ಸರ್ಕಾರದ ದೌರ್ಜನ್ಯ ಖಂಡಿಸಿ ಪ್ರತಿಭಟನೆ: ಮಾರ್ಚ್ 13ರಂದು ಕಾಂಗ್ರೆಸ್ 'ಶಿವಮೊಗ್ಗ ಚಲೋ'
ಬೆಂಗಳೂರು, ಮಾರ್ಚ್ 10: ರಾಜ್ಯ ಸರ್ಕಾರದ ಅಧಿಕಾರ ದುರ್ಬಳಕೆ ನಡೆಗಳನ್ನು ಖಂಡಿಸಿ 'ಶಿವಮೊಗ್ಗ ಚಲೋ' ನಡೆಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಕಾರ್ಯಕರ್ತರು, ರಾಜಕೀಯ ವಿರೋಧಿಗಳ ಮೆಲೆ ಸುಳ್ಳು ಪ್ರಕರಣಗಳನ್ನು ಹಾಕಿ ದೌರ್ಜನ್ಯ ನಡೆಸುತ್ತಿದೆ. ಇದನ್ನು ಖಂಡಿಸಿ ಮಾರ್ಚ್ 13ರಂದು 'ಶಿವಮೊಗ್ಗ ಚಲೋ' ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ವಿಧಾನಸಬೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಕೊರೊನಾ ಮತ್ತು ನಂತರದ ಸಮಯದಲ್ಲಿ ಬಿಜೆಪಿ ನಾಯಕರು ಶಾಂತಿಭಂಗ ಉಂಟುಮಾಡುವ ಹೇಳಿಕೆಗಳನ್ನು ನೀಡಿದ್ದರೂ ಈ ಸರ್ಕಾರ ಯಾರ ಮೇಲೂ ಪ್ರಕರಣ ದಾಖಲಿಸಿಲ್ಲ. ಆಗ ಕೂಡ ಅಧಿಕಾರ ದುರುಪಯೋಗಪಡಿಸಿಕೊಂಡು ಸರ್ಕಾರದ ಪದಾರ್ಥವನ್ನು ತಮ್ಮದೇ ಪದಾರ್ಥ ಎಂಬಂತೆ ಹಂಚಿದ್ದನ್ನು ನಾವು ಬಯಲು ಮಾಡಿದ್ದರೂ ಸಹ ಅವರು ಕ್ರಮಕೈಗೊಂಡಿರಲಿಲ್ಲ. ಆದರೆ ನಮ್ಮ ಶಾಸಕರು, ಕಾರ್ಯಕರ್ತರ ಮೇಲೆ ನೂರಾರು ಕೇಸ್‌ಗಳನ್ನು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪಕ್ಷದ ನಾಯಕರು, ಕಾರ್ಯಕರ್ತರ ಮೇಲೆ ಕೇಸ್ ಹಾಕುತ್ತಿರುವುದು ಸೇಡಿನ ಕ್ರಮವಲ್ಲವೇ? ಇದರ ವಿರುದ್ಧ ನಾವು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ. ಈ ಬಗ್ಗೆ ಸದನದಲ್ಲಿ ಹಾಗೂ ಇತರೆ ಕಡೆಗಳಲ್ಲಿ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಸಂಗಮೇಶ್ ಅವರನ್ನು ಬಿಜೆಪಿಗೆ ಸೆಳೆಯಲು ಬಹಳ ಒತ್ತಡ ಹೇರಿದ್ದರು. ಅವರು ಆಪರೇಷನ್ ಕಮಲಕ್ಕೆ ಬಲಿಯಾಗಲಿಲ್ಲ ಎಂಬ ಕಾರಣಕ್ಕೆ ಸಂಗಮೇಶ್, ಅವರ ಕುಟುಂಬದ ಸದಸ್ಯರು ಮತ್ತು ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಿ ಕಿರುಕುಳ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಒಬ್ಬನೇ ಕಾಂಗ್ರೆಸ್ ಶಾಸಕ ಇರುವುದು ಎಂದು ಪೊಲೀಸರಿಂದ ಎಫ್‌ಐಆರ್ ಹಾಕಿಸಿ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ವಿರೋಧಪಕ್ಷದ ನಾಯಕರ ನೇತೃತ್ವದಲ್ಲಿ ಎಲ್ಲ ನಾಯಕರು, ಶಾಸಕರು, ಸಂಸದರು ಮತ್ತು ಕಾರ್ಯಕರ್ತರು ಶಿವಮೊಗ್ಗ ಚಲೋ ಪ್ರತಿಭಟನೆ ಆಯೋಜಿಸಿದ್ದೇವೆ. ಮಾರ್ಚ್ 13ರಂದು ಶಿವಮೊಗ್ಗಕ್ಕೆ ತೆರಳಿ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.












Click it and Unblock the Notifications