ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿ ನೀಡಿದ ಮೀಸಲಾತಿ ರದ್ದು ಎಂದ ಡಿಕೆಶಿ: ಬಿಜೆಪಿ ಪ್ರತಿಕ್ರಿಯೆ?
ಬೆಂಗಳೂರು, ಏಪ್ರಿಲ್ 07: ಕರ್ನಾಟಕದಲ್ಲಿ ಚುನಾವಣೆ ಕಾವು ದಿನೇ ದಿನೆ ಹೆಚ್ಚುತ್ತಿದ್ದು, ಪ್ರಮುಖ ರಾಜಕೀಯ ಪಕ್ಷಗಳ ಆರೋಪ ಪ್ರತ್ಯಾರೋಪಗಳು ಹೆಚ್ಚಾಗುತ್ತಿದ್ದು, ಮೀಸಲಾತಿ ಕುರಿತ ವಾಗ್ವಾದಗಳು ನಿಲ್ಲುವಂತೆ ಕಾಣುತ್ತಿಲ್ಲ. ಇದೀಗ ಮೀಸಲಾತಿ ಕುರಿತು ಕೆಪಿಸಿಸಿ ಅಧ್ಯಕ್ಷರು ನೀಡಿರುವ ಹೇಳಿಕೆಯನ್ನು ಬಿಜೆಪಿ ಚುನಾವಣಾ ಅಸ್ತ್ರವಾಗಿ ಬಳಸುತ್ತಿದೆ.
ಬಿಜೆಪಿ ಸರ್ಕಾರ ಇತ್ತೀಚೆಗೆ ಕೆಲವು ಸಮುದಾಯಗಳಿಗೆ ಮೀಸಲಾತಿ ನೀಡಿ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೆ ಕಾಂಗ್ರೆಸ್ ಅನೇಕ ಆರೋಪಗಳುನ್ನು ಮಾಡುತ್ತಲೇ ಬಂದಿದೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಬಿಜೆಪಿ ಸರ್ಕಾರವು ಒಕ್ಕಲಿಗ, ವೀರಶೈವ-ಲಿಂಗಾಯತ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ನೀಡಿದ ಮೀಸಲಾತಿಯನ್ನು ನಾವು (ಕಾಂಗ್ರೆಸ್) ರದ್ದು ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಈ ಕುರಿತು ಡಿಕೆ ಶಿವಕುಮಾರ್ ಅವರು ಸುದ್ದಿಗಾರರಿಗೆ ನೀಡಿರುವ ಹೇಳಿಕೆಯನ್ನು ಬಿಜೆಪಿ ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದೆ. ಜನರ ಒಳಿತಿಗೆ, ಸಮುದಾಯಗಳ ಏಳಿಗೆಗಳಿಗೆ ಮೀಸಲಾತಿ ಹೆಚ್ಚಳ ಮಾಡಿ ಅಗತ್ಯ ಕ್ರವಹಿಸಿದ್ದೇವೆ. ಹೀಗಿದ್ದರೂ ಸಹ ಕಾಂಗ್ರೆಸ್ ತಾವು ಅಧಿಕಾರಕ್ಕೆ ಬಂದ ತಕ್ಷಣವೇ ನಮ್ಮ ಸರ್ಕಾರ ನೀಡಿರುವ ಮೀಸಲಾತಿಯನ್ನು ರದ್ದು ಮಾಡುವುದಾಗಿ ಹೇಳಿದೆ ಎಂದು ಬಿಜೆಪಿ ಕಿಡಿ ಕಾರಿದೆ.
ಕೆಪಿಸಿಸಿ ಅಧ್ಯಕ್ಷರು ಡಿಕೆ ಶಿವಕುಮಾರ್ ತಾವು ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಒಕ್ಕಲಿಗ, ವೀರಶೈವ-ಲಿಂಗಾಯತ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ನೀಡಿದ ಮೀಸಲಾತಿಯನ್ನು ರದ್ದು ಮಾಡಿ ಅಲ್ಪಸಂಖ್ಯಾತರ ಹಿತ ಕಾಯುತ್ತೇವೆ ಎಂದು ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಮೀಸಲಾತಿ ಪಡೆದ ಈ ಸಮುದಾಯಗಳ ಹಕ್ಕಿಗೆ ಚ್ಯುತಿ ತರುವ ಹುನ್ನಾರ ಮಾಡಿರುವ ಕಾಂಗ್ರೆಸ್‌ಗೆ ತಕ್ಕ ಶಾಸ್ತಿಯಾಗಲಿದೆ ಎಂದು ಬಿಜೆಪಿ ಎಚ್ಚರಿಕೆ ನೀಡಿದೆ.
ಒಕ್ಕಲಿಗ, ವೀರಶೈವ-ಲಿಂಗಾಯತ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ನೀಡಿದ ಮೀಸಲಾತಿಯನ್ನು ರದ್ದು ಮಾಡುತ್ತೇವೆ ಎಂದು @DKShivakumar ಸ್ಪಷ್ಟಪಡಿಸಿದ್ದಾರೆ.
— BJP Karnataka (@BJP4Karnataka) April 7, 2023
ತುಷ್ಟೀಕರಣ ರಾಜಕಾರಣಕ್ಕಾಗಿ ಈ ಸಮುದಾಯಗಳ ಹಕ್ಕಿಗೆ ಚ್ಯುತಿ ತರುವ @INCKarnatakaದ ಹುನ್ನಾರಕ್ಕೆ ತಕ್ಕ ಶಾಸ್ತಿಯಾಗಲಿದೆ.#AntiHinduCongress https://t.co/O24L20kv9f
ತೊಡಕಿಲ್ಲದೇ ಕಾಂಗ್ರೆಸ್‌ನಿಂದ ಎರಡನೇ ಪಟ್ಟಿ
ವಿಧಾನಸಭಾ ಚುನಾವಣೆ ಹಿನ್ನೆಯಲ್ಲಿ ಕರ್ನಾಟಕ ಕಾಂಗ್ರೆಸ್ ಯಾವುದೇ ತೊಡಕಿಲ್ಲದೇ ಅಭ್ಯರ್ಥಿಗ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆಡಳಿತಾರೂಢ ಬಿಜೆಪಿ ಪಕ್ಷದಿಂದ ಇನ್ನೂ ಒಂದೇ ಒಂದು ಅಭ್ಯರ್ಥಿಗಳ ಪಟ್ಟಿ ಸಹ ಬಿಡುಗಡೆ ಮಾಡಿಲ್ಲ ಎಂದು ಟಾಂಗ್ ನೀಡಿದರು.
ಕಾಂಗ್ರೆಸ್ ಈ ಹಿಂದೆ 124 ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರುಗಳ ಮೊದಲ ಪಟ್ಟಿ ಬಿಡುಗಡೆ ಮಾಡಿತ್ತು. ಇದಾದ ಬಳಿಕ ಗುರುವಾರ ಏಪ್ರಿಲ್ 6ರಂದು ಒಟ್ಟು 42 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿತು. ಆದರೆ ಇದುವರೆಗೆ ಬಿಜೆಪಿಯಿಂದ ಒಂದೂ ಪಟ್ಟಿಯೂ ಸಹ ಪ್ರಕಟಗೊಂಡಿಲ್ಲ. ಹೀಗಾಗಿ ಕಾಂಗ್ರೆಸ್ ಅಧ್ಯಕ್ಷರು ಬಿಜೆಪಿಯ ಕಾಲೆಳೆದರು.

ಬಿಜೆಪಿಯ ಮೀಸಲಾತಿ ನಿರ್ಧಾರ
ರಾಜ್ಯ ಬಿಜೆಪಿ ಸರ್ಕಾರವು ಮೀಸಲಾತಿ ವಿಚಾರದಲ್ಲಿ ಒಂದಷ್ಟು ಘೋಷಣೆಗಳನ್ನು ಮಾಡಿತ್ತು. ವೀರಶೈವ ಲಿಂಗಾಯರಿಗೆ, ಒಕ್ಕಲಿಗರಿಗೆ ಮೀಸಲಾತಿ ಪ್ರತ್ಯೇಕ ವರ್ಗವನ್ನು ಸೃಷ್ಟಿಸಲಾಗಿದೆ. ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಸಲುವಾಗಿ ಮುಸ್ಲಿಂ ಸಮುದಾಯವರನ್ನು ಹಿಂದುಳಿದ ವರ್ಗದ ಮೀಸಲಾತಿಯಿಂದ ಕೈ ಬಿಡಲಾಯಿತು. ಬಳಿಕ ಅವರನ್ನು ಆರ್ಥಿಕ ದುರ್ಬಲ ವರ್ಗ EWS ಅಡಿ ಬರುವ ಶೇಕಡಾ 10ಮೀಸಲಾತಿ ವರ್ಗದಲ್ಲಿ ಸೇರ್ಪಡೆ ಮಾಡಲು ತಿರ್ಮಾನಿಸಿದೆ.
ಈ ಮೂಲಕ ಬಿಜೆಪಿ ಸರ್ಕಾರವು ಪರಿಶಿಷ್ಟ ವರ್ಗದ ಜಾತಿಗಳು, ಮುಸ್ಲಿಮರು ಸೇರಿದಂತೆ ಒಕ್ಕಲಿಗ ಸಮುಯದಾಗಳ ಮತಗಳಿಗೆ ಕೊಕ್ಕೆ ಹಾಕಿದೆ. ಸಂಪುಟ ಸಭೆಯಲ್ಲಿ ಮೀಸಲಾತಿ ಕುರಿತು ನಿರ್ಧಾರ ಕೈಗೊಂಡು ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರ ಹಿಡಿಯುವ ಹಂಬಲದಲ್ಲಿದೆ. ಇದನ್ನ ಸಹಿಸದ ಕಾಂಗ್ರೆಸ್ ಮೀಸಲಾತಿ ವಿಚಾರವಾಗಿ ಬಿಜೆಪಿ ವಿರುದ್ಧ ಅಸ್ತ್ರ ಪ್ರಯೋಗಿಸುತ್ತಲೆ ಬಂದಿದೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿ ನೀಡಿರುವ ಮೀಸಲಾತಿಯನ್ನು ರದ್ದು ಮಾಡುತ್ತೇವೆ ಎಂದು ಹೇಳಿದೆ.
ಇದನ್ನು ಬಿಜೆಪಿ ಚುನಾವಣಾ ಅಸ್ತ್ರವಾಗಿ ಬಳಸುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಲಾಗುತ್ತಿದೆ.












Click it and Unblock the Notifications