ಮತ್ತೆ ಅಸಮಾಧಾನ ಹೊರಹಾಕಿದ ಕಾಂಗ್ರೆಸ್ ಶಾಸಕ ಸುಧಾಕರ್
ಚಿಕ್ಕಬಳ್ಳಾಪುರ, ಜೂನ್ 29: ಸಚಿವ ಸ್ಥಾನ ಕೈತಪ್ಪಿದ ಅತೃಪ್ತ ಶಾಸಕರ ಬಣದಲ್ಲಿ ಗುರುತಿಸಿಕೊಂಡಿದ್ದ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಸುಧಾಕರ್ ಅವರು ಮತ್ತೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಲು ಬಂದಿದ್ದ ಅವರು ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, 'ಕಾಂಗ್ರೆಸ್‌ನಲ್ಲಿ ಯುವ ಶಾಸಕರಿಗೆ ಆದ್ಯತೆ ನೀಡುತ್ತಿಲ್ಲ, ಕಾಂಗ್ರೆಸ್ ಹಳೆಯ ಪಕ್ಷ ಹಾಗೂ ಹಿರಿಯರ ಪಕ್ಷ ಆಗಿರುವ ಕಾರಣ ನನಗೆ ಅವಕಾಶ ಕೈತಪ್ಪಿತು' ಎಂದಿದ್ದಾರೆ.
'ನಾನು ಕಾಂಗ್ರೆಸ್ ಬದಲಿಗೆ ಜೆಡಿಎಸ್ ಪಕ್ಷದಲ್ಲಿ ಇದ್ದಿದ್ದರೆ ನಾನು ಕೇಳುವ ಮೊದಲೇ ನನಗೆ ಸಚಿವ ದೊರೆಯುತ್ತಿತ್ತು ಎಂದಿರುವ ಅವರು, ಪರೋಕ್ಷವಾಗಿ ಪಕ್ಷ ಬಿಡುವ ಸುಳಿವು ನೀಡಿದ್ದಾರೆ.

ಕುಮಾರಸ್ವಾಮಿ ಅವರನ್ನು ಭೇಟಿಯಾದ ನಂತರ ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಅವರನ್ನೂ ಭೇಟಿಯಾದ ಸುಧಾಕರ್ ಅವರು ಮಾತುಕತೆ ನಡೆಸಿದರು. ಸಚಿವ ಸ್ಥಾನಕ್ಕೆ ಪರಮೇಶ್ವರ್ ಬಳಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಎಂಬಿ ಪಾಟೀಲ್ ನಾಯಕತ್ವದ ಅತೃಪ್ತ ಶಾಸಕರ ಬಣದಲ್ಲಿ ಗುರುತಿಸಿಕೊಂಡಿದ್ದ ಸುಧಾಕರ್ ಅವರು, ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರು ಸಭೆ ನಡೆಸಿದ ಬಳಿಕ ಸುಮ್ಮನಾಗಿದ್ದರು. ಆದರೆ ಈಗ ಮತ್ತೆ ಅಸಮಾಧಾನ ಹೊರಹಾಕಿದ್ದಾರೆ.
ಮತ್ತೆ ಸಂಪುಟ ವಿಸ್ತರಣೆ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು ಎಂಬಿ ಪಾಟೀಲ್, ರಾಮಲಿಂಗಾರೆಡ್ಡಿ ಸೇರಿ ಕೆಲವರಿಗೆ ಮಂತ್ರಿ ಸ್ಥಾನ ಸಿಗುವ ಸಾಧ್ಯತೆ ಇದೆ. ಹಾಗಾಗಿ ಈಗ ಸುಧಾಕರ್ ಅವರು ಮತ್ತೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ.












Click it and Unblock the Notifications