ಗಗನಕ್ಕೇರಿದ ಕೊತ್ತಂಬರಿ ಸೇರಿ ಇತರೆ ಸೊಪ್ಪು, ತರಕಾರಿಗಳ ಬೆಲೆ
ಬೆಂಗಳೂರು, ಜೂನ್ 26: ಕೊತ್ತಂಬರಿ ಸೊಪ್ಪಿನ ಬೆಲೆ ಏಕಾಏಕಿ ಗಗನಕ್ಕೇರಿದೆ . ನಾಟಿ ಕೊತ್ತಂಬರಿ ಸೊಪ್ಪಿನ ಕಂತೆ 80-90 ರೂಗೆ ಮಾರಾಟವಾಗುತ್ತಿದೆ.
ವೈದ್ಯರು ನಿಮಗೆ ಯಾವುದಾದರೂ ಕಾಯಿಲೆ ಇದೆ ಎಂದಾಗ ಆಗುತ್ತಲ್ಲಾ ಹಾಗೆ ಕೊತ್ತಂಬರಿ ಸೊಪ್ಪಿನ ಬೆಲೆ ಕೇಳಿದ ಹೆಂಗಸರ ಗತಿಯಾಗಿದೆ.
ತಿಂಗಳ ತರಕಾರಿಗಾಗಿ ಹೆಚ್ಚಿನ ಹಣವನ್ನೇ ಗಂಡನಿಂದ ಪಡೆದು, ಚೌಕಾಸಿ ಮಾಡಿ ಕಡಿಮೆ ಬೆಲೆಗೆ ತರಕಾರಿ, ಸೊಪ್ಪು ತೆಗೆದುಕೊಂಡು ಬಂದು, ಅರ್ಧ ಹಣವನ್ನು ಪರ್ಸಿಗೆ ಇಳಿಸುತ್ತಿದ್ದ ಮಹಿಳೆಯರು ಅಕ್ಷರಶಃ ಕಣ್ಣೀರಿಡುತ್ತಿದ್ದಾರೆ.
ಮುಂಗಾರು ಪೂರ್ವ ಮಳೆಯಿಂದಾಗಿ ಸೊಪ್ಪು ನಾಶವಾಗಿದ್ದು, ನಗರಕ್ಕೆ ಸರಬರಾಜು ಕಡಿಮೆಯಾಗಿದೆ. ಕಳೆದ ಹದಿನೈದು ದಿನಗಳಿಂದ ಬೆಲೆ ಕ್ರಮೇಣವಾಗಿ ಏರಿಕೆಯಾಗುತ್ತಿದೆ.
ಹಾಪ್‌ಕಾಮ್ಸ್‌ನಲ್ಲಿ ಒಂದು ಕೆಜಿ ಕೊತ್ತಂಬರಿ ಸೊಪ್ಪಿನ ಕಂತೆಗೆ 295 ರೂಗೆ ಮಾರಾಟ ಮಾಡಲಾಗುತ್ತಿದೆ. ಕೊತ್ತಂಬರಿ ಸೊಪ್ಪು ನಿತ್ಯ ಅಡುಗೆಗೆ ತುಂಬಾ ಅಗತ್ಯವಿರುವ ಕಾರಣ ಕೊಳ್ಳುವುದು ಅನಿವಾರ್ಯವಾಗಿದೆ.

ಆನೇಕಲ್, ದೇವನಹಳ್ಳಿ, ಚಿಕ್ಕಬಳ್ಳಾಪುರ, ಹೊಸಕೋಟೆ ಮತ್ತಿತರೆ ಪ್ರದೇಶಗಳಿಂದ ನಗರಕ್ಕೆ ಹೆಚ್ಚಿನ ಪ್ರಮಾಣದ ಕೊತ್ತಂಬರಿ ಸೊಪ್ಪು ಸರಬರಾಜಾಗುತ್ತಿದೆ. ಆದರೆ ಈ ಭಾಗಗಳಲ್ಲಿ ಮುಂಗಾರು ಮಳೆ ಕೊರತೆಯಿಂದ ಕೊಳವೆ ಬಾವಿಗಳು ಬರಿದಾಗಿವೆ. ಬೇಡಿಕೆಗೆ ತಕ್ಕಂತೆ ಸೊಪ್ಪು ಸಿಗದ ಕಾರಣ ಕೆಲ ವ್ಯಾಪಾರಸ್ಥರು ಬೆಳಗಾವಿಯಿಂದ ಸೊಪ್ಪನ್ನು ತರಿಸುತ್ತಿದ್ದಾರೆ.
ಕೊತ್ತಂಬರಿ ಸೊಪ್ಪಿನ ಜೊತೆಗೆ ಮೆಂತ್ಯೆ, ಪಾಲಕ್, ಸಂಟು, ಸಬ್ಬಸಿಗೆ ಹೀಗೆ ಬೇರೆ ಸೊಪ್ಪುಗಳ ಒಂದು ಕಂತೆಗೆ 15-20 ರೂಗಳಾಗಿವೆ. ಮಳೆ ಬಿದ್ದ ಕಾರಣ ಮುಂದಿನ ದಿನಗಳಲ್ಲಿ ದರ ಸ್ವಲ್ಪ ಇಳಿಕೆಯಾಗಬಹುದು. ಯಶವಂತಪುರ ಎಪಿಎಂಸಿ ಯಾರ್ಡ್‌ಗೆ ಬೆಳಗಾವಿಯಿಂದ ದಿನಕ್ಕೆ 5-6 ಲೋಡ್ ಕೊತ್ತಂಬರಿ ಸೊಪ್ಪು ಬರುತ್ತಿದೆ.
ಕಳೆದ ಹದಿನೈದು ದಿನಗಳ ಹಿಂದೆ ಕೊತ್ತಂಬರಿ ಸೊಪ್ಪು ಒಂದು ಕಟ್ಟಿಗೆ 30 ರೂ ಇತ್ತು. ಹಾಪ್‌ಕಾಮ್ಸ್‌ನಲ್ಲಿ ಕೊತ್ತಂಬರಿ ಸೊಪ್ಪು ಕೆಜಿಗೆ 295 ರೂ, ಪುದೀನಾ ಸೊಪ್ಪು ಕೆಜಿಗೆ 127 ರೂ, ಕರಿಬೇವು ಕೆಜಿಗೆ 65 ರೂಗೆ ಮಾರಾಟ ಮಾಡಲಾಗುತ್ತಿದೆ. ಹಾಪ್‌ಕಾಮ್ಸ್‌ನಲ್ಲಿ ಕೆಜಿ ಬದನೆಕಾಯಿ 46 ರೂ, ಬೀಟ್‌ರೂಟ್-48 ರೂ, ಕ್ಯಾರೇಟ್ 72 ರೂ, ಸೌತೆಕಾಯಿ 34 ರೂ, ಡಬಲ್ ಬೀನ್ಸ್ ಕೆಜಿಗೆ 227ರೂ, ಬೆಂಡೆಕಾಯಿ 45 ರೂಗೆ ಮಾರಾಟವಾಗುತ್ತಿದೆ.












Click it and Unblock the Notifications