ಕೊಲಂಬೋದಿಂದ ವಾಪಸಾದ ಜೆಡಿಎಸ್ ನಾಯಕರು
ಬೆಂಗಳೂರು, ಜೂ.21: ನಾಲ್ಕು ದಿನಗಳ ಮಟ್ಟಿಗೆ ರಿಲ್ಯಾಕ್ಸ್ ಆಗಲು ನೆರೆಯ ಶ್ರೀಲಂಕಾಕ್ಕೆ ತೆರಳಿದ್ದ ಜಾತ್ಯಾತೀತ ಜನತಾದಳ ಪಕ್ಷದ ನಾಯಕರು ಇಂದು ಬೆಳಗಿನ ಜಾವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ.
ಕೊಲಂಬೋದಿಂದ ವಾಪಸಾದ ಎಚ್ಡಿಕೆ ಏನಂದರು?

ಮುಂದೆ ರಾಜ್ಯಾದಲ್ಲಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಎಲ್ಲಾ ಶಾಸಕರೂ, ಕಾರ್ಯಕರ್ತರಿಗೆ ಜವಾಬ್ದಾರಿ ವಹಿಸಲಾಗುವುದು. ಎಲ್ಲರೂ ಒಗ್ಗಟ್ಟಿನಿಂದ ಪಕ್ಷವನ್ನು ಬಲಪಡಿಸಲಿದ್ದೇವೆ. ಇನ್ನು ಯಾವುದೇ ಭಿನ್ನಾಭಿಪ್ರಾಯಕ್ಕೆ ಜಾಗವಿರುವುದಿಲ್ಲ ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸುದ್ದಿಗಾರರಿಗೆ ತಿಳಿಸಿದರು.
'ಪಕ್ಷದೊಳಗಿದ್ದ ಎಲ್ಲ ಆಂತರಿಕ ಭಿನ್ನಾಭಿಪ್ರಾಯಗಳು ಪರಿಹಾರವಾಗಿದ್ದು, ರಾಜ್ಯಾದ್ಯಂತ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೆ ಆದ್ಯತೆ ನೀಡಲಾಗುವುದು. ಪ್ರವಾಸದ ವೇಳೆ ಪಕ್ಷದೊಳಗಿದ್ದ ಸಣ್ಣಪುಟ್ಟ ಗೊಂದಲಗಳು ಪರಿಹಾರವಾಗಿವೆ. ಇನ್ನು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯಾದ್ಯಂತ ಪಕ್ಷವನ್ನು ಬಲಪಡಿಸುವುದೇ ನಮ್ಮ ಗುರಿ ಎಂದು ಕುಮಾರಸ್ವಾಮಿ ತಿಳಿಸಿದರು. 'ಲೋಕಸಭೆ ಚುನಾವಣೆ ಬಳಿಕ ಶಾಸಕರ ನಡುವೆ ಸಣ್ಣಪುಟ್ಟ ಗೊಂದಲಗಳು ಮತ್ತು ಭಿನ್ನಾಭಿಪ್ರಾಯ ಉಂಟಾಗಿತ್ತು. ಮುಖಾಮುಖಿ ಭೇಟಿಯಾಗಿ ಚರ್ಚಿಸಲೆಂದೇ ಶ್ರೀಲಂಕಾಕ್ಕೆ ತೆರಳಿದ್ದೆವು' ಎಂದೂ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಪೂರ್ವನಿಗದಿತ ಕಾರ್ಯಕ್ರಮದಂತೆ ಜೆಡಿಎಸ್ ನಾಯಕರು ಗುರುವಾರ ರಾತ್ರಿಯೇ ಕೊಲಂಬೋದಿಂದ ಹೊರಟು ಬೆಂಗಳೂರಿಗೆ ಬರಬೇಕಿತ್ತು, ಆದರೆ ಪ್ರವಾಸ ಒಂದು ದಿನ ವಿಸ್ತರಣೆಯಾಗಿ ಶನಿವಾರ ಬೆಳಗ್ಗೆ ಬಂದಿಳಿದಿದ್ದಾರೆ. ಶಾಪಿಂಗ್ ಹಾಗೂ ಪ್ರವಾಸಿ ತಾಣಗಳ ವೀಕ್ಷಣೆಗಾಗಿ ಪ್ರವಾಸವನ್ನು ಒಂದು ದಿನ ವಿಸ್ತರಿಸುವಂತೆ ಶಾಸಕರು ಒತ್ತಡ ಹೇರಿದ್ದರಿಂದ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಅವರು ಸಹಮತ ವ್ಯಕ್ತಪಡಿಸಿ ಪ್ರವಾಸ ಮುಂದುವರಿಸಿದ್ದರು.

ಈ ಮಧ್ಯೆ, ಶ್ರೀಲಂಕಾಗೆ ತೆರಳಿದ್ದ ಸಂಸದ ಪುಟ್ಟರಾಜು, ಶಾಸಕರಾದ ಮಧು ಬಂಗಾರಪ್ಪ ಸೇರಿದಂತೆ ಕೆಲವು ಶಾಸಕರು ಕ್ಷೇತ್ರದಲ್ಲಿ ಕಾರ್ಯಕ್ರಮ ಇದ್ದ ಕಾರಣ ಗುರುವಾರವೇ ಬೆಂಗಳೂರಿಗೆ ಆಗಮಿಸಿದ್ದರು. ಸಂಸದ ಪುಟ್ಟರಾಜು ಅವರು ದೇವೇಗೌಡರ ಜತೆಗೂಡಿ ಪ್ರಧಾನಿ ನರೇದ್ರ ಮೋದಿ ಅವರನ್ನು ಶುಕ್ರವಾರ ಭೇಟಿಯಾಗಿದ್ದರು.
ದೇವೇಗೌಡರಿಂದ ಪತ್ರಿಕಾಗೋಷ್ಠಿ:
ಈ ಮಧ್ಯೆ, ಇಂದು ಬೆಳಗ್ಗೆ 11 ಗಂಟೆಗೆ ಜೆಡಿಎಸ್ ಅಧಿನಾಯಕ, ಮಾಜಿ ಪ್ರಧಾನ ಮಂತ್ರಿ ಎಚ್ ಡಿ ದೇವೇಗೌಡ ಅವರು ಜನತಾದಳ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದಾರೆ.












Click it and Unblock the Notifications