ಪೊಲೀಸರ ಮೇಲೆ ಕೈ ಎತ್ತಿ ಕೋಳ ತೊಡಿಸಿಕೊಂಡ ಎಂಎಲ್ಸಿ ಪುತ್ರ !
ಬೆಂಗಳೂರು, ಡಿಸೆಂಬರ್ 07: ರಾಜಕಾರಣಿಗಳ ಮಕ್ಕಳು ಯಾಕೋ ಸುಮ್ಮನೆ ಇರಲ್ಲ. ಒಂದಲ್ಲಾ ಒಂದು ಎಡವಟ್ಟು ಮಾಡಿಕೊಂಡು ಸುದ್ದಿಯಾಗುತ್ತಾರೆ. ಅದೇ ಸಾಲಿಗೆ ಈ ಸಲ ಸೇರ್ಪಡೆಯಾಗಿರುವುದು ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯರೊಬ್ಬರ ಪುತ್ರ ಮತ್ತು ಆತನ ಸಹಚರರು !
ಕಂಠಪೂರ್ತಿ ಕುಡಿದ್ದ ಯುವಕರು ಭಾನುವಾರ ರಾತ್ರಿ ಅಡ್ಡಾದಿಡ್ಡಿ ಕಾರು ಚಲಾಯಿಸುತ್ತಿದ್ದರು. ರಾತ್ರಿ ಪಾಳಿಯಲ್ಲಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಕಾರನ್ನು ಹೆಬ್ಬಾಳದ ಬಿಎಂಟಿಸಿ ಬಸ್ ಡಿಪೋ ಬಳಿ ಅಡ್ಡಗಟ್ಟಿ ಪ್ರಶ್ನಿಸಿದ್ದಾರೆ. ಈ ವೇಳೆ ಕಾರಿನಲ್ಲಿದ್ದವರಿಗೂ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಅಮೃತಹಳ್ಳಿ ಠಾಣೆಯ ಪೊಲೀಸ್ ಕಾನ್ ಸ್ಟೇಬಲ್ ಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಹೆಚ್ಚುವರಿ ಸಿಬ್ಬಂದಿ ಹಲ್ಲೆ ಮಾಡಿದ ಮೂವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಕೋಲಾರದ ಎಂಎಲ್ ಸಿ ನಸೀರ್ ಅಹಮದ್ ಪುತ್ರ ಫಯಾಜ್ ಬಂಧನಕ್ಕೆ ಒಳಗಾಗಿರುವ ಆರೋಪಿ. ಫಯಾಜ್ ಮತ್ತು ಆತನ ಇಬ್ಬರು ಸ್ನೇಹಿತರು ಬಂಧನಕ್ಕೆ ಒಳಗಾಗಿದ್ದು, ತಲೆ ಮರೆಸಿಕೊಂಡಿರುವ ಮೂವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Recommended Video
ರಾಜಕಾರಣಿಗಳ ಮಕ್ಕಳು ಯಾವಾಗಲೂ ಇಂತಹ ಕೆಟ್ಟ ವಿಚಾರಕ್ಕೆ ಸುದ್ದಿಯಾಗುತ್ತಾರೆ. ಕಂದಾಯ ಸಚಿವ ಆರ್. ಅಶೋಕ್ ಅವರ ಪುತ್ರ ಕಾರು ಚಲಾವಣೆ ಮಾಡುವಾಗ ಅವಘಡ ಸಂಭವಿಸಿ ಸುದ್ದಿಯಾಗಿದ್ದರು. ಉದ್ಯಮಿ ಪುತ್ರ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಶಾಸಕ ಹ್ಯಾರೀಸ್ ಪುತ್ರ ನಲಪಾಡ್ ಬಂಧನಕ್ಕೆ ಒಳಗಾಗಿದ್ದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಡಾಬಾದೊಳಗೆ ಕಾರು ನುಗ್ಗಿಸಿ ವಿವಾದಕ್ಕೀಡಾಗಿದ್ದ. ಅದೇ ರೀತಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಪುತ್ರನ ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದಿತ್ತು. ಹೀಗೆ ಒಂದಲ್ಲಾ ಒಂದು ಯಡವಟ್ಟು ಮಾಡಿಕೊಂಡು ಸುದ್ದಿಯಾಗುತ್ತಿದ್ದಾರೆ.












Click it and Unblock the Notifications