ಕೋವಿಡ್ ಸಾಂಕ್ರಾಮಿಕ ಇನ್ನು ಸಂಪೂರ್ಣ ಹೋಗಿಲ್ಲ; ಡಾ. ಕೆ. ಸುಧಾಕರ್
ಬೆಂಗಳೂರು, ನವೆಂಬರ್ 14; ಕೋವಿಡ್ ಸಾಂಕ್ರಾಮಿಕ ಇನ್ನು ಸಂಪೂರ್ಣ ಹೋಗಿಲ್ಲ ಹಾಗಾಗಿ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವುದನ್ನು ಮತ್ತಷ್ಟು ಸಮಯ ಮುಂದುವರೆಸಬೇಕು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ಬೆಂಗಳೂರು ಅರಮನೆ ಆವರಣದಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಕೊರೊನಾ ನಂತರ ಆರೋಗ್ಯ ಕ್ಷೇತ್ರದ ಸವಾಲುಗಳು ಕುರಿತು ಸಂವಾದ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.
ತಾಯಿ, ಮಕ್ಕಳ ಸಾವು: ಸಿದ್ದರಾಮಯ್ಯ, ಎಚ್‌ಡಿಕೆ ವಿರುದ್ಧ ಸುಧಾಕರ್ ಕಿಡಿ
"ನಾನು ಮಂತ್ರಿಯಾದ ಒಂದು ತಿಂಗಳಲ್ಲೇ ಕೋವಿಡ್ ಸವಾಲು ಎದುರಾಯಿತು ಕೋವಿಡ್ ನನಗೆ ಹಲವು ಪಾಠಗಳನ್ನು ಕಲಿಸಿತು ನಮ್ಮ ಆರೋಗ್ಯ ಮೂಲಸೌಕರ್ಯ ತಕ್ಷಣ ಹೆಚ್ಚಿಸುವುದು ಸವಾಲಾಗಿತ್ತು" ಎಂದು ಸಚಿವರು ವಿವರಿಸಿದರು.
"ಅಗತ್ಯ ಆರೋಗ್ಯ ಸಿಬ್ಬಂದಿ ಇರಲಿಲ್ಲ, ಆರೋಗ್ಯ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲು ಸಮಯ ಇರಲಿಲ್ಲ. ಟೆಲಿ ಮೆಡಿಸಿನ್, ಟೆಲಿ ಐಸಿಯು ವ್ಯವಸ್ಥೆಗಳು ನಮ್ಮಲ್ಲಿ ಮೊದಲ ಬಾರಿಗೆ ಜಾರಿಗೆ ತರಲಾಯಿತು" ಸಚಿವರು ಮಾಹಿತಿ ನೀಡಿದರು.
"ಕರ್ನಾಟಕದಲ್ಲಿ 800 ಜನರಿಗೆ 1 ವೈದ್ಯರು ಇದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರು, ಉತ್ತಮ ವೈದ್ಯಕೀಯ ಸೌಲಭ್ಯ ಕೊರತೆ ಇದೆ ಇದನ್ನು ಒಪ್ಪಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲೂ ಉತ್ತಮ ವೈದ್ಯಕೀಯ ಸೌಲಭ್ಯ ನೀಡುವಲ್ಲಿ ಸರ್ಕಾರ ಕ್ರಮ ವಹಿಸುತ್ತಿದೆ" ಎಂದರು.
"ಹಲವು ಕೊರತೆಗಳ ಮಧ್ಯೆಯೂ ನಾವು ಕೋವಿಡ್ ಅನ್ನು ಯಶಸ್ವಿಯಾಗಿ ಎದುರಿಸಿದೆವು, ಕೋವಿಡ್ ಕಾರಣದಿಂದ ಮೆಡಿಕಲ್ ಕಾಲೇಜುಗಳ ಸಂಖ್ಯೆ ಹೆಚ್ಚುತ್ತಿದೆ ಮುಂದಿನ ವರ್ಷ ಹೊಸ ಮೆಡಿಕಲ್ ಕಾಲೇಜುಗಳ ಸ್ಥಾಪನೆ ಆಗುತ್ತಿದೆ ನಮ್ಮ ಆರೋಗ್ಯ ವ್ಯವಸ್ಥೆ ಈಗ ಉತ್ತಮ ಮಟ್ಟಕ್ಕೆ ಬಂದಿದೆ ಆರೋಗ್ಯ ಸಿಬ್ಬಂದಿಯ ಪ್ರಮಾಣ ಹೆಚ್ಚಾಗಿದೆ" ಎಂದು ಹೇಳಿದರು.

ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಮಾತನಾಡಿ, "ಜಗತ್ತಿನಲ್ಲಿ ಇನ್ನು ಕೋವಿಡ್ ಸಾಂಕ್ರಾಮಿಕ ದೂರವಾಗಿಲ್ಲ, ಎಲ್ಲ ದೇಶಗಳಲ್ಲೂ ನಿಯಂತ್ರಣದಲ್ಲಿದ್ದರೂ ಕೂಡ ಓಮಿಕ್ರಾನ್ ಭೀತಿ ಇದೆ, ಹಾಗಾಗಿ ಮತ್ತಷ್ಟು ದಿನಗಳ ಕಾಲ ಮುಂಜಾಗ್ರತಾ ಕ್ರಮ ವಹಿಸುವುದು ಅಗತ್ಯ, ಒಳಾಂಗಣ ಸಮಾರಂಭ, ಜನ ದಟ್ಟಣೆ ಇರುವ ಕಡೆ ಮಾಸ್ಕ್ ಬಳಕೆ, ಸ್ಯಾನಿಟೈಸರ್ ಬಳಕೆ ಮಾಡಬೇಕು" ಎಂದು ಸಲಹೆ ನೀಡಿದರು.
ನಂತರ ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ. ದೇವಿ ಶೆಟ್ಟಿ ಮಾತನಾಡಿ, "ನಾನು ಕೋವಿಡ್ ಆರಂಭದ ಕಾಲದಿಂದಲೂ ಮಾಸ್ಕ್ ಇಲ್ಲದೆ ಕೆಲಸ ಮಾಡಿದ್ದೇನೆ, ರೋಗಿಗಳು ಮಾಸ್ಕ್ ಧರಿಸುತ್ತಿದ್ದರು ನಾನು ಧರಿಸುತ್ತಿರಲಿಲ್ಲ, ದೈವ ಬಲವೋ ಏನೋ ನಾನು ಮಾಸ್ಕ್ ಇಲ್ಲದೆ ಹಾಗೆಯೇ ಕೆಲಸ ಮಾಡಿದ್ದರೂ ಸಾಂಕ್ರಾಮಿಕ ನನಗೆ ಯಾವ ಸಮಸ್ಯೆ ತರಲಿಲ್ಲ, ಈಗ ಎಲ್ಲಾ ನಿಯಂತ್ರಣದಲ್ಲಿದೆ ಹಾಗಾಗಿ ಈಗ ಮಾಸ್ಕ್ ಸ್ಯಾನಿಟೈಸರ್ ಅಗತ್ಯವಿಲ್ಲ" ಎಂದರು.
ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ಡಾ. ಸುಧಾಕರ್, "ಜನದಟ್ಟಣೆ ಮತ್ತು ಒಳಾಂಗಣ ಕಾರ್ಯಕ್ರಮದಲ್ಲಿ
ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಮತ್ತಷ್ಟು ಸಮಯ ಮುಂದುವರೆಸಬೇಕು ಎನ್ನುವ ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಹೇಳಿಕೆಯನ್ನು ಬೆಂಬಲಿಸುತ್ತೇನೆ, ಕೋವಿಡ್ ನಿಯಂತ್ರಣದಲ್ಲಿದೆ, ಲಸಿಕೆ ಹಾಕಿಸಿಕೊಂಡಿದ್ದೇವೆ ಎಂದು ಮೈಮರೆಯುವುದು ಒಳ್ಳೆಯದಲ್ಲ, ಮತ್ತಷ್ಟು ಸಮಯ ಮುಂಜಾಗ್ರತಾ ಕ್ರಮ ವಹಿಸಬೇಕು" ಎಂದು ಕರೆ ನೀಡಿದರು.