ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾವಳ್ಳಿಪುರ ಕಸದ ಯಾರ್ಡ್‌ನಲ್ಲಿ ಕೋವಿಡ್ ಮೃತರ ಸಾಮೂಹಿಕ ಸ್ಮಶಾನ ನಿರ್ಮಾಣ !

|
Google Oneindia Kannada News

ಬೆಂಗಳೂರು ಏಪ್ರಿಲ್ 28: ಮಾವಳ್ಳಿಪುರ, ಈ ಹೆಸರು ಕೇಳಿದ ಕೂಡಲೆ ಕಣ್ಣು ಮುಂದೆ ಕಾಣುವುದು ಕಸದ ರಾಶಿಗಳು. ಮೇಲೆ ಹಾರಾಡುವ ರಣ ಹದ್ದುಗಳು, ಕಸದಿಂದ ಕ್ಯಾನ್ಸರ್‌ಗೆ ತುತ್ತಾಗಿರುವ ಮಾವಳ್ಳಿಪುರದ ಜನ. ಜನರ ನರಕ ಬದುಕು ನೋಡಿ ಹೈಕೋರ್ಟ್ ನೀಡಿದ್ದ ಆದೇಶ ಉಲ್ಲಂಘನೆ ಮಾಡಿ ಇದೇ ಜಾಗದಲ್ಲಿ ಕೋವಿಡ್ ಸೋಂಕಿನಿಂದ ಸಾವಿಗೀಡಾಗುವ ಮೃತ ದೇಹಗಳನ್ನು ಸುಡುವ "ಸಾಮೂಹಿಕ ಸ್ಮಶಾನವನ್ನು ಬಿಬಿಎಂಪಿ ನಿರ್ಮಿಸುತ್ತಿದೆ.

ಕಸದ ರಾಶಿಗಳ ನಡುವೆ ಬೆಂಗಳೂರಿನಲ್ಲಿ ಬಹುದೊಡ್ಡ ಸಾಮೂಹಿಕ ಸ್ಮಶಾನ ನಿರ್ಮಾಣವಾಗುತ್ತಿದೆ. ಪ್ರತಿರೋಧ ತೋರಿದ ಮಾವಳ್ಳಿಪುರ ಜನರನ್ನು ನಿಯಂತ್ರಿಸಲು ಐದು ನೂರು ಪೊಲೀಸರನ್ನು ನಿಯೋಜಿಸಿದ್ದಾರೆ. ಪ್ರತಿಭಟನೆ ನಡೆಸಿದವರನ್ನು ಕೋವಿಡ್ ನಿಯಮ ಉಲ್ಲಂಘನೆ ಅಡಿಯಲ್ಲಿ ಬಂಧಿಸುವ ಬೆದರಿಕೆಯೊಡ್ಡಿ ಕಸದ ಗುಡ್ಡೆಗಳ ನಡುವೆ ಸಾಮೂಹಿಕ ಸ್ಮಶಾನವನ್ನು ಸಿದ್ಧಪಡಿಸಿದೆ ಬಿಬಿಎಂಪಿ !

 ಕೋವಿಡ್ ಸರಣಿ ಸಾವುಗಳು

ಕೋವಿಡ್ ಸರಣಿ ಸಾವುಗಳು

ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ. ದಿನೇ ದಿನೇ ಕೊರೊನಾ ಸೋಂಕಿಗೆ ಬಲಿಯಾಗುತ್ತಿರುವರ ಸಂಖ್ಯೆ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿರುವ ಚಾಮರಾಜಪೇಟೆ, ಸುಮನಹಳ್ಳಿ, ಹೆಬ್ಬಾಳ, ತಾವರೆಕರೆ, ಕೆಂಗೇರಿ ಸ್ಮಶಾನಗಳಲ್ಲಿ ಅಂತಿಮ ಕ್ರಿಯೆಗಾಗಿ ಮೃತದೇಹಗಳು ಸಾಲುಗಟ್ಟಿ ನಿಲ್ಲುತ್ತಿವೆ. ಜನ ಸಮಾನ್ಯರು ಸರ್ಕಾರದ ವಿರುದ್ಧ ತಿರುಗಿ ಬಿದ್ದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದರಿಂದ ಪಾರಾಗಲು ಹೊಸ ದಾರಿ ಹುಡುಕಲು ಮುಂದಾಗಿರುವ ಸರ್ಕಾರ ಮಾವಳ್ಳಿಪುರದ ಕಸ ಡಂಪ್‌ಯಾರ್ಡ್‌ನಲ್ಲೇ "ಸಾಮೂಹಿಕ ಸ್ಮಶಾನ" ನಿರ್ಮಿಸುತ್ತಿದೆ. ಈ ಸಂಬಂಧ ಬುಧವಾರ ಪೊಲೀಸರು ಮತ್ತು ಕಂದಾಯ ಅಧಿಕಾರಿಗಳು ಬುಧವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದರು. ಗುರುವಾರ ಮಧ್ಯಾಹ್ನದ ವೇಳೆಗೆ ಸಾಮೂಹಿಕ ಸ್ಮಶಾನ ಸಿದ್ಧಪಡಿಸುವ ಕಾರ್ಯದಲ್ಲಿ ನೂರಾರು ಜೆಸಿಬಿಗಳನ್ನು ಇಳಿಸಲಾಗಿದೆ. ಅಗತ್ಯ ಸೌದೆಯನ್ನು ಕೂಡ ಸ್ಥಳೀಯರ ವಿರೋಧದ ನಡುವೆ ಸಾಗಿಸಲಾಗಿದೆ.

ವಿಮಾನ ಟೇಕಾಫ್‌ಗೆ ರಣ ಹದ್ದುಗಳ ಕಾಟ

ವಿಮಾನ ಟೇಕಾಫ್‌ಗೆ ರಣ ಹದ್ದುಗಳ ಕಾಟ

ಮಾವಳ್ಳಿಪುರದಲ್ಲಿ ಕಸದ ರಾಶಿಗಳನ್ನು ತುಂಬಿದ್ದರಿಂದ ನೂರು ಕುಟುಂಬದಲ್ಲಿ ನಲವತ್ತು ಮಂದಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರು. ಕಸದ ರಾಶಿಗಳಿಂದ ಇಡೀ ಅಂತರ್ಜಲ ಕಲ್ಮಶವಾಗಿರುವ ಅಂಶ ಬೆಳಕಿಗೆ ಬಂತು. ಒಂದಡೆ ರಣಹದ್ದುಗಳ ರಣಕೇಕೆ. ಇನ್ನೊಂದಡೆ ನೊಣಗಳ ಉಪಟಳ, ಜತೆಗೆ ಕ್ಯಾನ್ಸರ್ ಎಂಬ ಮಾರಕ ರೋಗ. ಇದರಿಂದ ರೋಸಿಹೋಗಿದ್ದ ಜನ ಸಾಕಷ್ಟು ಹೋರಾಟ ನಡೆಸಿದ್ದರು. ಅಂತಿಮವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರು.

2014 ರಲ್ಲಿ ಸ್ಪಷ್ಟ ಆದೇಶ ನೀಡಿದ್ದ ಹೈಕೋರ್ಟ್ ನ್ಯಾಯಪೀಠ, ಮಾವಳ್ಳಿಪುರದಲ್ಲಿ ಬಯೋ ಮೈನಿಂಗ್‌ಗೆ ಮಾತ್ರ ಅವಕಾಶ ನೀಡಲಾಗಿದೆ. ಇದರ ಪ್ರಕಾರ ಆರ್ಗಾನಿಕ್ ವೇಸ್ಟ್‌ನ್ನು ಬೇರ್ಪಡಿಸಿ ಗೊಬ್ಬರ ತಯಾರಿಸಲಷ್ಟೇ ಅನುಮತಿ ನೀಡಿತ್ತು. ಅದರಲ್ಲೂ ಕಸದ ರಾಶಿಗಳು ತುಂಬಿರುವ ಕಾರಣ ರಣ ಹದ್ದುಗಳು ಹಾರಾಡುತ್ತಿದ್ದವು. ಇದರಿಂದ ಯಲಹಂಕ ವಾಯು ನೆಲೆಯಿಂದ ಟೇಕಾಫ್‌ ಆಗುವ ವಿಮಾನಗಳಿಗೆ ಭಾರೀ ಅಪಾಯ ಆಗುವ ಸಾಧ್ಯತೆಯ ಬಗ್ಗೆ ಕೂಡ ಹೈಕೋರ್ಟ್ ಕಳವಳ ವ್ಯಕ್ತಪಡಿಸಿ ಭೂಮಿಯಲ್ಲಿ ಕಸ ತುಂಬದಂತೆ ಬಿಬಿಎಂಪಿಗೆ ನಿರ್ದೇಶನ ನೀಡಿತ್ತು.

2020ರ ಸಮೀಕ್ಷೆಯ ಸತ್ಯಾಂಶಗಳು

2020ರ ಸಮೀಕ್ಷೆಯ ಸತ್ಯಾಂಶಗಳು

ಇದರ ಬೆನ್ನನ್ನೇ ಮಾವಳ್ಳಿಪುರದಲ್ಲಿ ಎನ್ವಿರಾನ್ಮೆಂಟಲ್ ಸೋಸಿಯಲ್ ಜಸ್ಟೀಸ್ ಸಂಸ್ಥೆ 2020 ರಲ್ಲಿ ಜನರ ಆರೋಗ್ಯದ ಬಗ್ಗೆ ಸಮೀಕ್ಷೆ ನಡೆಸಿತ್ತು. ಮಾವಳ್ಳಿಪುರದಲ್ಲಿರುವ 100 ಕುಟುಂಬಗಳ ಪೈಕಿ 45 ಮಂದಿ ಕ್ಯಾನ್ಸರ್ ಗೆ ತುತ್ತಾಗಿರುವ ಆಘಾತಕಾರಿ ಸಂಗತಿ ಸಮೀಕ್ಷೆಯಲ್ಲಿ ಹೊರ ಬಿದ್ದಿತ್ತು. ಮಾತ್ರವಲ್ಲ ನೂರಾರು ಮಂದಿ ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವರು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಅಂಶ ಸಮೀಕ್ಷೆಯಲ್ಲಿ ಬಹಿರಂಗವಾಗಿತ್ತು.

ಈ ಆಘಾತಕಾರಿ ಅಂಶವನ್ನು ಸಹ ಹೈಕೋರ್ಟ್ ಗಮನಕ್ಕೆ ತರಲಾಗಿತ್ತು. ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿ ಸುಮಾರು 60 ಕ್ಕೂ ಹೆಚ್ಚು ಟನ್ ಕಸವನ್ನು ಗುಡ್ಡೆ ಹಾಕಿರುವ ಮಾಹಿತಿಯನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು. ಇದು ಮಾವಳ್ಳಿಪುರದ ಅಸಲಿ ಚಿತ್ರಣ. ಇದರ ನಡುವೆ ಇದೇ ಜಾಗದಲ್ಲಿ ಸಾಮೂಹಿಕ ಸ್ಮಶಾನ ನಿರ್ಮಾಣ ಮಾಡಿ ಬಿಬಿಎಂಪಿ "ಮಾವಳ್ಳಿಪುರ ಸ್ಮಶಾನ" ನಿರ್ಮಾಣಕ್ಕೆ ಅಡಿಗಲ್ಲು ಹಾಕಿದೆ.

ವಿಶ್ವನಾಥ್ ಮತ್ತು ಸಾಮ್ರಾಟ್ ನೇತೃತ್ವ

ವಿಶ್ವನಾಥ್ ಮತ್ತು ಸಾಮ್ರಾಟ್ ನೇತೃತ್ವ

ಇಷ್ಟೆಲ್ಲಾ ವಿವಾದದ ನಡುವೆಯೂ ಮಾವಳ್ಳಿಪುರದಲ್ಲಿ ಸಾಮೂಹಿಕ ಸ್ಮಶಾನ ನಿರ್ಮಾಣದ ಮುಂದಾಳತ್ವ ವಹಿಸಿರುವುದು ಕಂದಾಯ ಸಚಿವ ಆರ್. ಅಶೋಕ್ ಮತ್ತು ಸ್ಥಳೀಯ ಶಾಸಕ ಎಸ್. ಆರ್ ವಿಶ್ವನಾಥ್. ಬುಧವಾರ ಕೇವಲ ಅಧಿಕಾರಿಗಳನ್ನು ಕಳುಹಿಸಿದ್ದ ಇವರು ಇದೀಗ ಗುರುವಾರ ಸ್ವತಃ ಇವರೇ ಅಖಾಡಕ್ಕೆ ಇಳಿದಿದ್ದಾರೆ. ಸುಮಾರು ಐದುನೂರು ಪೊಲೀಸರ ಬಿಗಿ ಭದ್ರತೆಯಲ್ಲಿ ಜೆಸಿಬಿಗಳಿಂದ ಸ್ಮಶಾನ ನಿರ್ಮಾಣ ಕಾರ್ಯ ನಡೆಸುತ್ತಿದ್ದಾರೆ. ಸ್ಥಳೀಯರು ಎಷ್ಟೇ ಪ್ರತಿರೋಧ ನಡೆಸಿದರು ಕೊವಿಡ್ ನಿಯಮ ಉಲ್ಲಂಘನೆ ಹೆಸರಿನಲ್ಲಿ ಬಂಧಿಸುವುದಾಗಿ ಹೆದರಿಸಿದ್ದಾರೆ. ಇದರಿಂದ ಮಾವಳ್ಳಿಪುರ ಜನರು ಪುನಃ ಕಂಗೆಟ್ಟಿದ್ದಾರೆ.

ಸ್ಥಳೀಯರ ಮನದಾಳದ ಮಾತು

ಸ್ಥಳೀಯರ ಮನದಾಳದ ಮಾತು

ಮಾವಳ್ಳಿಪುರದಲ್ಲಿ ಕಸದ ಡಂಪಿಂಗ್ ಯಾರ್ಡ್‌ನಿಂದಾಗಿ ನೂರು ಕುಟುಂಬದಲ್ಲಿ 45 ಮಂದಿ ಸಾವನ್ನಪ್ಪಿದ್ದಾರೆ. ಅನೇಕರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬಯೋ ಮೈನಿಂಗ್ ಬಿಟ್ಟು ಬೇರೆ ಏನೇ ಮಾಡಕೂಡದು ಎಂದು ಹೈಕೋರ್ಟ್ ಹೇಳಿದೆ. ಇದರ ನಡುವೆಯೂ ಎಲ್ಲವೂ ಗಾಳಿಗೆ ತೂರಿ ಸಾಮೂಹಿಕ ಸ್ಮಶಾನ ನಿರ್ಮಾಣ ಮಾಡುತ್ತಿದ್ದಾರೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ನಮ್ಮನ್ನು ಬಂಧಿಸುವುದಾಗಿ ಹೆದರಿಸಿದರು. ಐದು ನೂರು ಪೊಲೀಸರನ್ನು ಬಳಸಿ ನಮ್ಮನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಜಾಸ್ತಿ ಮಾತಾಡಬೇಡಿ ಎಲ್ಲರನ್ನೂ ಬಂಧಿಸುತ್ತೇವೆ ಎಂದು ಹೆದರಿಸುತ್ತಿದ್ದಾರೆ. ಒಂದು ಮೃತ ದೇಹ ಸುಡುವ ಜತೆಗೆ ಐದು ಪಿಪಿಇ ಕಿಟ್ ಗಳನ್ನು ಸುಡುತ್ತಾರೆ. ನೂರಾರು ಹೆಣಗಳ ಜತೆಗೆ ಲಕ್ಷಾಂತರ ಪಿಪಿಇ ಕಿಟ್ ಸುಡುವುದರಿಂದ ಇಲ್ಲಿ ಪರಿಸರ ಮಾಲಿನ್ಯದಿಂದ ನಾವೇ ಸಾಯಬೇಕಾಗುತ್ತದೆ. ಈ ಕುರಿತು ತಮ್ಮ ಅಹವಾಲನ್ನು ಬಿಬಿಎಂಪಿ ಆಯುಕ್ತರಿಗೆ ನೀಡಿದ್ದೇವೆ. ನಮ್ಮ ಬದುಕಿನ ಮೇಲೆ ಸ್ಮಶಾನ ನಿರ್ಮಾಣ ಮಾಡುತ್ತಿದ್ದಾರೆ ಎಂದು ಮಾವಳ್ಳಿಪುರದ ನಿವಾಸಿ ರಮೇಶ್ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

Recommended Video

ಬೆಂಗಳೂರಿನ 3 ಸಾವಿರ ಸೋಂಕಿತರು ನಾಪತ್ತೆ! ಹಳ್ಳಿಗಳಿಗೆ ತೆರಳಿದ್ದರೆ ಅಪಾಯ ಕಟ್ಟಿಟ್ಟಬುತ್ತಿ.. | Oneindia Kannada
ಏರ್‌ ಫೋರ್ಸ್‌ಗೆ ಹದ್ದುಗಳ ಕಾಟ

ಏರ್‌ ಫೋರ್ಸ್‌ಗೆ ಹದ್ದುಗಳ ಕಾಟ

ಮಾವಳ್ಳಿಪುರದಲ್ಲಿ 2020 ರಲ್ಲಿ ಇಎಸ್‌ಜಿ ನಡೆಸಿದ ಸಮೀಕ್ಷೆ ಪ್ರಕಾರ ನೂರು ಕುಟುಂಬದಲ್ಲಿ 45 ಮಂದಿ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ. ಇಲ್ಲಿ ರಣ ಹದ್ದುಗಳು ಹಾರಾಡುವ ಕಾರಣದಿಂದ ಯಲಹಂಕ ವಾಯು ನೆಲೆಯಲ್ಲಿ ಟೇಕಾಫ್ ಆಗುವ ವಿಮಾನಗಳಿಗೆ ಆಪತ್ತು ಎದುರಾಗಿದೆ. ಹಳ್ಳಿಗಳು ಸ್ಪರ್ಶಿಸಿದರೆ ವಿಮಾನಗಳು ಅವಘಡಕ್ಕೆ ತುತ್ತಾಗುತ್ತವೆ. ಎಲ್ಲಾ ವಾಸ್ತವ ಗಮನಿಸಿದ್ದ ಹೈಕೋರ್ಟ್ ಕೇವಲ ಬಯೋ ಮೈನಿಂಗ್‌ಗೆ ಅವಕಾಶ ನೀಡಿ ಹಲವು ನಿರ್ದೇಶನ ನೀಡಿತ್ತು. ಬಿಬಿಎಂಪಿ ಕೋರ್ಟ್ ಆದೇಶ ಉಲ್ಲಂಘನೆ ಮಾಡಿ ಸಾಮೂಹಿಕ ಸ್ಮಶಾನ ನಿರ್ಮಾಣ ಮಾಡಲು ಹೊರಟಿದೆ. ಈ ಕುರಿತು ಬಿಬಿಎಂಪಿ ಆಯುಕ್ತ ಗೌರವಗುಪ್ತ ಅವರಿಗೆ ಮನವಿ ನೀಡಿದ್ದೇವೆ. ನ್ಯಾಯಾಲಯದ ಆದೇಶ ಮೀರಿ ಅಲ್ಲಿಯೇ ಸಾಮೂಹಿಕ ಸ್ಮಶಾನ ನಿರ್ಮಿಸಿದಲ್ಲಿ ಈ ಕುರಿತು ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಇಎಸ್‌ಜಿ ಸಂಸ್ಥೆಯ ರಿಸರ್ಚ್‌ ಅಸೋಸಿಯೇಟ್ ಅಶ್ವಿನ್ ಲೋಬೋ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

English summary
Amid mass protests, the government has built a large mass graveyard for the covid deaths in Mavallipura know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X