ಗಂಡನ ಕಿರುಕುಳಕ್ಕೆ ಟೆಕ್ಕಿ ಆತ್ಮಹತ್ಯೆ; ಪೊಲೀಸರ ಮೇಲೆ ಹಲ್ಲೆ ಮಾಡಿದವರು ಈಗ ರೌಡಿ ಪಟ್ಟಿಗೆ!
ಬೆಂಗಳೂರು, ಡಿ. 10: ಯಲಹಂಕ ನ್ಯೂಟೌನ್ ಪೊಲೀಸರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ರೌಡಿ ಶೀಟರ್ ಓಪನ್. ಗಂಡನ ಕಿರುಕುಳ ತಾಳಲಾರದೇ ವಿವಾಹಿತೆ ಆತ್ಮಹತ್ಯೆ. ಪ್ರೀತಿಸಿ ಮದುವೆಯಾಗಿದ್ದ ಪ್ರಿಯಕರನಿಂದ ಚಿತ್ರಹಿಂಸೆ. ಇದು ಬೆಂಗಳೂರು ಅಪರಾಧ ಲೋಕದ ಚಿತ್ರಣ.
ಸಾಫ್ಟ್‌ವೇರ್ ಇಂಜಿನಿಯರ್ ಆತ್ಮಹತ್ಯೆ:
ನಾಲ್ಕು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಗಂಡನಿಂದಲೇ ಚಿತ್ರಹಿಂಸೆ. ಗಂಡನ ಕಿರುಕುಳ ತಾಳಲಾರದೇ ಸಾಫ್ಟ್‌ವೇರ್ ಇಂಜಿನಿಯರ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಂಗೀತ ಆತ್ಮಹತ್ಯೆ ಮಾಡಿಕೊಂಡವರು. ಆತ್ಮಹತ್ಯೆಗೂ ಮುನ್ನ ತನ್ನ ಪತಿ ವಿನಯ್ ನೀಡುತ್ತಿದ್ದ ಕಿರುಕುಳ ಬಗ್ಗೆ ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ವಿನಯ್ ಗೆ ಸಂಗೀತಾ ಪರಿಚಯವಾಗಿತ್ತು. ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಬೆಂಗಳೂರಿನ ಅಮೃತಹಳ್ಳಿಯಲ್ಲಿ ವಾಸವಾಗಿದ್ದರು. ಇಬ್ಬರ ನಡುವೆ ಪದೇ ಪದೇ ಮನಸ್ಥಾಪ ಉಂಟಾಗಿ ಜಗಳವಾಡುತ್ತಿದ್ದರು. ಇದರಿಂದ ಬೇಸತ್ತ ಸಂಗೀತ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಸಂಗೀತಾ ಡೆತ್ ನೋಟ್ ನೋಟ್ ಬಗ್ಗೆ ಪರಿಶೀಲನೆ ನಡೆಸಿರುವ ಅಮೃತಹಳ್ಳಿ ಪೊಲೀಸರು ವಿನಯ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರೌಡಿ ಶೀಟರ್ ಓಪನ್:
ಯಲಹಂಕ ನ್ಯೂಟೌನ್ ಪೊಲೀಸರ ಮೇಲೆ ಹಲ್ಲೆ ನಡೆಸಿದ ಇಬ್ಬರ ಮೇಲೆ ರೌಡಿ ಪಟ್ಟಿಗೆ ಸೇರಿಸಲಾಗಿದೆ. ಕೆಲ ದಿನಗಳ ಹಿಂದೆ ಮಾಸ್ಕ್ ಹಾಕದಿರುವುದನ್ನು ಪ್ರಶ್ನಿಸಿದ ಪೊಲೀಸರ ಮೇಲೆ ಹಿಗ್ಗಾ ಮುಗ್ಗಾ ಥಳಿಸಿದ್ದರು. ಅಲ್ಲದೇ , ಇದನ್ನು ವಿಡಿಯೋ ಮಾಡಿಕೊಂಡು ವೈರಲ್ ಮಾಡಿದ್ದರು. ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿದ ಧೀರಜ್ ಮತ್ತು ಮನೋಜ್ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿತ್ತು. ಇಬ್ಬರು ಆರೋಪಿಗಳನ್ನು ಘಟನಾ ಸ್ಥಳದಲ್ಲಿಯೇ ವಶಕ್ಕೆ ಪಡೆದು ಬಂಧಿಸಿದ್ದರು. ಇಬ್ಬರ ವಿರುದ್ಧ ಇದೀಗ ರೌಡಿ ಶೀಟರ್ ಖಾತೆ ತೆರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಬೆಟ್ಟಹಳ್ಳಿ ಗ್ರಾಮದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆದಿತ್ತು. ಮಾಸ್ಕ್ ಹಾಕದಿರುವ ಯುವಕರನ್ನು ಪೊಲೀಸರು ಪ್ರಶ್ನೆ ಮಾಡಿದ್ದರು. ಇದರಿಂದ ರೊಚ್ಚಿಗೆದ್ದಿದ್ದ ಇಬ್ಬರು ಯುವಕರು ಪೊಲೀಸ್ ಪೇದೆ ಮತ್ತು ಪಿಎಸ್ಐ ಮೇಲೆ ಹಲ್ಲೆ ಮಾಡಿದ್ದರು. ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿದ ವಿಡಿಯೋ ವೈರಲ್ ಆಗಿತ್ತು. ಈ ಕುರಿತು ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿಕೊಂಡು ಹಲ್ಲೆಕೋರರನ್ನು ಬಂಧಿಸಿದ್ದರು. ಇದೀಗ ಇಬ್ಬರ ವಿರುದ್ದ ರೌಡಿ ಶೀಟರ್ ತೆರೆಯಲಾಗಿದೆ.












Click it and Unblock the Notifications