ಕಬ್ಬನ್ ಪಾರ್ಕ್‌ನಲ್ಲಿ ಸಚಿವ ಜೈಶಂಕರ್ ಕಾರ್ಯಕ್ರಮಕ್ಕೆ ಆಕ್ಷೇಪ; ರಾಜಕೀಯ ಸಭೆ ನಿಷೇಧಕ್ಕೆ ಚುನಾವಣಾ ಆಯೋಗಕ್ಕೆ ಪತ್ರ
ಬೆಂಗಳೂರು, ಏಪ್ರಿಲ್. 04: ಭಾನುವಾರ ನಗರದ ಕಬ್ಬನ್ ಪಾರ್ಕ್‌ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮತ್ತು ಬೆಂಗಳೂರು ಸೆಂಟ್ರಲ್ ಸಂಸದ ಪಿಸಿ ಮೋಹನ್ ಅವರೊಂದಿಗೆ ಸಾರ್ವಜನಿಕ ಸಭೆ ನಡೆಸಿದ್ದರು. ಇದು ಆಕ್ಷೇಪಕ್ಕೆ ಕಾರಣವಾಗಿದ್ದು, ರಾಜಕೀಯ ಉದ್ದೇಶಕ್ಕಾಗಿ ಪಾರ್ಕ್‌ಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಟೀಕೆಗಳು ವ್ಯಕ್ತವಾಗಿವೆ.
ಸಾರ್ವಜನಿಕ ಸಭೆ ಬೆನ್ನಲ್ಲೇ ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ (ಸಿಪಿಡಬ್ಲ್ಯುಎ) ಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್‌ನಂತಹ ಉದ್ಯಾನವನಗಳಲ್ಲಿ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ತೊಂದರೆ ಉಂಟಾಗುತ್ತದೆ ಎಂಬುದನ್ನು ಉಲ್ಲೇಖಿಸಿ ಇಂತಹ ಸ್ಥಳಗಳಲ್ಲಿ 'ರಾಜಕೀಯ ಸಭೆ'ಗಳನ್ನು ನಿಷೇಧಿಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಕಳುಹಿಸಿದೆ.

ಈ ಕುರಿತು ಸಿಪಿಡಬ್ಲ್ಯುಎ ಸೋಮವಾರ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವ ಶ್ರೀ ಎಸ್ ಜೈಶಂಕರ್ ಮತ್ತು ಬೆಂಗಳೂರು (ದಕ್ಷಿಣ) ಸಂಸದ ತೇಜಸ್ವಿ ಸೂರ್ಯ ಅವರು ಕಬ್ಬನ್ ಪಾರ್ಕ್‌ನಲ್ಲಿ ನಡೆದ ಸಾರ್ವಜನಿಕ ಸಭೆ ತೀವ್ರವಾದ ಆಕ್ಷೇಪ ವ್ಯಕ್ತಪಡಿಸಿದೆ. ಇಂತಹ ಸಾರ್ವಜನಿಕ ಸಭೆಗಳು ಏಕಾಂತಕ್ಕಾಗಿ ಉದ್ಯಾನವನಕ್ಕೆ ಬರುವ ಜನರಲ್ಲದೆ ಸಣ್ಣ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ತೊಂದರೆ ನೀಡುತ್ತವೆ. ಈ ಚುನಾವಣೆಯ ಸಮಯದಲ್ಲಿ, ಇತರ ರಾಜಕೀಯ ಪಕ್ಷಗಳ ನಾಯಕರು ಇಂತಹ ಸಭೆಗಳನ್ನು ನಡೆಸುವ ಸಾಧ್ಯತೆಯಿದ್ದು, ಇದು ಉದ್ಯಾನ ವನಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ಹೇಳಿದೆ.
"ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಶನ್‌ನ ಯಾವುದೇ ಸದಸ್ಯರು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿಲ್ಲ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ, ಏಕೆಂದರೆ ನಮಗೆ ಈ ಬಗ್ಗೆ ಮೊದಲು ತಿಳಿಸಿಲ್ಲ. ಭವಿಷ್ಯದಲ್ಲಿ ಉದ್ಯಾನದಲ್ಲಿ ಇಂತಹ ಸಭೆಗಳಿಗೆ ಅನುಮತಿ ನೀಡದಂತೆ ನಾವು ಚುನಾವಣಾ ಆಯೋಗವನ್ನು ಕೋರುತ್ತೇವೆ. ರಾಜಕಾರಣಿಗಳು ಸಾರ್ವಜನಿಕ ಸಭೆಗಳನ್ನು ನಡೆಸಲು ಮತ್ತು ರಾಜಕೀಯದ ಬಗ್ಗೆ ಚರ್ಚಿಸಲು ಕಬ್ಬನ್ ಪಾರ್ಕ್ ಸರಿಯಾದ ಸ್ಥಳವಲ್ಲ" ಎಂದು ಸಿಪಿಡಬ್ಲ್ಯೂಎ ತಿಳಿಸಿದೆ.
"ಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್‌ನಂತಹ ಉದ್ಯಾನವನಗಳು ಬೆಂಗಳೂರಿನ ಪ್ರಮುಖ ಸ್ಥಳಗಳಾಗಿದ್ದು, ಸಸ್ಯ ಮತ್ತು ಪ್ರಾಣಿಗಳನ್ನು ಸಂರಕ್ಷಿಸಲು ಮತ್ತು ರಕ್ಷಿಸಲು ಉದ್ದೇಶಿಸಲಾಗಿದೆ. ರಾಜಕೀಯ ಪಕ್ಷಗಳು ಈ ಜಾಗವನ್ನು ಸಾರ್ವಜನಿಕ ಸಭೆಗಳಿಗೆ ಬಳಸುವಂತಿಲ್ಲ. ಏಕೆಂದರೆ ಇದು ಕೆಟ್ಟ ಸಾಂಪ್ರದಾಯಕ್ಕೆ ನಾಂದಿ ಹಾಡುತ್ತದೆ. ಇದರಿಂದ ಸೂಚನೆ ಪಡೆದು ನಾಳೆ ಮತ್ತಷ್ಟು ಶಾಸಕರು ಅಥವಾ ಪಕ್ಷದ ಕಾರ್ಯಕರ್ತರು ಇಲ್ಲಿ ಸಭೆ ನಡೆಸಲು ಮನವಿ ಮಾಡುತ್ತಾರೆ. ರಾಜಕೀಯ ಲಾಭಕ್ಕಾಗಿ ಈ ರೀತಿಯ ಜಾಗವನ್ನು ದುರುಪಯೋಗಪಡಿಸಿಕೊಳ್ಳಲು ನಾವು ಪಕ್ಷಗಳಿಗೆ ಅವಕಾಶ ನೀಡುವುದಿಲ್ಲ" ಎಂದು ಸಿಪಿಡಬ್ಲ್ಯೂಎ ಅಧ್ಯಕ್ಷ ಮತ್ತು ವಕೀಲ ಎಸ್ ಉಮೇಶ್ ಹೇಳಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಮತ್ತು ಬೆಂಗಳೂರು ಸೆಂಟ್ರಲ್ ಸಂಸದ ಪಿಸಿ ಮೋಹನ್ 'ಮೀಟ್ ಅಂಡ್ ಗ್ರೀಟ್' ಕಾರ್ಯಕ್ರಮದ ಭಾಗವಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಭಾನುವಾರ ಕಬ್ಬನ್ ಪಾರ್ಕ್ ನಲ್ಲಿ ಜನರೊಂದಿಗೆ ಸಾರ್ವಜನಿಕ ಸಭೆ ನಡೆಸಿದ್ದಾರೆ. ಸಚಿವ ಜೈಶಂಕರ್ ಅವರು ವಿದೇಶಾಂಗ ನೀತಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿದ ಬಗ್ಗೆ, ಯುಎಸ್ ಮತ್ತು ಜರ್ಮನಿಯ ಟೀಕೆಗಳು ಮತ್ತು ಇತರ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.












Click it and Unblock the Notifications