Actor Darshan: ದರ್ಶನ್, ಪವಿತ್ರಾ ಗೌಡಗೆ ಸದ್ಯಕ್ಕಿಲ್ಲ ಬಿಡುಗಡೆ ಭಾಗ್ಯ; ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆ
ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲಾ17 ಆರೋಪಿಗಳ ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆಯಾಗಿದೆ. ಸೆಪ್ಟೆಂಬರ್ 30ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಣೆ ಮಾಡಿ ವಿಚಾರಣಾ ನ್ಯಾಯಾಲಯ ಆದೇಶ ಹೊರಡಿಸಿದೆ. ಮೂರು ತಿಂಗಳಿನಿಂದ ಜೈಲಿನಲ್ಲಿರುವ ನಟ ದರ್ಶನ್ ಇದೀಗ ಸೆಪ್ಟೆಂಬರ್ ತಿಂಗಳನ್ನು ಕೂಡ ಜೈಲಿನಲ್ಲೇ ಕಳೆಯಲಿದ್ದಾರೆ.
ಇಂದು 17 ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾಗುತ್ತಿದ್ದ ಕಾರಣ ಎಲ್ಲಾ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್‌ನ ಎದುರು ಹಾಜರುಪಡಿಸಲಾಗಿತ್ತು. ಬೆಂಗಳೂರಿನ ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಜಡ್ಜ್ ಆದೇಶ ಹೊರಡಿಸಿದರು.

ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದು, ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ತುಮಕೂರು, ಮೈಸೂರು, ಧಾರವಾಡ, ಶಿವಮೊಗ್ಗ, ವಿಜಯಪುರ, ಹಿಂಡಲಗಾ ಜೈಲಿನಿಂದ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು.
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ
ದರ್ಶನ್ ನ್ಯಾಯಾಂಗ ಬಂಧನ ವಿಸ್ತರಣೆಯಾದ ಬಳಿಕ, ಪತ್ನಿ ವಿಜಯಲಕ್ಷ್ಮಿ ಬಳ್ಳಾರಿ ಜೈಲಿಗೆ ತೆರಳಿ ದರ್ಶನ್‌ರನ್ನು ಭೇಟಿ ಮಾಡಿದರು. ಪತ್ನಿ ವಿಜಯಲಕ್ಷ್ಮಿ ಜೊತೆ ಭಾಮೈದ ಹೇಮಂತ್, ನಟ ಧನ್ವೀರ್ ಕೂಡ ದರ್ಶನ್‌ರನ್ನು ಭೇಟಿ ಮಾಡಿದ್ದಾರೆ. ವಿಜಯಲಕ್ಷ್ಮಿ ದರ್ಶನ್ ಬ್ಯಾಗ್‌ನಲ್ಲಿ ಹಲವು ವಸ್ತುಗಳನ್ನು ತಂದುಕೊಟ್ಟಿದ್ದಾರೆ. ಸಂಜೆ 4 ಗಂಟೆ ಸುಮಾರಿಗೆ ಭದ್ರತಾ ಕೇಂದ್ರದಲ್ಲಿ ತಪಾಸಣೆ ಮಾಡಿದ ಬಳಿಕ ಭೇಟಿಗೆ ಅವಕಾಶ ಕೊಡಲಾಯಿತು.
ಈ ಮೊದಲು ದರ್ಶನ್‌ರನ್ನು ಕುಟುಂಬಸ್ಥರು, ಸಂಬಂಧಿಕರು ಮಾತ್ರ ಭೇಟಿ ಮಾಡಬಹುದು ಎಂದು ನಿರ್ದೇಶನ ನೀಡಿತ್ತು. ಆದರೆ ಮಂಗಳವಾರ ನಡೆದ ವಿಚಾರಣೆ ಸಂದರ್ಭದಲ್ಲಿ ದರ್ಶನ್ ಆಪ್ತ ವಲಯದ ಸ್ನೇಹಿತರಿಗೂ ಅವಕಾಶ ಕೊಡಬೇಕು ಎಂದು ದರ್ಶನ್ ಪರ ವಕೀಲರು ಮನವಿ ಮಾಡಿದ್ದು, ಇದಕ್ಕೆ ಕೋರ್ಟ್ ಕೂಡ ಸಮ್ಮತಿ ವ್ಯಕ್ತಪಡಿಸಿದೆ. ಈ ಹಿನ್ನಲೆಯಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಭಾಮೈದ ಹೇಮಂತ್ ಜೊತೆ ಧನ್ವೀರ್ ಕೂಡ ದರ್ಶನ್‌ರನ್ನು ಭೇಟಿ ಮಾಡಲು ಬಂದಿದ್ದಾರೆ.
ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರಿಗೆ ಡ್ರೈಫ್ರೂಟ್ಸ್, ಬಿಸ್ಕೆಟ್, ಬಟ್ಟೆ, ಸೋಪ್, ಹಣ್ಣು ಮತ್ತು ಬೇಕರಿ ತಿಂಡಿಯನ್ನು ನೀಡಿದ್ದಾರೆ. 3 ತಿಂಗಳಿನಿಂದ ಜೈಲಿನಲ್ಲಿರುವ ದರ್ಶನ್‌ಗೆ ಜೈಲೂಟ ಒಗ್ಗೊಲ್ಲ, ಮನೆ ಊಟಕ್ಕೆ ನ್ಯಾಯಾಲಯ ಅನುಮತಿ ನೀಡದ ಕಾರಣ, ವಿವಿಧ ತಿಂಡಿಗಳನ್ನು ತಂದುಕೊಟ್ಟಿದ್ದಾರೆ.
ದರ್ಶನ್‌ರನ್ನು ನೋಡುತ್ತಿದ್ದಂತೆ ಪತ್ನಿ ವಿಜಯಲಕ್ಷ್ಮಿ ಕಣ್ಣೀರಿಟ್ಟಿದ್ದಾರೆ. ಭಾಮೈದ ಹೇಮಂತ್ ಮತ್ತು ಧನ್ವೀರ್ ಕೂಡ ದರ್ಶನ್‌ರನ್ನು ನೋಡಿ ಭಾವುಕರಾಗಿದ್ದಾರೆ. ದರ್ಶನ್ ಮೂವರನ್ನು ಸಂತೈಸಿ, ಧೈರ್ಯ ತುಂಬಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications