Darshan: ದರ್ಶನ್ ಸಹಚರರಿಂದ ಸಾಕ್ಷಿಗಳಿಗೆ ಬೆದರಿಕೆ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ದರ್ಶನ್ ಈಗ ಜೈಲು ಪಾಲಾಗಿದ್ದಾರೆ. 12 ದಿನಗಳ ಪೊಲೀಸ್ ಕಸ್ಟಡಿ ಬಳಿಕ ನ್ಯಾಯಾಲಯ ದರ್ಶನ್‌ಗೆ ಜುಲೈ 4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಕೊಟ್ಟಿದೆ.
ಇನ್ನು ದರ್ಶನ್ ಸಹಚರರು ಮಾಡುತ್ತಿರುವ ಎಡವಟ್ಟು ದರ್ಶನ್‌ಗೆ ಮತ್ತಷ್ಟು ಉರುಳಾಗುವ ಸಾಧ್ಯತೆ ಇದೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಸಾಕ್ಷಿಗಳಿಗೆ ದರ್ಶನ್ ಸಹಚರರು ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ದರ್ಶನ್ ಮತ್ತು ಗ್ಯಾಂಗ್ ಬಂಧಿಸಿದ್ದ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲೇ ದೂರು ದಾಖಲಾಗಿದೆ. ಇದು ದರ್ಶನ್‌ಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಪೊಲೀಸರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ರಿಮ್ಯಾಂಡ್ ವರದಿಯಲ್ಲಿ ಏನಿದೆ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ 17 ಆರೋಪಿಗಳಲ್ಲಿ ಕೆಲವರು ಸಾಕ್ಷಿಗಳಾಗಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು, ಅವರ ಮೇಲೆ ಇತರೆ ಆರೋಪಿಗಳು ಪ್ರಭಾವ ಬೀರಬಹುದು ಮತ್ತು ಹಲ್ಲೆ ಮಾಡುವ ಸಾಧ್ಯತೆ ಕೂಡ ಇದೆ ಎಂದು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಇದೇ ಕಾರಣಕ್ಕೆ ಎಲ್ಲಾ ಆರೋಪಿಗಳನ್ನು ಒಂದೇ ಜೈಲಿನಲ್ಲಿ ಇಡಬಾರದು ಎಂದು ಎಸ್‌ಪಿಪಿ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಇದಕ್ಕೆ ದರ್ಶನ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತ ವಿಚಾರಣೆ ಸೋಮವಾರ ನಡೆಯಲಿದೆ.
13 ವರ್ಷಗಳ ಬಳಿಕ ಜೈಲಿಗೆ
ನಟ ದರ್ಶನ್ ಬರೋಬ್ಬರಿ 13 ವರ್ಷಗಳ ಬಳಿಕ ಎರಡನೇ ಬಾರಿಗೆ ಪರಪ್ಪನ ಅಗ್ರಹಾರಕ್ಕೆ ಹೋಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ಅವರು, 12 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದರು. ಈಗ ಜುಲೈ 4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಪರಪ್ಪನ ಅಗ್ರಹಾರದಲ್ಲಿ ಇರಲಿದ್ದಾರೆ.
2011ರಲ್ಲಿ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದರು. 28 ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಅವರು ಬಳಿಕ ಹೊರಬಂದಿದ್ದರು. ಈಗ ಎರಡನೇ ಬಾರಿಗೆ ಪರಪ್ಪನ ಅಗ್ರಹಾರ ಸೇರಿದ್ದು ಅವರಿಗೆ ಜಾಮೀನು ಸಿಗಲು ಕನಿಷ್ಠ 6 ತಿಂಗಳು ಬೇಕಾಬಹುದು, ಅಲ್ಲಿಯವರೆಗೂ ಅವರು ಜೈಲಿನಲ್ಲಿರಬೇಕು ಎನ್ನಲಾಗಿದೆ.
ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎನ್ನುವ ಕಾರಣಕ್ಕೆ ರೇಣುಕಾಸ್ವಾಮಿಯನ್ನು ದರ್ಶನ್ ಮತ್ತು ಗ್ಯಾಂಗ್ ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರು ಪ್ರಕರಣದ ಬಗ್ಗೆ ಬಲವಾದ ಸಾಕ್ಷಿಗಳನ್ನು ಕಲೆಹಾಕಿದ್ದು ದರ್ಶನ್ ಮತ್ತು ಗ್ಯಾಂಗ್‌ಗೆ ಗಂಭೀರ ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ಕಾನೂನು ತಜ್ಞರು ಹೇಳುತ್ತಿದ್ದಾರೆ.












Click it and Unblock the Notifications