ಬೆಂಗಳೂರಿನ ಸಿಂಗಂ ಇನ್ಸ್‌ಪೆಕ್ಟರ್ ಕಥೆ!
ಬೆಂಗಳೂರು, ಜೂ.14 : ತನ್ನನ್ನು "ಸಿಂಗಂ" ಎಂದು ಕರೆಯಬೇಕು ಎಂದು ಲಾರಿ ಮಾಲೀಕನಿಗೆ ಕಿರುಕುಳಕೊಟ್ಟಿದ್ದ ಕಲಾಸಿಪಾಳ್ಯ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಂ.ಎಲ್. ಪುರುಷೋತ್ತಮ್ ವಿರುದ್ಧ ಡಿಸಿಪಿ ಮಟ್ಟದಲ್ಲಿ ತನಿಖೆ ನಡೆಸಲು ಬೆಂಗಳೂರು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಆದೇಶ ನೀಡಿದ್ದಾರೆ.
"ನನ್ನನ್ನು ಸರ್ ಎಂದು ಕರೆಯಬೇಡ. ಪೊಲೀಸ್ ಡಿಪಾರ್ಟ್‌ಮೆಂಟ್ ನನ್ನ ಕರೆಯೋದು 'ಸಿಂಗಂ' ಅಂತ. ನೀನು ಹಾಗೆ 'ಸಿಂಗಂ' ಅಂತಲೇ ಕರೆಯಬೇಕು. ನಾಳೆ 1 ಲಕ್ಷ ರೂ. ಕೊಡದೇ ಹೋದರೆ ಹುಟ್ಟೋ ಮಗು ಮುಖ ನೋಡದಂತೆ ಮಾಡುತ್ತೇನೆ" ಎಂದು ಬೆದರಿಕೆ ಹಾಕಿದ್ದ ಇನ್ಸ್‌ಪೆಕ್ಟರ್ ಈಗ ತನಿಖೆ ಎದುರಿಸಬೇಕಾಗಿದೆ.

ಏನಿದು ಸಿಂಗಂ ಕಥೆ : ನಾಲ್ಕು ಲಾರಿ ಇಟ್ಟುಕೊಂಡು ಎಸ್ಎಂಕೆ ಎಂಟರ್ ಪ್ರೈಸಸ್ ಹೆಸರಿನಲ್ಲಿ ಉದ್ಯಮ ನಡೆಸುತ್ತಿರು ಮಾವಳ್ಳಿ ನಿವಾಸಿ ತಮೀಮ್ ಖಾನ್ ಅವರ ಮೇಲೆ ಕಲಾಸಿಪಾಳ್ಯ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಂ.ಎಲ್. ಪುರುಷೋತ್ತಮ್ ಅವರು ದೌರ್ಜನ್ಯ ನಡೆಸಿ ಬೆದರಿಕೆ ಹಾಕಿದ್ದರೆ ಎಂಬುದು ಆರೋಪ. [ಸಿಂಗಂ ಸ್ಟೈಲಿನ ಬೆಂಗಳೂರು ಪೊಲೀಸ್]
ಜೂನ್ 2ರಂದು ತಮೀಮ್ ಖಾನ್ ಮಾವಳ್ಳಿ ಮಸೀದಿ ಹತ್ತಿರ ಸ್ನೇಹಿತ ಮುಜಾಮಿಲ್ ಜತೆ ಮಾತನಾಡುತ್ತಿದ್ದಾಗ ಕಲಾಸಿಪಾಳ್ಯ ಠಾಣೆ ಹೊಯ್ಸಳ ಸಿಬ್ಬಂದಿ ಆಗಮಿಸಿ, ಇನ್ಸ್‌ಪೆಕ್ಟರ್ ಕರೆಯತ್ತಿದ್ದು, ಕೂಡಲೇ ಠಾಣೆಗೆ ಬರುವಂತೆ ಸೂಚಿಸಿದ್ದರು. ಇದಕ್ಕೆ ನಿರಾಕರಿಸಿದಾಗ ಪೊಲೀಸರು ಬಲವಂತವಾಗಿ ಠಾಣೆಗೆ ಅವರನ್ನು ಕರೆದುಕೊಂಡು ಹೋಗಿದ್ದರು.
ನಂತರ ಠಾಣೆಯಲ್ಲಿ ಪೊಲೀಸರು ತಮೀಮ್ ಮೇಲೆ ಹಲ್ಲೆ ನಡೆಸಿದ್ದಾರೆ. ಅಷ್ಟರಲ್ಲಿ ಠಾಣೆಗೆ ಬಂದ ಇನ್ಸ್‌ಪೆಕ್ಟರ್ ಪುರುಷೋತ್ತಮ್ ಸಹ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುದು ಆರೋಪ. ಏಕೆ ಹಲ್ಲೆ ಮಾಡುತ್ತಿರಿ? ಸಾರ್ ಎಂದು ತಮೀಮ್ ಪ್ರಶ್ನಿಸಿದ್ದೆ ದೌರ್ಜನ್ಯಕ್ಕೆ ಪ್ರಮುಖ ಕಾರಣವಾಗಿದೆ.
ಪುರುಪೋತ್ತಮ್ ಅವರು "ನನ್ನ ಸರ್ ಎಂದು ಕರೆಯುತ್ತೀಯಾ? ಡಿಪಾರ್ಟ್‌ಮೆಂಟ್ ನನ್ನ 'ಸಿಂಗಂ' ಎಂದು ಕರೆಯುತ್ತದೆ. ನೀನು ಕೂಡ 'ಸಿಂಗಂ' ಎಂದೇ ಕರೆಯುವಂತೆ ತಾಕೀತು ಮಾಡಿದ್ದರು. ಜತೆಗಿದ್ದ ಸಿಬ್ಬಂದಿಗಳು ಇನ್ಸ್‌ಪೆಕ್ಟರ್‌ನನ್ನು 'ಸಿಂಗಂ' ಎಂದು ಕರೆಯುವಂತೆ ಹೆದರಿಸಿದರು ಎಂದು ತಮೀಮ್ ಪೊಲೀಸರಿಗೆ ದೂರು ನೀಡಿದ್ದಾರೆ.
ತಮೀಮ್ ಬಳಿ ಪುರುಷೋತ್ತಮ್ ನಿಮ್ಮ ಉದ್ಯಮ ಚೆನ್ನಾಗಿ ನಡೆಯುತ್ತಿದೆ. ಜೂ.3ರ 11 ಗಂಟೆಯೊಳಗೆ 1 ಲಕ್ಷ ರೂ.ಗಳನ್ನು ನನಗೆ ಕೊಡಬೇಕು ಎಂದು ಬೆದರಿಸಿದ್ದಾರೆ. ಅಷ್ಟೊಂದು ಹಣ ನನ್ನಲ್ಲಿ ಇಲ್ಲ ಎಂದಾಗ, ಹಣ ಕೊಡದಿದ್ದರೆ, ಸುಳ್ಳು ಕೇಸ್‌ಗಳನ್ನು ಹಾಕಿ ಜೈಲಿಗೆ ಕಳುಹಿಸುತ್ತೇನೆ ಎಂದು ಹೆದರಿಸಿದ್ದಾರೆ ಎಂದು ತಮೀಮ್ ದೂರಿನಲ್ಲಿ ಹೇಳಿದ್ದಾರೆ.
ಘಟನೆ ಸಂಬಂಧ ತಮೀಮ್ ಖಾನ್ ಮುಖ್ಯಮಂತ್ರಿ, ಗೃಹ ಸಚಿವರು, ಡಿಜಿಪಿ ಹಾಗೂ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಘಟನೆ ಕುರಿತು ಡಿಸಿಪಿ ಮಟ್ಟದಲ್ಲಿ ತನಿಖೆ ನಡೆಸಲು ಬೆಂಗಳೂರು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಆದೇಶ ನೀಡಿದ್ದಾರೆ.












Click it and Unblock the Notifications