಕಾಮಗಾರಿಗೆ ಡೆಡ್‌ಲೈನ್: ಮಹೇಶ್ವರ್ ರಾವ್
ಬೆಂಗಳೂರಿನ ಪ್ರಮುಖ 75 ಜಂಕ್ಷನ್‌ಗಳ ಅಭಿವೃದ್ಧಿಗೆ ಡೆಡ್‌ಲೈನ್ ನಿಗದಿ ಮಾಡಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸುರಕ್ಷಾ 75 ಜಂಕ್ಷನ್‌ಗಳ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದಲ್ಲಿ ಸುರಕ್ಷಾ 75 ಜಂಕ್ಷನ್‌ಗಳ ಅಭಿವೃದ್ಧಿ ಕಾರ್ಯಕ್ಕೆ ಸಂಬಂಧಿಸಿದಂತೆ ಇಂದು ನಡೆದ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಭಿವೃದ್ಧಿ ಕೈಗೊಳ್ಳಬೇಕಿರುವ ಜಂಕ್ಷನ್‌ಗಳಿಗೆ ಮುಖ್ಯ ಎಂಜಿನಿಯರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಪ್ರಸ್ತುತ ಇರುವ ವಿನ್ಯಾಸದಲ್ಲಿ ಯಾವುದೇ ಮಾರ್ಪಾಡು ಅಗತ್ಯವಿದ್ದರೆ ಅದನ್ನು ತಕ್ಷಣ ಪರಿಷ್ಕರಿಸಿ, ತ್ವರಿತವಾಗಿ ಕೆಲಸ ಪ್ರಾರಂಭಿಸಿ ಶೀಘ್ರದಲ್ಲಿ ಪೂರ್ಣಗೊಳಿಸಲು ಸೂಚಿಸಿದ್ದಾರೆ.

ಆಯಾ ನಗರ ಪಾಲಿಕೆಗಳಲ್ಲಿ ಕೈಗೆತ್ತಿಕೊಳ್ಳಲಾಗಿರುವ ಜಂಕ್ಷನ್‌ಗಳ ಅಭಿವೃದ್ಧಿ ಬಗ್ಗೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು. ನಿರಂತರ ಮೇಲ್ವಿಚಾರಣೆ ನಡೆಸಿ, ಪಾಲಿಕೆವಾರು ಪರಿಶೀಲನಾ ಸಭೆಗಳನ್ನು ಆಯೋಜಿಸಿ, ಪ್ರಗತಿ ವರದಿಯನ್ನು ಕಾಲಕಾಲಕ್ಕೆ ಸಲ್ಲಿಸಲು ಸೂಚನೆ ನೀಡಿದ್ದಾರೆ.
ಪಾಲಿಕೆವಾರು ಜಂಕ್ಷನ್‌ಗಳ ಸ್ಥಿತಿ:
ದಕ್ಷಿಣ ನಗರ ಪಾಲಿಕೆ: 10 ಜಂಕ್ಷನ್‌ಗಳ ಪೈಕಿ 8 ಕಡೆ ಕೆಲಸ ಪ್ರಗತಿಯಲ್ಲಿದ್ದು, 2 ಕಡೆ ಕಾರ್ಯಾದೇಶ ನೀಡಲಾಗಿದೆ.
ಕೇಂದ್ರ ನಗರ ಪಾಲಿಕೆ: 18 ಜಂಕ್ಷನ್‌ಗಳ ಪೈಕಿ 4 ಕಡೆ ಕೆಲಸ ಪ್ರಗತಿಯಲ್ಲಿದ್ದು, 14 ಕಡೆ ಕಾರ್ಯಾದೇಶ ನೀಡಲಾಗಿದೆ.
ಉತ್ತರ ನಗರ ಪಾಲಿಕೆ: 11 ಜಂಕ್ಷನ್‌ಗಳ ಪೈಕಿ 6 ಕಡೆ ಕೆಲಸ ಪ್ರಗತಿಯಲ್ಲಿದ್ದು, 5 ಕಡೆ ಕಾರ್ಯಾದೇಶ ನೀಡಲಾಗಿದೆ.
ಪಶ್ಚಿಮ ನಗರ ಪಾಲಿಕೆ: 15 ಜಂಕ್ಷನ್‌ಗಳ ಪೈಕಿ 5 ಕಡೆ ಕೆಲಸ ಪ್ರಗತಿಯಲ್ಲಿದ್ದು, 10 ಕಡೆ ಕಾರ್ಯಾದೇಶ ನೀಡಲಾಗಿದೆ.
ಪೂರ್ವ ನಗರ ಪಾಲಿಕೆ: 9 ಜಂಕ್ಷನ್‌ಗಳ ಪೈಕಿ 4 ಕಡೆ ಕೆಲಸ ಪ್ರಗತಿಯಲ್ಲಿದ್ದು, 5 ಕಡೆ ಕಾರ್ಯಾದೇಶ ನೀಡಲಾಗಿದೆ.
ಅಭಿವೃದ್ಧಿಪಡಿಸುತ್ತಿರುವ ಜಂಕ್ಷನ್‌ಗಳು: ಹಡ್ಸನ್ ವೃತ್ತ, ಎನ್.ಆರ್. ಚೌಕ, ಹಡ್ಸನ್ ಸರ್ಕಲ್, ಡೈರಿ ವೃತ್ತ, ಗುಬ್ಬಿ ತೋಟದಪ್ಪ ವೃತ್ತ, ಗಾಲ್ಫ್ ಕ್ಲಬ್, ಕೆ.ಹೆಚ್. ವೃತ್ತ, ರಾಜೀವ್ ಗಾಂಧಿ ವೃತ್ತ, ಬ್ರಿಗೇಡ್ ವೃತ್ತ, ಅಶೋಕ ಪಿಲ್ಲರ್ ವೃತ್ತ, ಗುಟ್ಟಹಳ್ಳಿ ವೃತ್ತ, ಟೌನ್ ಹಾಲ್, ಮೇಯೊ ಹಾಲ್, ನೆಹರು ವೃತ್ತ ಹಾಗೂ ಉಪ್ಪಾರಪೇಟೆ ವೃತ್ತಗಳಲ್ಲಿ ಜಂಕ್ಷನ್‌ಗಳ ಅಭಿವೃದ್ಧಿ ಕಾರ್ಯಗಳು ಬಹುತೇಖ ಪೂರ್ಣಗೊಂಡಿದ್ದು, ಬಾಕಿ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಸೂಚಿಸಿದ್ದಾರೆ.
ಸ್ಕೈವಾಕ್‌ಗಳ ಲಿಫ್ಟ್‌ಗಳ ತುರ್ತು ದುರಸ್ಥಿಗೆ ಸೂಚನೆ: ಜಿಬಿಎ ವ್ಯಾಪ್ತಿಯಲ್ಲಿರುವ ಸ್ಕೈವಾಕ್‌ಗಳ ಪೈಕಿ ಎಲ್ಲಿ ಎಲ್ಲಿ ಲಿಫ್ಟ್‌ಗಳಿವೆ ಎಂಬುದರ ಪಟ್ಟಿ ತಯಾರಿಸಲು ಹಾಗೂ ಎಷ್ಟು ಲಿಫ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಎಷ್ಟು ಸ್ಥಗಿತವಾಗಿವೆ ಎಂಬುದನ್ನು ಪರಿಶೀಲಿಸುವಂತೆ ಸೂಚಿಸಿದರು. ಕಾರ್ಯನಿರ್ವಹಿಸದ ಲಿಫ್ಟ್‌ಗಳನ್ನು ತಕ್ಷಣ ದುರಸ್ಥಿ ಮಾಡಲು ನಿರ್ದೇಶಿಸಿದ್ದಾರೆ.
ಎಲ್.ಇ.ಡಿ. ಬೀದಿ ದೀಪಗಳ ಅಳವಡಿಕೆ: ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ 4 ಪ್ಯಾಕೇಜ್‌ಗಳ ಮೂಲಕ ಎಲ್.ಇ.ಡಿ ಬೀದಿ ದೀಪಗಳನ್ನು ಅಳವಡಿಸಲು ಟೆಂಡರ್ ಕರೆಯಲಾಗಿದೆ. ಈ ಕಾರ್ಯಕ್ಕೆ ವೇಗ ನೀಡಬೇಕು ಎಂದು ಆಯುಕ್ತರು ಹೇಳಿದ್ದಾರೆ. ಪ್ರತಿದಿನ ನಿರ್ದಿಷ್ಟ ಗುರಿ ನಿಗದಿಪಡಿಸಿ, ಪೂರ್ಣಗೊಂಡ ಕಾರ್ಯಗಳ ದಿನನಿತ್ಯ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ನಗರ ಪಾಲಿಕೆಗಳಲ್ಲಿ ಪೊಲೀಸ್ ಇಲಾಖೆ ಗುರುತಿಸಿದ ಬೀದಿ ದೀಪಗಳಿಲ್ಲದ ಸ್ಥಳಗಳ ಪಟ್ಟಿಯನ್ನು ನೀಡಿ, ಅಲ್ಲಿಗೆ ಕೂಡಲೇ ದೀಪಗಳನ್ನು ಅಳವಡಿಸಲು ಸೂಚನೆ ನೀಡಿದರು. ಸಭೆಯಲ್ಲಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್ ಹಾಗೂ ದಿಗ್ವಿಜಯ್ ಬೋಡ್ಕೆ ಸೇರಿದಂತೆ ಹಲವರು ಹಾಜರಿದ್ದರು.












Click it and Unblock the Notifications