Bengaluru: ಬೆಂಗಳೂರಿನ ತರಕಾರಿಗಳಲ್ಲಿ ವಿಷಕಾರಿ ಅಂಶ; ಅಧ್ಯಯನಕ್ಕೆ ಸಮಿತಿ
ಬೆಂಗಳೂರಿನಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಬೆಲೆ ಹೆಚ್ಚಾದರೂ ತರಕಾರಿ ಕೊಳ್ಳಲೇಬೇಕಾದ ಅನಿವಾರ್ಯತೆ ಗ್ರಾಹಕರದ್ದಾಗಿದೆ. ಉತ್ತಮ ಆರೋಗ್ಯಕ್ಕಾಗಿ ತರಕಾರಿ ಸೇವನೆ ಮಾಡಿ ಎಂದು ವೈದ್ಯರು ಕೂಡ ಶಿಫಾರಸ್ಸು ಮಾಡುತ್ತಾರೆ. ಆದರೆ ತಿನ್ನುವ ತರಕಾರಿಯೇ ವಿಷವಾಗಿದೆ ಎಂದರೆ ಜನ ಏನು ಮಾಡಬೇಕು. ಹೌದು, ಬೆಂಗಳೂರಿನಲ್ಲಿ ಮಾರಾಟವಾಗುತ್ತಿರುವ ತರಕಾರಿಯಲ್ಲಿ ವಿಷಕಾರಿ ಲೋಹದ ಅಂಶಗಳು ಪತ್ತೆಯಾಗಿದೆ.
ಈ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಲು ಉನ್ನತ ಮಟ್ಟದ ಸಮಿತಿಯನ್ನು ರಚಿಸುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಸ್ತಾಪಿಸಿದೆ. ಬೆಂಗಳೂರಿನಲ್ಲಿ ತರಕಾರಿ ತಿನ್ನುವವರಿಗೆ ಈ ಸುದ್ದಿ ಆತಂಕಕ್ಕೆ ಕಾರಣವಾಗಿದೆ.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ದಕ್ಷಿಣ ಪೀಠವು ಪರಿಸರ ನಿರ್ವಹಣಾ ನೀತಿ ಸಂಶೋಧನಾ ಸಂಸ್ಥೆ (ಇಎಂಪಿಆರ್‌ಐ) ನಡೆಸಿದ ಅಧ್ಯಯನದಲ್ಲಿ ತರಕಾರಿಗಳಲ್ಲಿ ವಿಷಕಾರಿ ಲೋಹದ ಅಂಶಗಳು ಪತ್ತೆಯಾಗಿದ್ದವು. 10 ತರಕಾರಿಗಳ 400 ಮಾದರಿಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಿದ್ದು ಇದರಲ್ಲಿ ಕಬ್ಬಿಣ, ಕ್ಯಾಡ್ಮಿಯಮ್, ಸೀಸ ಮತ್ತು ನಿಕಲ್ ಅಂಶಗಳು ಆಹಾರ ಮತ್ತು ಕೃಷಿ ಸಂಸ್ಥೆಯು ಸೂಚಿಸಿದ ಮಿತಿಗಳಿಗಿಂತ ಹೆಚ್ಚಾಗಿರುವುದು ಕಂಡು ಬಂದಿತ್ತು.
ತರಕಾರಿಗಳಲ್ಲಿ ಭಾರಿ ಲೋಹದ ಅಂಶಗಳು ಮತ್ತು ಕೀಟನಾಶಕಗಳಿಗೆ ಸಂಬಂಧಪಟ್ಟಂತೆ ಹೆಚ್ಚಿನ ವಿವರಗಳನ್ನು ಖಚಿತಪಡಿಸಿಕೊಳ್ಳಲು ಸಮಗ್ರ ಅಧ್ಯಯನ ಮಾಡುವ ಅಗತ್ಯವಿದೆ ಎಂದು ಸಿಪಿಸಿಬಿ ಐದು ಸದಸ್ಯರ ಸಮಿತಿ ಪ್ರಸ್ತಾಪಿಸಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ)ಯ ಪ್ರಯೋಗಾಲಯಗಳು ಎಫ್‌ಎಸ್‌ಎಸ್‌ಎಐನಿಂದ ಮಾನ್ಯತೆ ಪಡೆಯದ ಕಾರಣ, ಸಮಿತಿಯು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳ ಸಂಘ (ಎಫ್‌ಎಸ್‌ಎಸ್‌ಎಐ) ಮತ್ತು ಭೋಪಾಲ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೋಲ್ ಸೈನ್ಸ್‌ನ ಸದಸ್ಯರನ್ನು ಒಳಗೊಂಡಿರಬೇಕು ಬೆಂಗಳೂರಿನ ಸಿಪಿಸಿಬಿ ಪ್ರಾದೇಶಿಕ ನಿರ್ದೇಶಕರು, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಿಂದ ಒಬ್ಬರು ಸದಸ್ಯರು ಸಮಿತಿಯಲ್ಲಿ ಇರಬೇಕು ಎಂದು ಶಿಫಾರಸ್ಸು ಮಾಡಿದೆ.
ಸಮೀಕ್ಷೆ, ಮಾದರಿ ಗಾತ್ರ, ಸ್ಥಳ ಮತ್ತು ಪ್ರಯೋಗಾಲಯಗಳು ಸೇರಿದಂತೆ ಅಧ್ಯಯನಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಸಮಿತಿಯು ನಿರ್ಧರಿಸುತ್ತದೆ. ಎನ್‌ಜಿಟಿಗೆ ಸಲ್ಲಿಸಬೇಕಾದ ಅಧ್ಯಯನ ಫಲಿತಾಂಶಗಳು ಮತ್ತು ಅಂತಿಮ ವರದಿಯನ್ನು ನೀಡಲು ನಾಲ್ಕು ತಿಂಗಳ ಅವಕಾಶ ಕೊಡುವಂತೆ ಕೇಳಿದೆ.
ಅಕ್ಟೋಬರ್ 15 ರಂದು ನಡೆದ ವಿಚಾರಣೆಯಲ್ಲಿ ನ್ಯಾಯಮೂರ್ತಿ ಪುಷ್ಪಾ ಸತ್ಯನಾರಾಯಣ ಮತ್ತು ತಜ್ಞ ಸದಸ್ಯ ಸತ್ಯಗೋಪಾಲ್ ಕೊರ್ಲಪಾಟಿ ಅವರಿದ್ದ ಎನ್‌ಜಿಟಿ ಪೀಠವು ಡಿಸೆಂಬರ್ 2 ರೊಳಗೆ ಅಂತಿಮ ವರದಿಯನ್ನು ಸಲ್ಲಿಸುವಂತೆ ಮಂಡಳಿಗೆ ಸೂಚನೆ ಕೊಟ್ಟಿದೆ.












Click it and Unblock the Notifications