ORR : ಸಿಲ್ಕ್ ಬೋರ್ಡ್- ಹೆಬ್ಬಾಳ ರಿಂಗ್‌ರೋಡಿನ ಟ್ರಾಫಿಕ್ ತಿಳಿಗೊಳಿಸಲು ಪೊಲೀಸರು ಮಾಡುತ್ತಿರುವುದೇನು? ತಿಳಿಯಿರಿ
ಬೆಂಗಳೂರು, ಮಾರ್ಚ್ 11: ಬೆಂಗಳೂರಿನ ಸಿಲ್ಕ್ ಬೋರ್ಡ್‌ನಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಈ ರಸ್ತೆಯಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಕ್ರಮಗಳನ್ನು ಕೈಗೊಂಡಿದ್ದಾರೆ. ಪ್ರಮುಖವಾಗಿ, ಸಿಲ್ಕ್ ಬೋರ್ಡ್ ಮತ್ತು ಹೆಬ್ಬಾಳ ನಡುವಿನ ಹೊರ ವರ್ತುಲ ರಸ್ತೆ ಸಂಚಾರವನ್ನು ಸುಗಮಗೊಳಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ. ಅಡೆತಡೆಯಿಲ್ಲದ ಮತ್ತು ಸುಗಮ ವಾಹನ ಸಂಚಾರದ ವ್ಯವಸ್ಥೆಯನ್ನು ಸವಾರರಿಗೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.

ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಮೆಟ್ರೊ ಕಾಮಗಾರಿ
ಸಿಲ್ಕ್ ಬೋರ್ಡ್‌ನಲ್ಲಿ ಮುಖ್ಯ ಕ್ಯಾರೇಜ್ ಮಾರ್ಗದ ಜಾಗದಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಿಲ್ಕ್‌ಬೋರ್ಡ್ ಜಂಕ್ಷನ್ ಬಳಿ ಭಾರೀ ವಾಹನ ದಟ್ಟಣೆ ಉಂಟಾಗುತ್ತಿದೆ. ವಾಹನ ಸವಾರರು ಪರದಾಡುವಂತಾಗಿದೆ. ಗುರುವಾರದಿಂದ ಹೊರ ವರ್ತುಲ ರಸ್ತೆ ಉದ್ದಕ್ಕೂ ಸರ್ವಿಸ್ ರಸ್ತೆಗಳನ್ನು ಉತ್ತಮಗೊಳಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ಸಂಚಾರ ಪೊಲೀಸರು ಯೋಜನೆ ರೂಪಿಸಿದ್ದಾರೆ.

ಏಕಮುಖ ರಸ್ತೆಗಳಾಗಿ ಪರಿವರ್ತನೆ
ಹೊರ ವರ್ತುಲ ರಸ್ತೆ ಸುತ್ತಲಿನ ಸರ್ವಿಸ್ ರಸ್ತೆಗಳನ್ನು ಏಕಮುಖ ರಸ್ತೆಗಳಾಗಿ ಪರಿವರ್ತಿಸಿದ್ದಾರೆ. ಜೊತೆಗೆ, ಸಂಚಾರ ದಟ್ಟಣೆಯನ್ನು ನಿವಾರಿಸಲು ಅವರು ಬಸ್‌ಗಳನ್ನು ಸೇವಾ ರಸ್ತೆಗಳಿಗೆ ಮರುಸ್ಥಾಪಿಸಿದ್ದಾರೆ. ಸರಕು ವಾಹನಗಳು ಮತ್ತು ಇತರ ಭಾರೀ ಮೋಟಾರು ವಾಹನಗಳನ್ನು ಸಹ ಈ ಸೇವಾ ರಸ್ತೆಗಳಿಂದ (ಪಿಕ್ ಹವರ್‌ನಲ್ಲಿ) ನಿಷೇಧಿಸಲಾಗಿದೆ. ಸರ್ವಿಸ್ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ನಿರ್ಬಂಧ ಹೇರಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ಈ ಕ್ರಮವು ದಟ್ಟಣೆಯ ಶೇಕಡಾ 25 ರಷ್ಟು ಕಡಿಮೆ ಮಾಡಬಹುದು ಎಂದು ಹಿರಿಯ ಟ್ರಾಫಿಕ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಶೇಷ ಆಯುಕ್ತ (ಸಂಚಾರ) ಹೇಳುವುದೇನು?
ನಗರದ ಪೂರ್ವ ಮತ್ತು ಆಗ್ನೇಯ ಭಾಗದ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಚೇರಿಗೆ ತೆರಳುವವರು ಸಂಚರಿಸುತ್ತಾರೆ. ಅಗರ ಕೆರೆ, ಇಬ್ಲೂರು ಜಂಕ್ಷನ್, ಬೆಳ್ಳಂದೂರು, ಮಾರತಹಳ್ಳಿಯ ಕಲಾಮಂದಿರ ಮುಂತಾದ ಸ್ಥಳಗಳು ಅಧಿಕಾರಿಗಳಿಗೆ ಸಮಸ್ಯೆಯಾಗಿವೆ ಎಂದು ವಿಶೇಷ ಆಯುಕ್ತ (ಸಂಚಾರ) ಡಾ.ಎಂ.ಎ.ಸಲೀಂ 'ಡೆಕ್ಕನ್ ಹೆರಾಲ್ಡ್'ಗೆ ಮಾಹಿತಿ ನೀಡಿದ್ದಾರೆ.
'ಮಂಗಳವಾರ, ಬುಧವಾರ ಮತ್ತು ಗುರುವಾರ ಈ ಪ್ರದೇಶಗಳಲ್ಲಿ ಅತಿ ಹೆಚ್ಚು ಟ್ರಾಫಿಕ್ ಪ್ರಮಾಣವಿರುವ ಮೂರು ವಾರದ ದಿನಗಳಾಗಿವೆ. ಆದ್ದರಿಂದ ಕಚೇರಿಗೆ ಹೋಗುವವರಿಗೆ ಪ್ರಯಾಣಿಸಲು ಸುಲಭವಾಗುವಂತೆ ಈ ದಿನಗಳಲ್ಲಿ ದಟ್ಟಣೆಯನ್ನು ನಿಯಂತ್ರಿಸಲು ಹೆಚ್ಚಿನ ಗಮನ ನೀಡಲಾಗುತ್ತದೆ' ಎಂದು ಅವರು ಹೇಳಿದ್ದಾರೆ.
ಟ್ರಾಫಿಕ್ ಮೇಲ್ವಿಚಾರಣೆಗಾಗಿ ಸಿಲ್ಕ್ ಬೋರ್ಡ್‌ನಿಂದ ಹೆಬ್ಬಾಳದವರೆಗಿನ ಹೊರ ವರ್ತುಲ ರಸ್ತೆ ಉದ್ದಕ್ಕೂ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಲಾಗಿದೆ. ಬೆಳ್ಳಂದೂರು ಮತ್ತು ಮಹದೇವಪುರದಲ್ಲಿ ಎರಡು ಹೊಸ ಟ್ರಾಫಿಕ್ ಪೊಲೀಸ್ ಠಾಣೆಗಳನ್ನು ತೆರೆಯುವ ಮೂಲಕ ಇದಕ್ಕೆ ಸಹಾಯ ಮಾಡಲಾಗಿದೆ. ಸುಮಾರು 80 ಹೊಸ ಟ್ರಾಫಿಕ್ ಪೊಲೀಸರನ್ನು ಈ ಮಾರ್ಗದಲ್ಲಿ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೆಟ್ರೋ ಕಾಮಗಾರಿ ಪೂರ್ಣಗೊಳ್ಳುವವರೆಗೆ ಸಂಚಾರ ವ್ಯತ್ಯಯ ಮತ್ತು ಟ್ರಾಫಿಕ್ ಕಿರಿಕಿತಿ ಇನ್ನೂ ಒಂದು ವರ್ಷ ಮುಂದುವರಿಯುವ ನಿರೀಕ್ಷೆಯಿದೆ.

ಬಿಟಿಎಂ ಲೇಔಟ್ ಬಳಿಯ ಸೆಂಟ್ರಲ್ ಸಿಲ್ಕ್ ಬೋರ್ಡ್
ಹೊಸೂರು ರಸ್ತೆ ಮತ್ತು ಹೊರ ವರ್ತುಲ ರಸ್ತೆಯ ಛೇದಕದಲ್ಲಿ ಬಿಟಿಎಂ ಲೇಔಟ್ ಬಳಿಯ ಸೆಂಟ್ರಲ್ ಸಿಲ್ಕ್ ಬೋರ್ಡ್ ಕಚೇರಿ ಸಂಕೀರ್ಣದ ಪಕ್ಕದಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಇದೆ. ಈ ಜಂಕ್ಷನ್ ಭಾರತದ ಅತ್ಯಂತ ಜನನಿಬಿಡ ಛೇದಕಗಳಲ್ಲಿ ಒಂದಾಗಿದೆ. ಇದ ಸಂಚಾರ ದಟ್ಟಣೆಯು ದೇಶದಲ್ಲಿ ಕುಖ್ಯಾತಿಯನ್ನು ಪಡೆದಿದೆ.
ಸಿಲ್ಕ್ ಬೋರ್ಡ್ ಜಂಕ್ಷನ್ ಬೆಂಗಳೂರಿನ ಎರಡು ಪ್ರಮುಖ ಐಟಿ ಕ್ಲಸ್ಟರ್‌ಗಳಿಗೆ ಗೇಟ್‌ವೇ ಆಗಿ ಕಾರ್ಯನಿರ್ವಹಿಸುತ್ತದೆ. ಔಟರ್ ರಿಂಗ್ ರೋಡ್ ಕ್ಲಸ್ಟರ್ (ಮಾರತಹಳ್ಳಿ, ವೈಟ್‌ಫೀಲ್ಡ್ ಮತ್ತು ಬೆಳ್ಳಂದೂರು) ಪೂರ್ವಕ್ಕೆ ಮತ್ತು ಎಲೆಕ್ಟ್ರಾನಿಕ್ ಸಿಟಿಗೆ ದಕ್ಷಿಣಕ್ಕೆ ಗೇಟ್ ವೇ ಆಗಿ ಸಿಲ್ಕ್ ಬೋರ್ಡ್ ಜಂಕ್ಷನ್ ಇದೆ.
2016 ರಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಮೀಕ್ಷೆಯ ಪ್ರಕಾರ ಜಂಕ್ಷನ್ ನಗರದ ಎರಡು ಅತ್ಯಂತ ಕಲುಷಿತ ಪ್ರದೇಶಗಳಲ್ಲಿ ಒಂದಾಗಿದೆ. ಇನ್ನೊಂದು ಪ್ರದೇಶ ವೈಟ್‌ಫಿಲ್ಡ್ ಆಗಿದೆ. ಹೆಚ್ಚಿನ ಟ್ರಾಫಿಕ್ ದಟ್ಟಣೆಯು ಜಂಕ್ಷನ್‌ನಲ್ಲಿನ ಮಾಲಿನ್ಯ ಏರಿಕೆಗೆ ಕಾರಣವಾಗಿದೆ.












Click it and Unblock the Notifications