ಶಿವರಾಮ ಕಾರಂತ ಬಡಾವಣೆ ಬಳಿ ಐಟಿ ಹಬ್ ನಿರ್ಮಾಣ: ಡಿಕೆ ಶಿವಕುಮಾರ್ ಮಹತ್ವದ ಹೇಳಿಕೆ
ಬೆಂಗಳೂರು, ಆಗಸ್ಟ್ 12: ಶಿವರಾಂ ಕಾರಂತ ಬಡಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಇಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಈ ಬಡಾವಣೆಯ ಬಳಿಯೇಐಟಿ ಹಬ್ ಮಾಡಲು ಜಾಗ ಮೀಸಲು ಇಡುವಂತೆ ನಿರ್ದೇಶನ ನೀಡಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಶಿವರಾಂ ಕಾರಂತ ಬಡಾವಣೆ ವೀಕ್ಷಣೆ ಬಳಿಕ ಮಾತನಾಡಿದ ಅವರು, ಶಿವರಾಂ ಕಾರಂತ ಬಡಾವಣೆ ವಿಚಾರಕ್ಕೆ ನಮ್ಮ ತೀರ್ಮಾನಗಳ ಬಗ್ಗೆ ಸುಪ್ರೀಂ ಕೋರ್ಟ್ ರಚನೆ ಮಾಡಿರುವ ಸಮಿತಿ ಜತೆಗೂ ನಮ್ಮ ತೀರ್ಮಾನದ ಬಗ್ಗೆ ಚರ್ಚೆ ಮಾಡಿದ್ದೇವೆ. ಬಿಡಿಎ ಅಧಿಕಾರಿಗಳು ತೀರ್ಮಾನ ಸಮಂಜಸವಾಗಿದೆ ಎಂದು ಒಪ್ಪಿದ್ದಾರೆ ಎಂದು ಹೇಳಿದರು.

ಈ ಬಡಾವಣೆಗೆ ಜಮೀನು ಕಳೆದುಕೊಂಡಿರುವವರಿಗೆ ಆದ್ಯತೆ ಮೇರೆಗೆ ಪರಿಹಾರ ನೀಡಬೇಕು. ಇಲ್ಲಿ ಕಂಠೀರವ ಕ್ರೀಡಾಂಗಣ ಮಾದರಿಯಲ್ಲಿ ಕ್ರೀಡಾಂಗಣ ಮಾಡಲು ಜಾಗ ನಿಗದಿ ಮಾಡಿದ್ದಾರೆ. ಈ ಜಾಗ ನಿಗದಿ ಮಾಡಿರುವುದು ನನಗೆ ಸಮಾಧಾನ ಇಲ್ಲ. 45 ಮೀಟರ್ ರಸ್ತೆ ಪಕ್ಕದಲ್ಲಿ ಪಾರ್ಕ್ ಇರುವ ಜಾಗದಲ್ಲಿ ಕ್ರೀಡಾಂಗಣ ಇರಬೇಕು ಎಂದು ಸೂಚನೆ ನೀಡಿದ್ದೇನೆ. ಮುಂದೆ ಮೆಟ್ರೋ ಮಾರ್ಗ ಬಂದರೆ ಅದರ ಪಕ್ಕ ಕ್ರೀಡಾಂಗಣ ಇರಬೇಕು ಎಂದರು.
ಈ ಕ್ರೀಡಾಂಗಣಕ್ಕೆ 25-45 ಎಕರೆ ಜಾಗ ಮೀಸಲು ಇಡಲಾಗಿದೆ. ಇನ್ನು 45 ಮೀಟರ್ ರಸ್ತೆ ಸಮೀಪ ಯಾರಿಗೂ ನಿವೇಶನವನ್ನು ನೇರ ಹಂಚಿಕೆ ಮಾಡಬಾರದು ಎಂಬ ಸೂಚನೆ ನೀಡಿದ್ದೇನೆ. ಇಲ್ಲಿ ವಾಣಿಜ್ಯ ಉದ್ದೇಶಕ್ಕೆ ಭೂಮಿ ಬಳಕೆ ಆಗಬೇಕು. ಇದರಿಂದ ಬಿಡಿಎ ಹಾಗೂ ಸರ್ಕಾರಕ್ಕೆ ಲಾಭವಾಗುವಂತೆ ಇರಬೇಕು. ಇದಕ್ಕಾಗಿ ನೀತಿ ರೂಪಿಸುವಂತೆ ತಿಳಿಸಿದ್ದೇನೆ ಎಂದರು.
ಭೂಮಿ ಕಳೆದುಕೊಂಡ ರೈತರಿಗೆ ಉತ್ತಮ ಬೆಲೆ ಸಿಗಬೇಕು. ಅದಕ್ಕಾಗಿ ಈ ಮಹತ್ವವಾದ ತೀರ್ಮಾನ ಕೈಗೊಂಡಿದ್ದೇವೆ. ನಿವೇಶನ ಹಂಚಿಕೆಗೆ ಮೊದಲ ಆದ್ಯತೆ ನೀಡಲಾಗುವುದು. ನಿವೇಶನ ಹಂಚಿಕೆ ಬಳಿಕ ಉಳಿದ ಕೆಲಸ ಜಾರಿ ಆಗಬೇಕು ಎಂದು ಹೇಳಿದ್ದೇನೆ" ಎಂದು ತಿಳಿಸಿದರು.

ಎಷ್ಟು ಎಕರೆ ಜಾಗದಲ್ಲಿ ಬಡಾವಣೆ ಕಾಮಗಾರಿ ನಡೆಯುತ್ತಿದೆ ಎಂದು ಕೇಳಿದಾಗ, "ಸದ್ಯಕ್ಕೆ 2500 ಎಕರೆ ಜಾಗದಲ್ಲಿ ಕಾಮಗಾರಿ ನಡೆಯುತ್ತಿದ್ದು, ಉಳಿದ ಜಾಗದ ವಿಚಾರವಾಗಿ ಕಂದಾಯ ಅಧಿಕಾರಿಗಳ ಜತೆ ಮಾತನಾಡಿ ಕಾನೂನು ತೊಡಕಿನ ಬಗ್ಗೆ ಚರ್ಚೆ ಮಾಡುತ್ತೇನೆ" ಎಂದು ತಿಳಿಸಿದರು.
ರೈತರಿಗೆ ಸರಿಯಾದ ನ್ಯಾಯ ಸಿಕ್ಕಿಲ್ಲ ಎಂಬ ಕೂಗಿನ ಬಗ್ಗೆ ಕೇಳಿದಾಗ, "ರೈತರಿಗೆ ಸೂಕ್ತ ಬೆಲೆ ಸಿಗಬೇಕು. ಅವರಿಗೆ ನ್ಯಾಯ ಒದಗಿಸಲು ನಾನು ಶ್ರಮಿಸುತ್ತಿದ್ದೇನೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನಾವು ಅವರಿಗೆ ನಿವೇಶನ ಹಂಚಿಕೆ ಮಾಡಲಾಗುವುದು. ಸುಪ್ರೀಂ ಕೋರ್ಟ್ ನಿರ್ದೇಶನ ಮೀರಿ ನಾನು ತೀರ್ಮಾನ ಮಾಡಲು ಆಗುವುದಿಲ್ಲ" ಎಂದು ತಿಳಿಸಿದರು.
ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ:
ಬೆಲ್ಲಹಳ್ಳಿ ಹಾಗೂ ಮಿಟಗಾನಹಲ್ಕಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ನಾಲ್ಕು ಪ್ರವೇಶ ಮತ್ತು ನಿರ್ಗಮನ ದ್ವಾರದ ವ್ಯವಸ್ಥೆ ಮಾಡಲು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಆದೇಶ ನೀಡಿದರು.
ಬೆಲ್ಲಹಳ್ಳಿ ಮತ್ತು ಮಿಟಗಾನಹಳ್ಳಿ ಕಸ ವಿಲೇವಾರಿ ಘಟಕಕ್ಕೆ ಶನಿವಾರ ಮಧ್ಯಾಹ್ನ ಭೇಟಿ ನೀಡಿದ ಅವರು, ಕಸದ ಲಾರಿಗಳು ನೂರಾರು ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತಿರುವುದನ್ನು ಗಮನಿಸಿದರು. ಸುಮಾರು 55 ಎಕರೆ ವಿಸ್ತೀರ್ಣದ ಈ ಘಟಕಕ್ಕೆ ಒಂದೇ ಒಂದು ಪ್ರವೇಶ ಮತ್ತು ನಿರ್ಗಮನ ಕೇಂದ್ರ ಇರುವುದನ್ನು ಗಮನಿಸಿದರು.
ಈ ರೀತಿ ಲಾರಿಗಳು ಸಾಲುಗಟ್ಟಿ ನಿಲ್ಲುವುದು ಸರಿ ಅಲ್ಲ. ಇದರಿಂದ ಸಮಯ ಮತ್ತು ಹಣ ಎರಡೂ ವ್ಯರ್ಥ. ಹೀಗಾಗಿ ತಕ್ಷಣವೇ ನಾಲ್ಕು ದ್ವಾರಗಳನ್ನು ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಅದೇಶಿಸಿದರು. ಜತೆಗೆ ಈಗ ಲಾರಿಗಳು ಅರೇಳು ತಾಸು ಕಾಯುತ್ತಿರುವುದು ಸರಿ ಅಲ್ಲ. ಬಂದ ಎರಡು ಗಂಟೆ ಒಳಗೇ ಕಸ ವಿಲೇವಾರಿ ಮಾಡಿ ನಿರ್ಗಮಿಸುವ ವ್ಯವಸ್ಥೆ ಖಾತರಿ ಮಾಡಿ ಎಂದು ಸೂಚಿಸಿದರು.
ಪ್ರವೇಶ ಕೇಂದ್ರದಲ್ಲಿ ಲಾರಿಗಳ ಆಗಮನ, ಕಸ ವಿಲೇವಾರಿ ಬಗ್ಗೆ ಮಾಹಿತಿ ಪರಿಶೀಲಿಸಿದರು. ಹಿರಿಯ ಐಎಎಸ್ ಅಧಿಕಾರಿಗಳಾದ ರಾಕೇಶ್ ಸಿಂಗ್, ತುಷಾರ್ ಗಿರಿನಾಥ್, ರಾಜೇಂದ್ರ ಚೋಳನ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್ ಜತೆಗಿದ್ದರು.












Click it and Unblock the Notifications