ಡೇಟಿಂಗ್ ಆಪ್ನಲ್ಲಿ ಪ್ರೀತಿ, ಮದುವೆ ನಾಟಕ; ಬೆಂಗಳೂರಿನ ಇಂಜಿನಿಯರ್ಗೆ ಯುವತಿಯಿಂದ 1.66 ಕೋಟಿ ನಾಮ
ಬೆಂಗಳೂರು: ನಮ್ಮ ಬೆಂಗಳೂರಿನಲ್ಲಿ ಡೇಟಿಂಗ್ ಆಪ್ ಮೂಲಕ ಪರಿಚಯವಾದ ಯುವತಿಯೊಬ್ಬಳ ಮಾಯದ ಬಲೆಗೆ ಬಿದ್ದು, ಸಾಫ್ಟ್ವೇರ್ ಇಂಜಿನಿಯರ್ ಒಬ್ಬರು ಬರೋಬ್ಬರಿ 1.66 ಕೋಟಿ ರೂಪಾಯಿ ಕಳೆದುಕೊಂಡು ಬೀದಿಗೆ ಬಿದ್ದಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮದುವೆಯಾಗುವುದಾಗಿ ನಂಬಿಸಿ, ಭಾವಿ ಪತಿಯನ್ನೇ ನಡುನೀರಿನಲ್ಲಿ ಕೈಬಿಟ್ಟ ಕರಾಳ ಕೃತ್ಯ ಇಡೀ ಐಟಿ ವಲಯವನ್ನು ಬೆಚ್ಚಿಬೀಳಿಸಿದೆ.
ಡೇಟಿಂಗ್ ಆಪ್ನಲ್ಲಿ ಶುರುವಾದ ವಾಟ್ಸಾಪ್ ಲವ್ ಸ್ಟೋರಿ
ಬೆಂಗಳೂರಿನ ಆಗ್ನೇಯ ವಲಯದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿರುವ ಸೌರಭ್ ದುಬೆ ಈ ಆನ್ಲೈನ್ ವಂಚನೆಗೆ ಬಲಿಯಾದ ದುರ್ದೈವಿ. ಕಂಪ್ಯೂಟರ್ ಇಂಜಿನಿಯರ್ ಆಗಿರುವ ಇವರು, ನಗರದ ಪ್ರತಿಷ್ಠಿತ ಖಾಸಗಿ ಸಂಸ್ಥೆಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಕಳೆದ ಫೆಬ್ರವರಿ 15ರಂದು ಸೌರಭ್ ಅವರ ಮೊಬೈಲ್ನಲ್ಲಿದ್ದ ಪ್ರಸಿದ್ಧ ಡೇಟಿಂಗ್ ಆಪ್ ಒಂದರ ಮೂಲಕ 'ರಿಯಾ ಅಗರ್ವಾಲ್' ಎಂಬ ಯುವತಿಯ ಪರಿಚಯವಾಗಿದೆ. ಆರಂಭದಲ್ಲಿ ಹಾಯ್, ಬೈ ಅಂತಾ ಸಾಮಾನ್ಯವಾಗಿದ್ದ ಮಾತುಕತೆ, ದಿನ ಕಳೆದಂತೆ ಇಬ್ಬರ ನಡುವೆ ಪ್ರೀತಿಯಾಗಿ ಬದಲಾಗಿದೆ.

ದಿನಗಳು ಉರುಳಿದಂತೆ ಇಬ್ಬರೂ ತಮ್ಮ ವೈಯಕ್ತಿಕ ಫೋನ್ ನಂಬರ್ಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಅಲ್ಲಿಂದ ಪ್ರತಿದಿನ ರಾತ್ರಿಯಿಡೀ, ಬೆಳಗಿನ ಜಾವದವರೆಗೂ ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ಗಂಟೆಗಟ್ಟಲೆ ಮಾತನಾಡುತ್ತಾ ಪ್ರೀತಿಯ ಜಗತ್ತಿನಲ್ಲಿ ತೇಲಾಡಿದ್ದಾರೆ. ಒಂದು ಹಂತದಲ್ಲಿ ರಿಯಾ, ಸೌರಭ್ನನ್ನು ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದಾಳೆ. ಇತ್ತ ತನಗೆ ರೂಪಸಿ ಹೆಂಡತಿ ಸಿಗಲಿದ್ದಾಳೆಂಬ ಖುಷಿಯಲ್ಲಿ ಸೌರಭ್ ಕೂಡ ತಕ್ಷಣವೇ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇಬ್ಬರೂ ತಮ್ಮ ತಮ್ಮ ಕುಟುಂಬದವರ ಜೊತೆ ಮಾತನಾಡಿ, ಶಾಸ್ತ್ರೋಕ್ತವಾಗಿ ಮದುವೆಯಾಗಲು ತಯಾರಿ ಕೂಡ ನಡೆಸುತ್ತಿದ್ದರು.
ಆನ್ಲೈನ್ ಟ್ರೇಡಿಂಗ್ ಹೆಸರಲ್ಲಿ ಹೆಣೆದ ಮಾಯಾಜಾಲ
ಮದುವೆಯ ಸಿದ್ಧತೆಗಳು ಒಂದು ಕಡೆ ಭರದಿಂದ ಸಾಗುತ್ತಿದ್ದರೆ, ಇನ್ನೊಂದೆಡೆ ರಿಯಾ ತನ್ನ ಅಸಲಿ ಮುಖವಾಡ ಕಳಚಲು ಶುರು ಮಾಡಿದ್ದಾಳೆ. ತಾನು ಆನ್ಲೈನ್ ಶೇರ್ ಮಾರ್ಕೆಟ್ನಲ್ಲಿ ಭಾರಿ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡುತ್ತಿದ್ದು, ಅತ್ಯಂತ ಕಡಿಮೆ ಅವಧಿಯಲ್ಲಿ ಕೋಟಿ ಕೋಟಿ ಲಾಭ ಗಳಿಸುತ್ತಿರುವುದಾಗಿ ಸೌರಭ್ಗೆ ಆಸೆ ಹುಟ್ಟಿಸಿದ್ದಾರೆ. "ನಾವಿಬ್ಬರೂ ಮುಂದೆ ಮದುವೆಯಾಗಿ ಒಂದಾಗುವವರು, ನಮ್ಮ ಭವಿಷ್ಯಕ್ಕಾಗಿ ನೀನೂ ಕೂಡ ಈ ಆನ್ಲೈನ್ ಬಿಸಿನೆಸ್ನಲ್ಲಿ ದೊಡ್ಡ ಮಟ್ಟದ ಹಣ ಹೂಡಿಕೆ ಮಾಡು" ಎಂದು ಸೌರಭ್ ಹಿಂದೆ ಬಿದ್ದು ನಿರಂತರವಾಗಿ ಒತ್ತಾಯ ಮಾಡಿದ್ದಾಳೆ.
ಮೂರೇ ತಿಂಗಳಲ್ಲಿ 1.66 ಕೋಟಿ ರೂ. ಹೂಡಿಕೆ
ತನ್ನನ್ನು ಮದುವೆಯಾಗಲಿರುವ ಭಾವಿ ಪತ್ನಿ ಇಷ್ಟೊಂದು ಪ್ರೀತಿಯಿಂದ ಒತ್ತಾಯಿಸುತ್ತಿದ್ದಾಳಲ್ಲಾ? ಎಂದು ಕುರುಡಾಗಿ ನಂಬಿದ ಸೌರಭ್, ಆಕೆ ತೋರಿಸಿದ ಕೋಟಿ ಕೋಟಿ ಲಾಭದ ಆಸೆಗೆ ಬಲಿಯಾಗಿದ್ದಾರೆ. ಕಳೆದ ಫೆಬ್ರವರಿ ತಿಂಗಳಿನಿಂದ ಮೇ ತಿಂಗಳವರೆಗಿನ ಕೇವಲ 3 ತಿಂಗಳ ಅವಧಿಯಲ್ಲೇ, ರಿಯಾ ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 1.66 ಕೋಟಿ ರೂಪಾಯಿ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಹಣ ಪಡೆದ ರಿಯಾ, ಬ್ಯಾಂಕ್ ಖಾತೆಗೆ ಬರುವ ಲಾಭದ ಹಣ ಮತ್ತು ಸೌರಭ್ ಹೂಡಿಕೆ ಮಾಡಿರುವ ಅಸಲು ಹಣವನ್ನು ಯಾವಾಗ ಬೇಕಾದರೂ ಡ್ರಾ ಮಾಡಿ ಬಳಸಿಕೊಳ್ಳಬಹುದು ಎಂದು ಹೇಳಿ ಸೌರಭ್ನನ್ನು ನಂಬಿಸಿದ್ದಳು.
ಖಾತೆಯಲ್ಲಿ ಉಳಿದಿದ್ದು ಕೇವಲ 4,250 ರೂ.
ಇತ್ತೀಚೆಗೆ ಸೌರಭ್ ಅವರಿಗೆ ತುರ್ತಾಗಿ ಹಣದ ಅವಶ್ಯಕತೆ ಎದುರಾಗಿದೆ. ರಿಯಾ ಹೇಳಿದ್ದ ಬ್ಯಾಂಕ್ ಖಾತೆಗಳಿಂದ ಹಣವನ್ನು ಡ್ರಾ ಮಾಡಲು ಸೌರಭ್ ಮುಂದಾದಾಗ ಅವರಿಗೆ ಇಡಿ ಮಿಂಚು ಬಡಿದಂತಾಗಿದೆ. ಏಕೆಂದರೆ ಆ ಕೋಟಿ ಕೋಟಿ ಹಣವಿದ್ದ ಖಾತೆಗಳಲ್ಲಿ ಉಳಿದಿದ್ದು ಕೇವಲ 4,250 ರೂಪಾಯಿ ಮಾತ್ರ. ಹಣ ಮಾಯವಾಗಿರುವುದನ್ನು ಕಂಡು ಆತಂಕಗೊಂಡ ಸೌರಭ್, ತಕ್ಷಣವೇ ಪ್ರೇಯಸಿ ರಿಯಾಗೆ ಫೋನ್ ಮಾಡಿದ್ದಾರೆ. ಆದರೆ ಆಕೆಯ ಮೊಬೈಲ್ 'ಸ್ವಿಚ್ ಆಫ್' ಆಗಿತ್ತು. ಹಲವು ಬಾರಿ ಆಕೆಯನ್ನು ಸಂಪರ್ಕಿಸಲು ಯತ್ನಿಸಿದರೂ ಸೌರಭ್ಗೆ ಆಕೆಯನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಆಗಲೇ ಡೇಟಿಂಗ್ ಆಪ್ ಮೂಲಕ ಪ್ರೀತಿಯ ನಾಟಕವಾಡಿ, ಮದುವೆಯ ಆಸೆ ತೋರಿಸಿ ತನಗೆ 1.66 ಕೋಟಿ ರೂಪಾಯಿ ವಂಚಿಸಿ ಎಸ್ಕೇಪ್ ಆಗಿರುವುದು ಇಂಜಿನಿಯರ್ಗೆ ಮನವರಿಕೆಯಾಗಿದೆ.
ಸೈಬರ್ ಕ್ರೈಂ ಪೊಲೀಸರಿಗೆ ದೂರು
ದಿಕ್ಕುತೋಚದಂತಾದ ಸಾಫ್ಟ್ವೇರ್ ಇಂಜಿನಿಯರ್ ಸೌರಭ್, ತಕ್ಷಣವೇ ಬೆಂಗಳೂರು ಆಗ್ನೇಯ ವಲಯದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಧಾವಿಸಿ ದೂರು ದಾಖಲಿಸಿದ್ದಾರೆ. ಸೌರಭ್ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಕ್ರೈಂ ಪೊಲೀಸರು, ಕೋಟ್ಯಂತರ ರೂಪಾಯಿ ಹಣದೊಂದಿಗೆ ನಾಪತ್ತೆಯಾಗಿರುವ ಆ ಆಕೆಯ ಪತ್ತೆಗಾಗಿ ಜಾಲ ಬೀಸಿದ್ದಾರೆ. ಡೇಟಿಂಗ್ ಆಪ್ ಹಾಗೂ ಆನ್ಲೈನ್ ಬಿಜಿನೆಸ್ ಹೆಸರಲ್ಲಿ ಇಂಜಿನಿಯರ್ಗೆ ನಡೆದಿರುವ ಈ ವಂಚನೆ ಸಿಲಿಕಾನ್ ಸಿಟಿಯಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.












Click it and Unblock the Notifications