ಅಸಾನಿ ಚಂಡಮಾರುತ: 22 ವರ್ಷಗಳಲ್ಲಿ ಮೇ ತಿಂಗಳಲ್ಲಿ ಅತ್ಯಂತ ಚಳಿ ದಿನ ದಾಖಲೆ
ಬೆಂಗಳೂರು ಮೇ 11: ಅಸಾನಿ ಚಂಡಮಾರುತದ ಪರಿಣಾಮ ಬೆಂಗಳೂರು ಅತ್ಯಂತ ಚಳಿಯ ದಿನವನ್ನು ಕಂಡಿದೆ. 2000 ರಿಂದ ಮೇ ತಿಂಗಳಲ್ಲಿ ನಗರ ಅತ್ಯಂತ ಚಳಿಯ ದಿನವನ್ನು ದಾಖಲಿಸಿದೆ. ಇದರಿಂದ ಬೇಸಿಗೆ ಬಿಸಿಲಿಗೆ ಹೈರಾಣಾಗಿದ್ದ ಸಿಲಿಕಾನ್ ಸಿಟಿ ಮಂದಿಗೆ ಚಳಿಗಾಲದ ಅನುಭವ ಉಂಟಾಗಿದೆ.
ಮಂಗಳವಾರ ಮಳೆಯಿಂದಾಗಿ ಗರಿಷ್ಠ ತಾಪಮಾನ 24.3 ಡಿಗ್ರಿ ಸೆಲ್ಸಿಯಸ್‌ಗೆ ಇಳಿಸಿದ್ದರಿಂದ ಬೆಂಗಳೂರಿನ ನಿವಾಸಿಗಳು ಸಂತೋಷಪಟ್ಟಿದ್ದಾರೆ. ಇದು ಸಾಮಾನ್ಯಕ್ಕಿಂತ 9 ಡಿಗ್ರಿ ಕಡಿಮೆಯಾಗಿದೆ. ನಿನ್ನೆ ಅಸಾನಿ ಚಂಡಮಾರುತದ ಪ್ರಭಾವದಿಂದ ನಗರವು 2000 ರಿಂದ ಮೇ ತಿಂಗಳಲ್ಲಿ ಅತ್ಯಂತ ಚಳಿಯ ದಿನವನ್ನು ಕಂಡಿತು. ನಗರದಲ್ಲಿ 3.5 ಮಿಮೀ ಲಘು ಮಳೆಯಾಗಿದ್ದು ಬಲವಾದ ಗಾಳಿ ಮತ್ತು ಮೋಡ ಕವಿದ ವಾತಾವರಣವಿದೆ. ಇದರಿಂದ ಕನಿಷ್ಠ ತಾಪಮಾನ 21.9 ಡಿಗ್ರಿ ಸೆಲ್ಸಿಯಸ್‌ನಿಂದ 20.2 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ.
ಮುಂದಿನ 24 ಗಂಟೆಗಳ ಕಾಲ ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ಗುಡುಗು ಸಹಿತ ಲಘು ಮಳೆಯಾಗುವ ಸಾಧ್ಯತೆ ಇದೆ ಎಂದು ಬೆಂಗಳೂರಿನ ಪ್ರಾದೇಶಿಕ ಹವಾಮಾನ ಕೇಂದ್ರ ತಿಳಿಸಿದೆ. ಈ ವೇಳೆ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 26 ಡಿಗ್ರಿ ಸೆಲ್ಸಿಯಸ್ ಮತ್ತು 22 ಡಿಗ್ರಿ ಸೆಲ್ಸಿಯಸ್ ಆಗಲಿದೆ ಎನ್ನಲಾಗಿದೆ.

ಕಳೆದ 24 ಗಂಟೆಗಳಲ್ಲಿ ಕರ್ನಾಟಕದ ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಮತ್ತು ಕರಾವಳಿ ಪ್ರದೇಶಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದಾಗ್ಯೂ, ಉತ್ತರ ಒಳನಾಡಿನಲ್ಲಿ ಒಣ ಹವೆ ಮುಂದುವರೆದಿದೆ. ಕಲಬುರ್ಗಿಯಲ್ಲಿ ರಾಜ್ಯದಲ್ಲಿಯೇ ಗರಿಷ್ಠ ಉಷ್ಣಾಂಶ 42.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ
ಹವಾಮಾನ ಇಲಾಖೆ ಪ್ರಕಾರ, ನಗರದಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 27 ಡಿಗ್ರಿ ಸೆಲ್ಸಿಯಸ್ ಮತ್ತು 22 ಡಿಗ್ರಿ ಸೆಲ್ಸಿಯಸ್ ಆಗುವ ನಿರೀಕ್ಷೆಯಿದೆ. ಅಸಾನಿ ಚಂಡಮಾರುತ ಬುಧವಾರ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಯ ಬಳಿ ಬರಲಿದೆ ಮತ್ತು ಮುಂದಿನ 24 ಗಂಟೆಗಳಲ್ಲಿ ಚಂಡಮಾರುತವಾಗಿ ದುರ್ಬಲಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.

ಆದರೆ ಇತ್ತೀಚಿನ ಹವಾಮಾನ ವರದಿ ಪ್ರಕಾರ, "ಅಸಾನಿ ಚಂಡಮಾರುತವು ಮುಂದಿನ ಕೆಲವು ಗಂಟೆಗಳ ಕಾಲ ಉತ್ತರದ ಕಡೆಗೆ ಚಲಿಸುವ ಸಾಧ್ಯತೆಯಿದೆ" ಎಂದು IMD ಹೇಳಿದೆ. ಕರಾವಳಿ ಕರ್ನಾಟಕ ಮತ್ತು ರಾಜ್ಯದ ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಉತ್ತರ ಕರ್ನಾಟಕ ಭಾಗದಲ್ಲೂ ಲಘು ಮಳೆಯಾಗುವ ಮುನ್ಸೂಚನೆ ಇದೆ.
ಮುಂದಿನ ಐದು ದಿನಗಳಲ್ಲಿ ಕೇರಳ, ಮಾಹೆ, ಲಕ್ಷದ್ವೀಪ, ಆಂಧ್ರಪ್ರದೇಶದ ಕರಾವಳಿ ಮತ್ತು ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು, ತೆಲಂಗಾಣ, ರಾಯಲಸೀಮಾ, ಉತ್ತರ ಆಂತರಿಕ ಕರ್ನಾಟಕ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಮಳೆಯಾಗುವ ಸಾಧ್ಯತೆಯಿದೆ.












Click it and Unblock the Notifications