Bengaluru Second Airport: ಎರಡನೇ ಏರ್‌ಪೋರ್ಟ್ ನಿರ್ಮಾಣದ ಬಗ್ಗೆ ಅಪ್‌ಡೇಟ್ ಕೊಟ್ಟ ಡಿ ಕೆ ಶಿವಕುಮಾರ್
ಬೆಂಗಳೂರು, ಏಪ್ರಿಲ್ 12: ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಜ್ಯ ಸರ್ಕಾರ ಗುರುತಿಸಿರುವ ಮೂರು ಸ್ಥಳಗಳನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ಉನ್ನತ ಮಟ್ಟದ ತಂಡವು ಭೇಟಿ ನೀಡಿ ಪರಿಶೀಲನೆಯನ್ನ ನಡೆಸಿದೆ. ನನಗೆ ಇಡೀ ಕರ್ನಾಟಕವೇ ಒಂದು. ಇದರ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ಮಾಡುತ್ತದೆ ಹೊರತು ನಾವಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೇಳಿದರು.
ಏ.17ರಂದು ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ನಡೆಸಲಿರುವ ಹೋರಾಟದ ಬಗ್ಗೆ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಪೂರ್ವಸಿದ್ಧತಾ ಸಭೆ ನಡೆಸಿ, ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಏಪ್ರಿಲ್ 17ರಂದು ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಜನರ ಪರವಾಗಿ ಹೋರಾಟ ಮಾಡಲಾಗುತ್ತಿದೆ. ಬಿಜೆಪಿ ನಾಯಕರು ತಮ್ಮ ಜನಾಕ್ರೋಶ ಯಾತ್ರೆಯ ಬೋರ್ಡ್ ನಲ್ಲಿ 'ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ' ಎಂದು ಬದಲಾವಣೆ ಮಾಡಿಕೊಳ್ಳಲಿ ಎಂದು ಆ ಪಕ್ಷದ ನಾಯಕರಿಗೆ ಮನವಿ ಮಾಡುತ್ತಿದ್ದೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದರು.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ಎಲ್ಲಾ ವಸ್ತುಗಳ ಬೆಲೆ ಏನಿತ್ತು, ಈಗ ಏನಾಗಿದೆ ಎಂದು ನೋಡಬೇಕು. ಈ ಬೆಲೆ ಏರಿಕೆ ಬಿಸಿ ತಡೆಯಲು ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಯಿತು. ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ರಾಜ್ಯ ಮಟ್ಟದಲ್ಲಿ ಹೋರಾಟ ಮಾಡಲು ಅನೇಕ ನಾಯಕರು ಇಂದು ಚರ್ಚೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಈ ಹೋರಾಟವನ್ನು ಜಿಲ್ಲಾ ಮಟ್ಟದಲ್ಲಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಅಸ್ತಿತ್ವ ಉಳಿಸಿಕೊಳ್ಳಲು ಜೆಡಿಎಸ್ ಹೋರಾಟ
ಜೆಡಿಎಸ್ ಪಕ್ಷವೂ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿರುವ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಮಾಡಬಾರದು ಎಂದು ಹೇಳಲು ಸಾಧ್ಯವಿಲ್ಲ. ಜೆಡಿಎಸ್ ಪಕ್ಷದವರು 'ಸಾಕಪ್ಪಾ ಸಾಕು ಬಿಜೆಪಿ ಸರ್ಕಾರ' ಎಂದು ಹೋರಾಟ ಮಾಡಲು ಸಲಹೆ ನೀಡುತ್ತೇನೆ. ಅವರು ಸಿದ್ಧಾಂತವನ್ನು ಬಳಸಿಕೊಂಡಿದ್ದು, ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದಾರೆ. ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು.
ಕರಗ ಉತ್ಸವಕ್ಕೆ ಅನುದಾನ ನೀಡಿಲ್ಲ ಎಂಬ ಆರೋಪದ ಕುರಿತು ಮಾತನಾಡಿ, ನಮಗೆ ಯಾರು ಬಂದು ಅರ್ಜಿ ನೀಡಿದ್ದಾರೋ ಅವರಿಗೆ ನೆರವು ನೀಡಲಿದ್ದೇವೆ. ಇದಕ್ಕೆ ಬಜೆಟ್ ನಲ್ಲೂ ಅನುದಾನ ಮೀಸಲಿಡಲಾಗಿದೆ. ಅವರು 2-3 ಭಾಗಗಳಾಗಿರಬೇಕು. ಎಲ್ಲರೂ ಒಗ್ಗಟ್ಟಾಗಿ ಬಂದರೆ, ಕರಗ ಉತ್ಸವಕ್ಕೆ ಮೊದಲಿನಿಂದಲೂ ಯಾವ ರೀತಿ ನೆರವು ನೀಡುತ್ತಿದ್ದೆವೋ ಅದನ್ನೇ ನೀಡುತ್ತೇವೆ. ನಾವು ಅನುದಾನ ನೀಡದಿದ್ದರೆ ನಮಗೆ ಆಹ್ವಾನ ಯಾಕೆ ನೀಡಿದ್ದಾರೆ? ಎಂದು ತಿಳಿಸಿದರು.
ಜಾತಿ ಗಣತಿ ವರದಿ ವಿಚಾರದಲ್ಲಿ ತಮ್ಮ ನಿಲುವೇನು ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಜಾತಿ ಗಣತಿಯು ಜನಗಣತಿಯಲ್ಲ, ಅದು ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ. ನಮ್ಮ ಪಕ್ಷ ಸರ್ವರಿಗೂ ಸಮಬಾಳು, ಸಮಪಾಲು ಎಂಬ ನಿಲುವು ಹೊಂದಿದೆ. ಮುಖ್ಯಮಂತ್ರಿಗಳು ಹಾಗೂ ನಾನು ಇನ್ನು ವರದಿ ನೋಡಿಲ್ಲ. ನಾವು ಇದನ್ನು ಪರಿಶೀಲನೆ ಮಾಡುತ್ತೇವೆ. ಏನಾದರೂ ಹೆಚ್ಚು ಕಮ್ಮಿ ಇದ್ದರೆ ಎಲ್ಲರೂ ಚರ್ಚೆ ಮಾಡಿ ಅದನ್ನು ಸರಿಪಡಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.












Click it and Unblock the Notifications