Adani Group: 'ವಂದೇ ಭಾರತಂ' ಅಭಿಯಾನಕ್ಕೆ ಚಾಲನೆ ನೀಡಿದ ಗೌತಮ್ ಅದಾನಿ, ಉದ್ದೇಶದ ವಿವರ ಇಲ್ಲಿದೆ
Adani Group: ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಅವರು ತಮ್ಮ 64ನೇ ಜನ್ಮದಿನದ ಅಂಗವಾಗಿ ಗುರುವಾರ 'ವಂದೇ ಭಾರತಂ' ಎಂಬ ಅಭಿಯಾನಕ್ಕೆ ಚಾಲನೆ ನೀಡಿದರು. ಭಾರತದಾದ್ಯಂತ ಇರುವ ಹೊಸ ಚಿಂತಕರು, ಉದ್ಯಮಿಗಳು ಮತ್ತು ಬದಲಾವಣೆ ತರುವವರನ್ನು ಗುರುತಿಸಿ ಅವರಿಗೆ ಬೆಂಬಲ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಕಾರ್ಯಕ್ರಮವು ದೇಶದ ಪ್ರತಿಯೊಂದು ಭಾಗದಲ್ಲಿರುವ ಉದ್ಯಮಶೀಲ ಪ್ರತಿಭೆಗಳನ್ನು ಗುರುತಿಸುವ ಗುರಿಯನ್ನು ಹೊಂದಿದ್ದು, ಭಾರತದ ಎಲ್ಲಾ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ 800ಕ್ಕೂ ಹೆಚ್ಚು ಜಿಲ್ಲೆಗಳನ್ನು ಒಳಗೊಂಡಿದೆ. ಭಾರತದ ಪ್ರಮುಖ ಸ್ಟಾರ್ಟ್‌ಅಪ್ ಹಬ್‌ಗಳ ಹೊರತಾಗಿಯೂ, ವೈವಿಧ್ಯಮಯ ಹಿನ್ನೆಲೆಯ ಪ್ರತಿಭಾವಂತ ಆವಿಷ್ಕಾರಕರು ಮತ್ತು ಉದ್ಯಮಿಗಳಿಗೆ ಅವಕಾಶಗಳನ್ನು ಒದಗಿಸಿ, ಅವರಿಗೆ ರಾಷ್ಟ್ರೀಯ ಮಟ್ಟದ ವೇದಿಕೆ ಕಲ್ಪಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ.
ಆಯೋಜಕರ ಪ್ರಕಾರ, ಈ ಉಪಕ್ರಮವು ವಯಸ್ಸು, ವೃತ್ತಿ ಅಥವಾ ಶೈಕ್ಷಣಿಕ ಅರ್ಹತೆಗಳನ್ನು ಪರಿಗಣಿಸದೆ ಎಲ್ಲರಿಗೂ ಮುಕ್ತವಾಗಿದೆ. ಭಾಗವಹಿಸುವವರು ತಮ್ಮ ಹೊಸ ಪರಿಕಲ್ಪನೆಗಳು, ಮಾದರಿ ಉತ್ಪನ್ನಗಳು, ಆರಂಭಿಕ ಹಂತದ ಉದ್ಯಮಗಳು ಅಥವಾ ಈಗಾಗಲೇ ಸ್ಥಾಪಿತವಾಗಿರುವ ವ್ಯವಹಾರಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಅಷ್ಟೇ ಅಲ್ಲದೆ ಇದಕ್ಕಾಗಿ ಸ್ಟಾರ್ಟ್‌ಅಪ್ ಆಗಿ ನೋಂದಣಿಯಾಗಿರಬೇಕು ಎಂಬ ಕಡ್ಡಾಯ ನಿಯಮವೇನೂ ಇಲ್ಲ. ಈ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಗೌತಮ್ ಅದಾನಿ ಅವರು, 'ಭಾರತದಲ್ಲಿ ಅಪಾರ ಪ್ರತಿಭೆ ಇದೆ, ಆದರೆ ಅವಕಾಶಗಳು ದೇಶದ ಎಲ್ಲಾ ಭಾಗಗಳನ್ನು ತಲುಪಿಲ್ಲ. ಈ ಉಪಕ್ರಮದ ಮೂಲಕ ಎಲ್ಲಾ ಭಾಗಗಳ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಉದ್ದೇಶ ಹೊಂದಲಾಗಿದೆ,' ಎಂದು ತಿಳಿಸಿದರು.

'ನಾನು ನನ್ನ ಪ್ರಯಾಣವನ್ನು ಪ್ರಾರಂಭಿಸಿದಾಗ, ನನ್ನ ಬಳಿ ಏನೂ ಇರಲಿಲ್ಲ. ಇಂದು ನಾನು ಏನಾಗಿದ್ದೇನೋ ಮತ್ತು ಏನನ್ನು ಸಾಧಿಸಿದ್ದೇನೋ, ಅದೆಲ್ಲವನ್ನೂ ನನಗೆ ಈ ಭಾರತದ ಮಣ್ಣಿನಿಂದಲೇ ದೊರೆತಿದೆ. ನಮ್ಮ ದೇಶದಲ್ಲಿ ಪ್ರತಿಭೆಗೆ ಯಾವುದೇ ಕೊರತೆಯಿಲ್ಲ, ಆದರೆ ದೇಶದ ಮೂಲೆ ಮೂಲೆಗೂ ಅವಕಾಶಗಳು ಯಾವಾಗಲೂ ತಲುಪಿಲ್ಲ,' ಎಂದು ಅದಾನಿ ಹೇಳಿದರು.
ಭಾರತವು ಪ್ರಸ್ತುತ ವಿಶ್ವದ ಪ್ರಮುಖ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಆದರೆ ಉದ್ಯಮದ ಅಂದಾಜುಗಳ ಪ್ರಕಾರ, ಹೆಚ್ಚಿನ ಸ್ಟಾರ್ಟ್‌ಅಪ್ ಸಂಸ್ಥಾಪಕರು ಇನ್ನೂ ಕೆಲವು ಪ್ರಮುಖ ನಗರಗಳಿಂದಲೇ ಹೊರಹೊಮ್ಮುತ್ತಿದ್ದಾರೆ. ಇದರಿಂದ ಅನೇಕ ಪ್ರತಿಭಾವಂತ ಆವಿಷ್ಕಾರಕರು ಮಾರ್ಗದರ್ಶನ, ಸಂಪರ್ಕ ಜಾಲ ಮತ್ತು ಹೂಡಿಕೆ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. 'ವಂದೇ ಭಾರತಂ' ಉಪಕ್ರಮವು ಈ ಅಂತರವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದ್ದು, ಮಹಾನಗರಗಳು, ಬೆಳೆಯುತ್ತಿರುವ ನಗರ ಕೇಂದ್ರಗಳು, ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಸಮುದಾಯಗಳಲ್ಲಿರುವ ಆವಿಷ್ಕಾರಕರನ್ನು ಗುರುತಿಸಲು ಮುಂದಾಗಿದೆ. ಈ ಕಾರ್ಯಕ್ರಮದಲ್ಲಿ ತಂತ್ರಜ್ಞಾನ, ಉತ್ಪಾದನಾ ಕ್ಷೇತ್ರ, ಕೃಷಿ, ಸುಸ್ಥಿರ ಅಭಿವೃದ್ಧಿ, ಸಾಂಪ್ರದಾಯಿಕ ಕಲೆ-ಕೌಶಲ್ಯಗಳು ಹಾಗೂ ಸಮುದಾಯ ಆಧಾರಿತ ಪರಿಹಾರಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಆಲೋಚನೆಗಳು ಮತ್ತು ಯೋಜನೆಗಳನ್ನು ಸ್ವೀಕರಿಸಲಾಗುತ್ತದೆ.
ಈ ಉಪಕ್ರಮದಲ್ಲಿ ಮಹಿಳಾ ಉದ್ಯಮಿಗಳು, ಬುಡಕಟ್ಟು ಸಮುದಾಯದ ಆವಿಷ್ಕಾರಕರು, ಗ್ರಾಮೀಣ ಉದ್ಯಮಿಗಳು, ದಿವ್ಯಾಂಗ ಉದ್ಯಮಿಗಳು ಹಾಗೂ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಕೆಲಸ ಮಾಡುತ್ತಿರುವ ವ್ಯಕ್ತಿಗಳ ಭಾಗವಹಿಸುವಿಕೆಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಅರ್ಜಿಗಳನ್ನು ನಾವೀನ್ಯತೆ, ಉದ್ಯಮಶೀಲ ಸಾಮರ್ಥ್ಯ, ವಿಸ್ತರಣಾ ಸಾಮರ್ಥ್ಯ ಮತ್ತು ಸಾಮಾಜಿಕ ಪರಿಣಾಮ ಸೇರಿದಂತೆ ಹಲವು ಮಾನದಂಡಗಳ ಆಧಾರದ ಮೇಲೆ ಬಹು ಹಂತದ ಮೌಲ್ಯಮಾಪನ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ರಾಜ್ಯ ಮತ್ತು ಪ್ರಾದೇಶಿಕ ಮಟ್ಟದ ಪರಿಶೀಲನೆಯ ನಂತರ 75 ಅಂತಿಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇವರನ್ನು ಅಹಮದಾಬಾದ್‌ಗೆ ಆಹ್ವಾನಿಸಿ ಉತ್ತಮ ಮಾರ್ಗದರ್ಶನ ಮತ್ತು ನೆಟ್‌ವರ್ಕಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನೀಡಲಾಗುತ್ತದೆ.
ಅಂತಿಮ ಹಂತಕ್ಕೆ ಆಯ್ಕೆಯಾದ ಅಭ್ಯರ್ಥಿಗಳು ಕೈಗಾರಿಕಾ ಕ್ಷೇತ್ರದ ನಾಯಕರು, ಹೂಡಿಕೆದಾರರು, ಮಾರ್ಗದರ್ಶಕರು ಮತ್ತು ವ್ಯವಹಾರ ತಜ್ಞರೊಂದಿಗೆ ಸಂವಾದ ನಡೆಸಲಿದ್ದಾರೆ. ಬಳಿಕ ಸ್ವಾತಂತ್ರ್ಯ ದಿನಾಚರಣೆಯ ಸಮಯದಲ್ಲಿ ಆಯೋಜಿಸಲಾಗುವ ರಾಷ್ಟ್ರೀಯ ಮಟ್ಟದ ಗ್ರ್ಯಾಂಡ್ ಫಿನಾಲೆಯಲ್ಲಿ ಅವರು ಭಾಗವಹಿಸಲಿದ್ದಾರೆ. ಈ ಉಪಕ್ರಮದ ಉದ್ದೇಶ ಹೆಚ್ಚಿನ ಮನ್ನಣೆ ಮತ್ತು ಬೆಂಬಲಕ್ಕೆ ಅರ್ಹವಾಗಿರುವ ಆಲೋಚನೆಗಳನ್ನು ಹೊಂದಿರುವ ವ್ಯಕ್ತಿಗಳನ್ನು ಗುರುತಿಸುವುದು ಎಂದು ಗೌತಮ್ ಅದಾನಿ ಹೇಳಿದರು.
'ಯಾರ ಆಲೋಚನೆಗಳು ಹೆಚ್ಚಿನ ಮನ್ನಣೆ, ಬೆಂಬಲ ಮತ್ತು ದೊಡ್ಡ ವೇದಿಕೆಗೆ ಅರ್ಹವಾಗಿವೆಯೋ ಅಂತಹ ಆವಿಷ್ಕಾರಕರು, ಸಮಸ್ಯೆಗಳನ್ನು ಪರಿಹರಿಸುವವರು ಮತ್ತು ಉದ್ಯಮಿಗಳನ್ನು ಹುಡುಕುವ ಪ್ರಯತ್ನವೇ 'ವಂದೇ ಭಾರತಂ' ಯೋಜನೆಯ ಉದ್ದೇಶವಾಗಿದೆ. ಹೊಸದನ್ನು ಸೃಷ್ಟಿಸುವ ದೃಢಸಂಕಲ್ಪ ಹೊಂದಿರುವ ಪ್ರತಿಯೊಬ್ಬ ಭಾರತೀಯನೂ ಮುಂದೆ ಬಂದು ಇದರಲ್ಲಿ ಭಾಗವಹಿಸಬೇಕಾಗಿ ನಾವು ಆಹ್ವಾನಿಸುತ್ತೇವೆ,' ಎಂದು ಅವರು ಹೇಳಿದರು.
ಆಯ್ಕೆಯಾದ ಭಾಗವಹಿಸುವವರಿಗೆ ಇನ್‌ಕ್ಯುಬೇಶನ್ ಬೆಂಬಲ, ಕಾರ್ಯತಂತ್ರದ ಪಾಲುದಾರಿಕೆಗಳು, ಮಾರ್ಗದರ್ಶನದ ಅವಕಾಶಗಳು ಮತ್ತು ಹೂಡಿಕೆದಾರರ ನೆಟ್‌ವರ್ಕ್‌ಗಳ ಪ್ರವೇಶ ಸಿಗಲಿದೆ. ಬಹುಮಾನದ ಮೊತ್ತ ಮತ್ತು ವಿವಿಧ ವಿಭಾಗಗಳ ಪ್ರಶಸ್ತಿಗಳ ಕುರಿತಾದ ವಿವರಗಳನ್ನು ಮುಂದೆ ಪ್ರಕಟಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. ಈ ಕಾರ್ಯಕ್ರಮವು ಭಾಗವಹಿಸುವವರನ್ನು ಮಾರ್ಗದರ್ಶಕರು, ಹೂಡಿಕೆದಾರರು, ಉದ್ಯಮದ ಪ್ರಮುಖರು ಮತ್ತು ಇತರ ಆವಿಷ್ಕಾರಕರೊಂದಿಗೆ ಸಂಪರ್ಕಿಸುವ ದೀರ್ಘಕಾಲೀನ ತೊಡಗಿಸಿಕೊಳ್ಳುವಿಕೆಯ ವೇದಿಕೆ ನಿರ್ಮಿಸುವ ಗುರಿಯನ್ನೂ ಹೊಂದಿದೆ. ಖ್ಯಾತ ನಟ, ಕಿರುತೆರೆ ನಿರೂಪಕ ಮತ್ತು ಉದ್ಯಮಿ ರಾಜೀವ್ ಖಂಡೇಲ್ವಾಲ್ ಅವರನ್ನು 'ವಂದೇ ಭಾರತಂ' ಅಭಿಯಾನದ ರಾಯಭಾರಿ ಮತ್ತು ನಿರೂಪಕರನ್ನಾಗಿ ಹೆಸರಿಸಲಾಗಿದೆ. ಅವರು ಈ ಉಪಕ್ರಮದ ಪ್ರಚಾರಕ್ಕೆ ಸಹಾಯ ಮಾಡಲಿದ್ದಾರೆ ಮತ್ತು ಭಾರತದಾದ್ಯಂತ ಇರುವ ಉದ್ಯಮಶೀಲತೆಯ ಪ್ರತಿಭೆಗಳನ್ನು ಗುರುತಿಸುವ ಅದರ ಉದ್ದೇಶಕ್ಕೆ ಬೆಂಬಲ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಅರ್ಜಿ ಸಲ್ಲಿಕೆಯು ಜೂನ್ 24ರಿಂದ ಅಧಿಕೃತ 'ವಂದೇ ಭಾರತಂ' ಪೋರ್ಟಲ್ ಮೂಲಕ ಪ್ರಾರಂಭವಾಗಿದೆ.












Click it and Unblock the Notifications