ಸಾಲ ವಾಪಸು ಕೊಡದಿದ್ದಕ್ಕೆ ವಿವಸ್ತ್ರಗೊಳಿಸಿ ನಾಗಿಣಿ ಡ್ಯಾನ್ಸ್ ಮಾಡಿಸಿದ್ದ ಭೂಪ!
ಬೆಂಗಳೂರು, ಮಾ. 14: ಎರಡು ಲಕ್ಷ ರೂಪಾಯಿ ಸಾಲ ಮರುಪಾವತಿ ಮಾಡಲಿಲ್ಲ ಎಂಬ ಕಾರಣಕ್ಕೆ ಯುವಕನನ್ನು ಬೆತ್ತಲೆಗೊಳಿಸಿ ನಾಗಿಣಿ ಡ್ಯಾನ್ಸ್ ಮಾಡಿಸಿ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿರುವ ಘಟನೆ ಬೆಂಗಳೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಯುವಕನ ನಾಗಿಣಿ ಡಾನ್ಸ್ ಮಾಡಿದ್ದ ಭೂಪನಿಗೆ ಹೈಕೋರ್ಟ್ ಜಾಮೀನು ನಿರಾಕರಣೆ ಮಾಡಿ ಮಹತ್ವದ ಆದೇಶ ಹೊರಡಿಸಿದೆ. ದಯಾಳು ಮಂಜ ಅಲಿಯಾಸ್ ಪುಲಿ ಮಂಜ ಬಂಧನಕ್ಕೆ ಒಳಗಾಗಿದ್ದು, ಜಾಮೀನು ನಿರಾಕರಣೆಯಾಗಿದ್ದು ಇದೀಗ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾನೆ.
ಸತೀಶ್ ಎಂಬಾತ ಪುಲಿಮಂಜನ ಬಳಿ ಎರಡು ಲಕ್ಷ ರೂಪಾಯಿ ಸಾಲ ಪಡೆದಿದ್ದ. ಸಮಯಕ್ಕೆ ಸರಿಯಾಗಿ ಸಾಲ ತೀರಿಸಲು ಆಗಿರಲಿಲ್ಲ. ಸಾಲ ತೀರಿಸುವಂತೆ ಪುಲಿ ಮಂಜ ಬೆದರಿಕೆ ಹಾಕಿದ್ದ. ಕೆಲವೇ ದಿನದಲ್ಲಿ ಸಾಲ ಕೊಡುವುದಾಗಿ ಸತೀಶ್ ಹೇಳಿದರೂ ಅವನ ಮಾತು ಕೇಳಿರಲಿಲ್ಲ. ಅ ಬಳಿಕ ತನ್ನ ಬಂಟರನ್ನು ಕಳುಹಿಸಿ ಸತೀಶ್ ಎಂಬಾತನನ್ನ ಆವಲಹಳ್ಳಿಯ ಮೈದಾನಕ್ಕೆ ಕರೆಸಿದ್ದ ಪುಲಿ ಮಂಜ, ನನ್ನ ಎರಡು ಲಕ್ಷ ರೂ. ಹಣ ಕೊಡು ಎಂದು ಪೀಡಿಸಿದ್ದಾನೆ. ನನ್ನ ಬಳಿ ಹಣವಿಲ್ಲ ಎಂದು ಹೇಳಿದ ಕೂಡಲೇ ವಿವಸ್ತ್ರಗೊಳಿಸಿ ಸತೀಶ್ ನಿಂದ ನಾಗಿಣಿ ಡ್ಯಾನ್ಸ್ ಮಾಡಿಸಿ ಅದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡು ಸಮಾಜಿಕ ಜಾಲ ತಾಣದಲ್ಲಿ ಹರಿ ಬಿಟ್ಟಿದ್ದಾನೆ.

ಈ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಆವಲಹಳ್ಳಿ ಪೊಲೀಸರು ಪುಲಿ ಮಂಜನನ್ನು ಬಂಧಿಸಿದ್ದರು. ಜಾಮೀನು ಕೋರಿ ಪುಲಿ ಮಂಜ ಹೈಕೋರ್ಟ್ ಮೆಟ್ಟಿಲೇರಿದರೂ, ಇದೊಂದು ಗಂಭೀರ ಪ್ರಕರಣ ಎಂದು ಪರಿಗಣಿಸಿ ನ್ಯಾಯಾಲಯ ಜಾಮೀನು ನಿರಾಕರಣೆ ಮಾಡಿದೆ.












Click it and Unblock the Notifications