ಸದಾಶಿವನಗರದಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣ
ಬೆಂಗಳೂರು, ಆಗಸ್ಟ್ 17: ನಾಡಪ್ರಭು ಕೆಂಪೇಗೌಡ ಪ್ರತಿಮೆಯನ್ನು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಸದಾಶಿವನಗರದಲ್ಲಿ ಗುರುವಾರ ಅನಾವರಣಗೊಳಿಸಿದರು.
ಬಳಿಕ ಮಾತನಾಡಿದ ಅವರು, ಕೆಂಪೇಗೌಡ ಅವರು ಈ ನಾಡು ನಿರ್ಮಾತೃ. ದೇಶದಲ್ಲೆ ಅತಿ ದೊಡ್ಡ ಕೆಂಪೇಗೌಡರ ಪ್ರತಿಮೆಯನ್ನು ಬಿಬಿಎಂಪಿ ವತಿಯಿಂದ ನಿರ್ಮಾಣ ಮಾಡಿರುವುದು ಹೆಮ್ಮೆಯ ವಿಚಾರ. ಅವರು ನಿರ್ಮಾಣ ಮಾಡಿಕೊಟ್ಟ ನಗರವನ್ನು ಇಂದು ಅದರ ಪರಿಮಿತಿ ಮೀರಿ ಬೆಳೆಸಿದ್ದೇವೆ. ಹಿಂದೆ ಸದಾಶಿವನಗರದಲ್ಲಿ ಗೋಪುರ ಬಿಟ್ಟರೆ ಬೇರೆನೂ ಇರಲಿಲ್ಲ. ನಿರ್ಜನ ಪ್ರದೇಶವಾಗಿತ್ತು. ಈಗ ಇಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದರು.
ಸದಾಶಿವನಗರದಲ್ಲಿರುವ ರಮಣಶ್ರೀ ಉದ್ಯಾನದಲ್ಲಿ ಕೆಂಪೇಗೌಡ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಹೆಬ್ಬಾಳ ಜಂಕ್ಷನ್‌ನಲ್ಲಿ ಕೂಡ ಕೆಂಪೇಗೌಡ ಪ್ರತಿಮೆಯೊಂದನ್ನು ನಿರ್ಮಿಸಲಾಗಿದೆ. ಅಶ್ವಾರೂಢ ಭಂಗಿಯಲ್ಲಿರುವ ನಾಡಪ್ರಭುವಿನ ಪ್ರತಿಮೆ ನಿಲ್ಲಿಸಲು ಕೋಟೆ ಮಾದರಿಯ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ನೆಲದಿಂದ 30ಅಡಿ ಎತ್ತರ ಹಾಗೂ 16 ಅಡಿ ಅಗಲದ ಕಲ್ಲಿನ ಕೋಟೆಯ ಚಿತ್ರಣ ಮೂಡಿಸಲಾಗಿದೆ.

ಈ ವೇದಿಕೆ ಮೇಲೆ 2750ಕೆಜಿ ತೂಕದ ಕೆಂಪೇಗೌಡರ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ.ಕಾರ್ಯಕ್ರಮದಲ್ಲಿ ಸಚಿವ ಡಿ.ವಿ. ಸದಾನಂದಗೌಡ, ಶಾಸಕ ಅಶ್ವತ್ಥನಾರಾಯಣ, ಮೇಯರ್ ಸಂಪತ್‌ರಾಜ್ ಪಾಲ್ಗೊಂಡಿದ್ದರು.












Click it and Unblock the Notifications