ಬೆಂಗಳೂರಿನ ಪ್ರಮುಖ ವೈಟ್‌ಟಾಪಿಂಗ್ ಯೋಜನೆಗಳ ಮುಕ್ತಾಯಕ್ಕ ಡೆಡ್‌ಲೈನ್: ಮಹೇಶ್ವರ್ ರಾವ್
ಬೆಂಗಳೂರಿನ ವಿವಿಧ ಭಾಗಗಳಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಕಾಮಗಾರಿಗಳಿಗೆ ಇದೀಗ ಸಮಯ ನಿಗದಿ ಮಾಡಲಾಗಿದೆ. ನಗರದ ವಿವಿಧ ಭಾಗದಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿದೆ. ಈ ನಿಟ್ಟಿನಲ್ಲಿ ಕಾಮಗಾರಿಗಳಿಗೆ ಡೆಡ್‌ಲೈನ್ ನಿಗದಿ ಮಾಡಲಾಗಿದೆ. ಸಮನ್ವಯ ಸಭೆ ನಡೆಸಿ ಶೇಷಾದ್ರಿಪುರ ಫ್ಲಾಟ್ ಫಾರಂ ರಸ್ತೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಮೀಷನರ್ ಮಹೇಶ್ವರ್ ರಾವ್ ಅವರು ಸೂಚನೆ ನೀಡಿದ್ದಾರೆ.
ಶೇಷಾದ್ರಿಪುರ ಫ್ಲಾಟ್ ಫಾರಂ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಂಡಿದ್ದು, ಇಲಾಖೆಗಳ ಜೊತೆ ಸಮನ್ವಯ ಸಭೆ ನಡೆಸಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಶೇಷಾದ್ರಿಪುರ ಫ್ಲಾಟ್ ಫಾರಂ ರಸ್ತೆಗೆ ತಡ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ಕೊಳಚೆ ನಿರ್ಮೂಲನೆ ಮಂಡಳಿ ಸಿಗ್ನಲ್ ನಿಂದ ರಾಜೀವ್ ಗಾಂಧಿ ಜಂಕ್ಷನ್ ವರೆಗೆ 600 ಮೀಟರ್ ಉದ್ದದ ಫ್ಲಾಟ್ ಫಾರಂ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಮನ್ವಯ ಸಭೆ ನಡೆಸಿ ಇರುವ ಸಮಸ್ಯೆ ಬಗೆಹರಿಸಿಕೊಂಡು ಕಾಮಗಾರಿ ಪ್ರಾರಂಭಿಸಲು ಸೂಚನೆ ನೀಡಿದ್ದಾರೆ.
ಪಾಲಿಕೆಯಿಂದ ಸೈಡ್ ಡ್ರೈನ್, ಹೆಚ್.ಡಿ.ಪಿ.ಇ ಪೈಪ್ ಕಾಮಗಾರಿಯು ಬಹುತೇಕ ಪೂರ್ಣಗೊಂಡಿದ್ದು, ಯುಟಿಲಿಟಿ ಕಾಮಗಾರಿ ಪ್ರಗತಿಯಲ್ಲಿದೆ. ಜಲಮಂಡಳಿಯಿಂದ ಕಾವೇರಿ ಹಾಗೂ ಯುಡಿಜಿ ಲೈನ್ ಕಾಮಗಾರಿ ಪ್ರಗತಿಯಲ್ಲಿದ್ದು, ಆ ಕಾಮಗಾರಿ ನಡೆದಿರುವ ಕಡೆ ಮಣ್ಣು/ಭಗ್ನಾವಶೇಷಗಳನ್ನು ಅಲ್ಲಿಯೇ ಬಿಟ್ಟಿದ್ದಾರೆ. ಅದನ್ನು ಕೂಡಲೇ ತೆರವುಗೊಳಿಸಿ ಕಾಮಗಾರಿ ಪೂರ್ಣಗೊಂಡಿರುವ ಕಡೆ ರಸ್ತೆ ಪುನರ್ ನಿರ್ಮಾಣ ಕಾರ್ಯ ಕೂಡಲೇ ಪೂರ್ಣಗೊಳಿಸಲು ಸೂಚನೆ ನೀಡಿದ್ದಾರೆ.
ಫ್ಲಾಟ್ ಫಾರಂ ರಸ್ತೆ ಅತ್ಯಂತ ಪ್ರಮುಖ ಹಾಗೂ ಹೆಚ್ಚು ಸಂಚಾರ ದಟ್ಟಣೆಯಿಂದ ಕೂಡಿದ ರಸ್ತೆಯಾಗಿದೆ. ವಾಹನಗಳ ಸಂಚಾರಕ್ಕೆ ಯಾವುದೇ ರೀತಿಯ ತೊಂಡರೆಯಾಗದಂತೆ ಕಾಮಗಾರಿ ನಡೆಸಬೇಕು. ಸಂಚಾರಿ ಪೊಲೀಸರಿಂದ ಕಾಮಗಾರಿ ನಡೆಸಲು ಅನುಮತಿ ಸಿಗದಿರುವ ಪರಿಣಾಮ ಕಾಮಗಾರಿಗೆ ವೇಗ ನೀಡಲು ಸಾಧ್ಯವಾಗುತ್ತಿಲ್ಲ. ಈ ಸಂಬಂಧ ಸಂಚಾರಿ ಪೊಲೀಸ್ ವಿಭಾಗದ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ತಿಳಿಸಲಾಗಿದೆ.
ರಸ್ತೆ ಅಗೆದು ಹಾಗೆ ಬಿಟ್ಟರೆ ಕ್ರಮ: ಜಲಮಂಡಳಿ ಅಥವಾ ಇತರೆ ಇಲಾಖೆಗಳು ರಸ್ತೆ ಅಗೆದು ಕಾಮಗಾರಿ ನಡೆಯುವ ವೇಳೆ ಬ್ಯಾರಿಕೇಡಿಂಗ್ ಹಾಕಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು. ಜೊತೆಗೆ ಕಾಮಗಾರಿ ಪೂರ್ಣಗೊಂಡ ಕೂಡಲೆ ಡೆಬ್ರಿಸ್ ತೆರವುಗೊಳಿಸಿ ರಸ್ತೆ ಪುನರ್ ನಿರ್ಮಾಣ ಕಾರ್ಯ ನಡೆಸಬೇಕು. ಇಲ್ಲವಾದಲ್ಲಿ ಅಂತಹವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.
ಜೆಸಿ ರಸ್ತೆ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣ: ಜೆಸಿ ರಸ್ತೆಯ ಮಿನರ್ವ ವೃತ್ತದಿಂದ ಟೌನ್ ಹಾಲ್ ವರೆಗೆ 1 ಕಿ.ಮೀ ಉದ್ದದ ರೆಸ್ತೆಯನ್ನು ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದ್ದು, ಈಗಾಗಲೇ ಅರ್ಧ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಲಾಗಿದ್ದು, ಮತ್ತರ್ಧ ಭಾಗದಲ್ಲಿ ಕ್ಯೂರಿಂಗ್ ಆಗುತ್ತಿದ್ದು, ಡಿಸೆಂಬರ್ 1 ರಿಂದ ಸಂಪೂರ್ಣ ರಸ್ತೆ ವಾಹನಗಳಿಗೆ ಮುಕ್ತವಾಗಲಿದೆ ಎಂದು ಮುಖ್ಯ ಎಂಜಿನಿಯರರು ಮಾಹಿತಿ ನೀಡಿದ್ದಾರೆ.
ಟ್ರಸ್ಟ್ ವೆಲ್ ಆಸ್ಪತ್ರೆ ಬಳಿ ರಾಜಕಾಲುವೆ ಹಾದು ಹೋಗುವ ಬಳಿ ಎತ್ತರವಾಗಿದ್ದು, ವೈಟ್ ಟಾಪಿಂಗ್ ಗೆ ಮ್ಯಾಚ್ ಮಾಡುವ ಕೆಲಸ ನಡೆಯುತ್ತಿದೆ. ಅದನ್ನು ಒಂದು ದಿನದಲ್ಲಿ ಪೂರ್ಣಗೊಳಿಸಬೇಕು. ಜೊತೆಗೆ ಒಂದು ಭಾಗದಲ್ಲಿ ಪಾದಚಾರಿ ಮಾರ್ಗ ಕಾರ್ಯ ಪೂರ್ಣಗೊಂಡಿದ್ದು, ಮತ್ತೊಂದು ಭಾಗದ ಪಾದಚಾರಿ ಮಾರ್ಗ ಹಾಗೂ ಬಫರ್ ಝೋನ್ ನಲ್ಲಿ ಕಾಬುಲ್ ಸ್ಟೋನ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಅದನ್ನು ಕೂಡಾ ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ ಕೊಟ್ಟಿದ್ದಾರೆ.












Click it and Unblock the Notifications