ವಿದ್ಯಾರ್ಥಿಗಳ ಬ್ಯಾಗ್‌ನಲ್ಲಿ ಕಾಂಡೋಮ್ ಪತ್ತೆ: ಅಧಿಕಾರಿಗಳಿಗೆ ಶಾಕ್
ಬೆಂಗಳೂರು ನವೆಂಬರ್ 30: ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ಮಕ್ಕಳು ದುಶ್ಚಟಗಳಿಗೆ ದಾಸರಾಗಿ ಬಾಲ್ಯದಲ್ಲಿಯೇ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವ ಅನೇಕ ಘಟನೆಗಳು ಬೆಳಕಿಗೆ ಬರುತ್ತಿದೆ. ಅದೇ ರೀತಿ ಇದೀಗ ಬೆಂಗಳೂರಿನಲ್ಲಿ ನಡೆದಿರುವ ಘಟನೆಯೊಂದು ಪೋಷಕರನ್ನು ಹಾಗೂ ಶಿಕ್ಷಕರನ್ನು ಆಂತಕಕ್ಕೀಡು ಮಾಡಿದೆ.
ವಿದ್ಯಾರ್ಥಿಗಳು ಶಾಲೆಗಳಿಗೆ ಮೊಬೈಲ್ ತರಬಾರದು ಎನ್ನುವ ನಿಯಮವಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಬ್ಯಾಗ್ ಪರಿಶೀಲನೆ ನಡೆಸಿದಾಗ ಶಾಕ್ ಆಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು ನಗರದ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳ ಬ್ಯಾಗ್‌ನಲ್ಲಿ ಮೊಬೈಲ್ ಫೋನ್‌ಗಳಲ್ಲದೇ, ಕಾಂಡೋಮ್, ಗರ್ಭ ನಿರೋಧಕ ಮಾತ್ರೆಗಳು, ಸಿಗರೇಟ್‌ಗಳು, ಲೈಟರ್‌ಗಳು ಹಾಗೂ ವೈಟ್‌ನರ್‌ಗಳು, ಅಧಿಕ ಹಣ ಪತ್ತೆಯಾಗಿದೆ ಎಂದು 'ಡೆಕ್ಕನ್ ಹೆರಾಲ್ಡ್' ದಿನ ಪತ್ರಿಕೆಯಲ್ಲಿ ವರದಿಯಾಗಿದೆ. ಇದರಿಂದ ಪರಿಶೀಲನೆ ನಡೆಸಿದ ಅಧಿಕಾರಿಗಳು ಹಾಗೂ ಅಧ್ಯಾಪಕರು ಆಘಾತಕ್ಕೊಳಗಾಗಿದ್ದಾರೆ.

ಅಪ್ರಾಪ್ತ ಮಕ್ಕಳ ಬ್ಯಾಗ್‌ನಲ್ಲಿ ಕಾಂಡೋಮ್, ಗರ್ಭ ನಿರೋಧಕ ಮಾತ್ರೆಗಳು
ಕೊರೊನಾ ಸಮಯದಲ್ಲಿ ಆನ್‌ಲೈನ್ ಶಿಕ್ಷಣದ ಬಳಿಕ ವಿದ್ಯಾರ್ಥಿಗಳಿಗೆ ಮೊಬೈಲ್ ಗೀಳು ಹೆಚ್ಚಾಗಿದ್ದು, ತರಗತಿಗಳಿಗೆ ಮೊಬೈಲ್ ತಂದು ಬಳಸುವ ಬಗ್ಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಕೆಎಎಂಎಸ್ ಸಹಯೋಗದೊಂದಿಗೆ ಅಧ್ಯಾಪಕರ ಬೆಂಗಳೂರಿನ ಅನೇಕ ಶಾಲೆಯ ಮಕ್ಕಳ ಬ್ಯಾಗ್‌ಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಪ್ರಾಪ್ತ ಮಕ್ಕಳ ಬ್ಯಾಗ್‌ನಲ್ಲಿ ಕೆಲವು ಊಹಿಸಲಾರದ ವಸ್ತುಗಳು ಕಂಡುಬಂದಿದೆ.
ಈ ಬಗ್ಗೆ ಶಾಲೆಯ ನಾಗರಬಾವಿ ಬಡಾವಣೆಯ ಶಾಲೆಯೊಂದರ ಮುಖ್ಯೋಪಾಧ್ಯಾಯರು ಮಾತನಾಡಿದ್ದು, ಈ ಬಗ್ಗೆ ಶಾಲೆಯಲ್ಲಿ ವಿಶೇಷವಾಗಿ ಪೋಷಕರ ಸಭೆ ನಡೆಸುತ್ತೇವೆ. ಮಕ್ಕಳ ಬ್ಯಾಗ್‌ನಲ್ಲಿ ಈ ರೀತಿಯ ವಸ್ತುಗಳು ಪತ್ತೆಯಾಗಿರುವುದರಿಂದ ಪೋಷಕರು ಕೂಡ ಆತಂಕಕ್ಕೊಳಗಾಗಿದ್ದಾರೆ. ಮಕ್ಕಳಲ್ಲಿ ಆಗಿರುವ ಅನಿರೀಕ್ಷಿತ ಬದಲಾವಣೆಗಳ ಬಗ್ಗೆ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

10ನೇ ತರಗತಿ ವಿದ್ಯಾರ್ಥಿ ಬ್ಯಾಗ್‌ನಲ್ಲಿ ಕಾಂಡೋಮ್ ಪತ್ತೆ
ಶಾಲೆಯ ಅಧ್ಯಾಪಕರು ಹಾಗೂ ಅಧಿಕಾರಿಗಳು ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿಭಾಯಿಸುವಂತೆ ಪೋಷಕರಿಗೆ ಸೂಚನೆಗಳನ್ನು ನೀಡಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳನ್ನು ಶಾಲೆಯಿಂದ ಅಮಾನತುಗೊಳಿಸುವ ಬದಲು ಆಪ್ತಸಮಾಲೋಚನೆಗೆ ಶಿಫಾರಸು ಮಾಡಲಾಗಿದೆ. ಇನ್ನು ಶಾಲೆಯಲ್ಲಿ ಆಪ್ತಸಮಾಲೋಚನೆಗಳನ್ನು ನಡೆಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಸದ್ಯ 10 ದಿನ ರಜೆ ನೀಡಲಾಗಿದ್ದು, ಪೋಷಕರಿಂದಲೂ ಸಹಾಯ ಕೇಳಿದ್ದೇವೆ ಎಂದು ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.
ಇನ್ನು 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳ ಬ್ಯಾಗ್‌ನಲ್ಲಿ ಕಾಂಡೋಮ್ ಪತ್ತೆಯಾಗಿದ್ದು, ಈ ಬಗ್ಗೆ ಆಕೆಯನ್ನು ಪ್ರಶ್ನಿಸಿದಾಗ, ಆಕೆ ತನ್ನ ಸಹಪಾಠಿಗಳನ್ನು ಹಾಗೂ ಖಾಸಗಿ ಟ್ಯೂಷನ್ ಬಗ್ಗೆ ಆರೋಪ ಮಾಡಿದ್ದಾಳೆ ಎಂದು ಪರೀಶೀಲನೆ ನಡೆಸಿದ ಅಧ್ಯಾಪಕರೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ವಿದ್ಯಾರ್ಥಿಯ ನೀರಿನ ಬಾಟಲಿಯಲ್ಲಿ ಮದ್ಯ ಪತ್ತೆಯಾಗಿದೆ
ಕೆಎಎಂಎಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಮಾತನಾಡಿದ್ದು, ನಗರದ ಶೇಕಡಾ 80ರಷ್ಟು ಶಾಲೆಯಲ್ಲಿ ಪರಿಶೀಲನೆ ನಡೆಸಿದ್ದೇವೆ. ಒಬ್ಬ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಗರ್ಭ ನಿರೋಧಕ ಮಾತ್ರೆ ಪತ್ತೆಯಾಗಿದೆ. ಮತ್ತೊಬ್ಬರ ನೀರಿನ ಬಾಟಲಿಯಲ್ಲಿ ಮದ್ಯ ಪತ್ತೆಯಾಗಿದೆ. ಈ ಆಘಾತದಿಂದ ಹೊರಬರಲು ನಾವು ಯತ್ನಿಸುತ್ತಿದ್ದೇವೆ. ಕೆಲ ವಿದ್ಯಾರ್ಥಿಗಳು, ತನ್ನ ಸಹಾಪಾಠಿಗಳಿಗೆ ಹಾಗೂ ಶಿಕ್ಷಕರಿಗೆ ಕಿರುಕುಳ ನೀಡುವುದು, ಅಶ್ಲೀಲ ಭಾಷೆ ಬಳಸಿ ಬೈಯುವುದು, ಕೆಟ್ಟ ಸನ್ನೆಗಳನ್ನು ಮಾಡುವುದು ಕಂಡುಬಂದಿದೆ. ಈ ರೀತಿ ನಡವಳಿಕೆ 5ನೇ ತರಗತಿ ವಿದ್ಯಾರ್ಥಿಯಲ್ಲೂ ಕಂಡುಬಂದಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಮಕ್ಕಳ ಈ ರೀತಿಯ ವರ್ತನೆಗೆ ಮನೋವೈದ್ಯೆರು ಹೇಳಿದ್ದೇನು?
ಈ ಬಗ್ಗೆ ಬೆಂಗಳೂರಿ ಖಾಸಗಿ ಆಸ್ಪತ್ರೆ ಮನೋವೈದ್ಯ ಡಾ. ಎ. ಜಗದೀಶ್ ಮಾತನಾಡಿದ್ದು, 'ಇತ್ತೀಚಿಗೆ ಒಂದು ಪ್ರಕರಣದಲ್ಲಿ ತಾಯಿಯೊಬ್ಬರಿಗೆ ತಮ್ಮ 14 ವರ್ಷದ ಮಗನ ಶೂ ರ್ಯಾಂಕ್‌ನಲ್ಲಿ ಕಾಂಡೋಮ್ ಸಿಕ್ಕಿತ್ತು. ಕೆಲವು ಮಕ್ಕಳು ಈ ರೀತಿಯ ಚಟುವಟಿಕೆಗಳನ್ನು ಇಷ್ಟಪಡುತ್ತಾರೆ. ಅದು ಮದ್ಯಪಾನ, ಧೂಮಪಾನ ಹಾಗೂ ಮಾದಕ ವಸ್ತು ಸೇವನೆ ಆಗಿರಬಹುದು. ವಿರುದ್ಧ ಲಿಂಗದ ವ್ಯಕ್ತಿಯ ಜೊತೆಗೆ ಅತಿಯಾಗಿ ಬೆರೆಯುವುದರಿಂದ ಮಕ್ಕಳು ಈ ರೀತಿಯ ಚಟುವಟಿಕೆಗಳನ್ನು ಇಷ್ಟಪಡಲು ಕಾರಣವಾಗಿರಬಹುದು. ಈ ಬಗ್ಗೆ ಪೋಷಕರು ಎಚ್ಚರ ವಹಿಸಿ, ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು' ಎಂದು ಹೇಳಿದ್ದಾರೆ.