PSI ನೇಮಕಾತಿಯಲ್ಲಿ ಭ್ರಷ್ಟಾಚಾರ: ಸರ್ಕಾರದ ವಿರುದ್ಧ ರಾಮಲಿಂಗಾರೆಡ್ಡಿ ಗಂಭೀರ ಆರೋಪ
ಬೆಂಗಳೂರು ಏಪ್ರಿಲ್ 15: ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ವಿಚಾರದಲ್ಲಿ ಪ್ರಮುಖ ಆರೋಪಿ ಆಗಿರುವ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ವಿಧಾನಸೌಧದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿಯಲ್ಲಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ ಅವರು, 'PSI ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಪರೀಕ್ಷೆ ಬರೆದ ಬಿಜೆಪಿ ಕಾರ್ಯಕರ್ತರು, ಆರ್ ಎಸ್ ಎಸ್ ನವರನ್ನೇ ನೇಮಕ ಮಾಡಿಕೊಂಡಿದ್ದಾರೆ. ಈ ಬಗ್ಗೆ ನಮ್ಮ ಬಳಿ ಸಂಪೂರ್ಣ ದಾಖಲೆ ಇದೆ' ಎಂದು ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ರಾಮಲಿಂಗಾರೆಡ್ಡಿ ಅವರ ಹೇಳಿಕೆಗೆ ಪೂರಕವಾಗಿ ಮಾತನಾಡಿದ ಪ್ರಿಯಾಂಕ್ ಖರ್ಗೆ,' ಈಶ್ವರಪ್ಪ ಅವರು ರಾಜೀನಾಮೆ ಕೇಳುವುದು ಮಾತ್ರ ನಮ್ಮ ಉದ್ದೇಶವಿಲ್ಲ. ಈ ಸರ್ಕಾರ 40% ಕಮಿಷನ್ ಪಡೆಯುತ್ತಿದೆ. ಸರ್ಕಾರವನ್ನು ಕಿತ್ತು ಬೀಸಾಕಬೇಕಿದೆ. ಕಳೆದ ತಿಂಗಳು ನಾನೊಂದು ಸುದ್ದಿಗೋಷ್ಠಿ ಮಾಡಿದ್ದೆ. ದೇವರಾಜು ಅರಸು ನಿಗಮದಲ್ಲಿ, ಅಂಬೇಡ್ಕರ್ ನಿಗಮದಲ್ಲಿ ಬೋರ್ ವೆಲ್'ಗಳನ್ನು ಕೊರೆಸುವುದರಲ್ಲಿ ಕಮಿಷನ್ ನಡೆಯುತ್ತಿದೆ. ನಾನು ಆರೋಪಿಸಿದ ಬಳಿಕ ತನಿಖೆಗೆ ಆದೇಶ ಮಾಡಿದ್ದಾರೆ. ಆದರೆ ಬೋರ್‌ವೆಲ್ ಕೊರೆಯುವುದನ್ನು ನಿಲ್ಲಿಸಿಲ್ಲ. ಕೆಲಸ ನಿಲ್ಲಿಸದೇ ಹೇಗೆ ತನಿಖೆ ಮಾಡುತ್ತಿದ್ದಾರೆ. ಕೋಟ ಶ್ರೀನವಾಸ ಪೂಜಾರಿ ಭ್ರಷ್ಟರಲ್ಲ ಎಂದುಕೊಂಡಿದ್ದೆ. ಈ ಕೆಲಸದಲ್ಲಿ ನಿಮಗೆ ಎಷ್ಟು ಕಿಕ್‌ಬ್ಯಾಕ್ ಬರುತ್ತಿದೆ? ಕಿಕ್‌ಬ್ಯಾಕ್ ಸಿಗದಿದ್ದರೆ ಕೆಲಸವನ್ನು ಯಾಕೆ ನಿಲ್ಲಿಸಿಲ್ಲ? ಕೋಟ ಶ್ರೀನಿವಾಸ ಪೂಜಾರಿ' ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.

ಜನ ಈಗಾಗಲೇ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸರ್ಕಾರ ನೌಕರಿ ಕೊಡುವ ವಿಚಾರದಲ್ಲಿ ಭ್ರಷ್ಟಾಚಾರ ನಡೆಸುತ್ತಿದೆ. 75 ಸಾವಿರ ಅಭ್ಯರ್ಥಿಗಳು ಪಿಎಸ್‌ಐ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ನಂತರ ಅಭ್ಯರ್ಥಿ ಗಳು ಪರೀಕ್ಷೆಯಲ್ಲಿ ಅಕ್ರಮವಾಗಿರುವ ಸಾಧ್ಯತೆ ಇದೆ ಅಂತಾ ದೂರು ಕೊಟ್ಟರು. ಆಗ ಗೃಹ ಮಂತ್ರಿಗಳು ಆ ರೀತಿ ಅಗಿಲ್ಲ ಅಂತಾ ಸದನದಲ್ಲಿ ಉತ್ತರ ಕೊಟ್ಟರು. ಇದು ಉಡಾಫೆ ಉತ್ತರ. ಆದರೆ ಈಗ ಮತ್ತೆ ಗೃಹ ಮಂತ್ರಿಗಳು ಇದರಲ್ಲಿ ಅಕ್ರಮವಾಗಿರುವ ಸಾದ್ಯತೆ ಇದೆ ಅಂತಾ ಸಿಐಡಿ ತನಿಖೆಗೆ ಕೊಟ್ಟಿದ್ದಾರೆ. ಬಿಜೆಪಿಯ ಪದಾಧಿಕಾರಿಗಳೇ ಈ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದಾರೆ. ಅವರನ್ನು ಈ 40% ಸರ್ಕಾರ ಕಾಪಾಡುತ್ತಿದೆ. ಈಗ ಪರೀಕ್ಷೆ ಬರೆದ ಸುಮಾರು 75 ಸಾವಿರ ಅಭ್ಯರ್ಥಿಗಳು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸರಿಯಾಗಿ ತನಿಖೆ ನಡೆದರೆ ಇನ್ನೂ ಎರಡು ವಿಕೆಟ್ ಬೀಳುತ್ತವೆ ಎಂದು ಪ್ರಿಯಾಂಕ್ ಖರ್ಗೆ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಜೊತೆಗೆ ನಿಷ್ಪಕ್ಷಪಾತವಾಗಿ ತನಿಖೆ ಮಾಡಿದರೆ ಅರ್ಧ ಕ್ಯಾಬಿನೆಟ್ ಖಾಲಿಯಾಗುತ್ತದೆ. ಆಗ ಅನಿವಾರ್ಯವಾಗಿ ವಿಧಾನಸಭೆ ವಿಸರ್ಜನೆ ಮಾಡಬೇಕಾಗುತ್ತದೆ ಎಂದಿದ್ದಾರೆ.
545 ಪಿಎಸ್ಐ ಹುದ್ದೆ ಪರೀಕ್ಷೆಯಲ್ಲೂ ಅವ್ಯವಹಾರ ಆಗಿದೆ. ಈ ಬಗ್ಗೆ ಅಭ್ಯರ್ಥಿಗಳೇ ದೂರು ನೀಡಿದ್ರು. ಆದರೆ ಗೃಹ ಸಚಿವರು ಪರಿಷತ್ ನಲ್ಲಿ ಇದರಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ ಎಂದು ಉತ್ತರ ನೀಡಿದ್ದರು. ಒಬ್ಬ ಅಭ್ಯರ್ಥಿಯಿಂದ 70, ರಿಂದ 80 ಲಕ್ಷ ರೂ ಲಂಚ ಪಡೆದು ಆಯ್ಕೆ ಮಾಡಿದ್ದಾರೆ. ಅಧಿಕಾರಿಗಳು,ಗೃಹ ಸಚಿವರು ಇದರ ಹಿಂದೆ ಇದ್ದಾರೆ. ಪ್ರೀಡಂ ಪಾರ್ಕ್ ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲಿಗೆ ಹೋಗಲು ಯಾವುದೇ ಸಚಿವರಿಗೂ ತಾಕತ್ತಿಲ್ಲ. ಇವರ 40 ಪರ್ಸಂಟೇಜ್ ವಿಚಾರದಲ್ಲಿ ಅಭ್ಯರ್ಥಿಗಳ ಭವಿಷ್ಯ ಹಾಳಾಗಿದೆ. ಈ ಎರಡು ಪ್ರಕರಣದಲ್ಲಿ ಇನ್ನು 4 ವಿಕೇಟ್ ಹೋಗುತ್ತೆ. ಸಿಎಂ ಅವರು ಈ ಪ್ರಕರಣವನ್ನ ಹೈಕೋರ್ಟ್ ಹಾಲಿ ನ್ಯಾಯಾಧೀಶರ ತನಿಖೆ ನಡೆಸಬೇಕು. ಭ್ರಷ್ಟಾಚಾರ ಪ್ರಕರಣ ನಾವು ಸಹಿಸೋಲ್ಲ ಎಂದು ಸಿಎಂ ಕ್ರಮ ತೆಗೆದುಕೊಳ್ಳಲಿ ಎಂದು ಪ್ರಿಯಾಂಕ ಖರ್ಗೆ ಒತ್ತಾಯಿಸಿದ್ದಾರೆ.

ಮಾತ್ರವಲ್ಲದೇ ಬಿಜೆಪಿ ಪದಾಧಿಕಾರಿಯ ಶಾಲೆಯಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ. ಅದರ ಬಗ್ಗೆ ನಮ್ಮ ಬಳಿ ಸಂಪೂರ್ಣ ಮಾಹಿತಿ ಇದೆ. ಬಿಜೆಪಿ ಪದಾಧಿಕಾರಿ ಮನೆಗೆ ಹೊಗಿಲ್ಲ ಎಂದು ಗೃಹ ಸಚಿವರು ಹೇಳಲಿ. ನಮ್ಮ ಬಳಿ ಪೋಟೋ ಎಲ್ಲ ಇದೆ. ಈಶ್ವರಪ್ಪ ಬಂಧನ ಆಗಲಿ. ಆ ಮೇಲೆ ಎಲ್ಲ ದಾಖಲೆ ಬಹಿರಂಗಪಡಿಸುತ್ತೇವೆ. ಸರ್ಕಾರದ ಸಚಿವರು ಆಲ್ ಔಟ್ ಆಗ್ತಾರೆ ಎಂದು ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.












Click it and Unblock the Notifications