ಪ್ರತಿಮಾ ಕೊಲೆ ಪ್ರಕರಣ: ಸಹೋದ್ಯೋಗಿಯಿಂದ ಮಹತ್ವದ ಹೇಳಿಕೆ
ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರತಿಮಾ ಕೆಎಸ್ (45) ಬೆಂಗಳೂರಿನ ಸುಬ್ರಹ್ಮಣ್ಯಪೊರದಲ್ಲಿರುವ ತಮ್ಮ ಮನೆಯಲ್ಲಿ ಬರ್ಬರವಾಗಿ ಕೊಲೆಯಾಗಿದ್ದಾರೆ. ಈ ಪ್ರಕರಣ ಈಗ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.
ಇನ್ನು ಪ್ರತಿಮಾ ಸಾವಿನ ಬಗ್ಗೆ ಎಲ್ಲಾ ಆಯಾಮಗಳಿಂದ ತನಿಖೆ ನಡೆಸುವುದಾಗಿ ಸರ್ಕಾರ ಹೇಳಿದೆ. ಹಲವರು ಇದರ ಹಿಂದೆ ರಿಯಲ್ ಎಸ್ಟೇಟ್ ಮಾಫಿಯಾ ಕೈವಾಡವಿದೆ ಎಂದು ಆರೋಪಿಸಿದ್ದಾರೆ, ಆದರೆ ಕೊಲೆಗೆ ನಿಖರವಾದ ಕಾರಣ ಏನು ಎನ್ನುವುದು ತನಿಖೆಯ ನಂತರವೇ ತಿಳಿಯಲಿದೆ.

ಆದರೆ ಪ್ರತಿಮಾ ಅವರ ಸಹೋದ್ಯೋಗಿಯೊಬ್ಬರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು ಪ್ರಕರಣಕ್ಕೆ ತಿರುವು ಕೊಟ್ಟಿದೆ. ಕರ್ನಾಟಕ ಪರಿಸರ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿಮಾ ಅವರು 'ಕ್ರಿಯಾಶೀಲ ಮಹಿಳೆ' ಮತ್ತು ತಮ್ಮ ಕಠಿಣ ಪರಿಶ್ರಮದಿಂದ ಇಲಾಖೆಯಲ್ಲಿ ಉತ್ತಮ ಹೆಸರನ್ನು ಗಳಿಸಿದ್ದರು ಎಂದು ಹೇಳಿದ್ದಾರೆ.
"ಪ್ರತಿಮಾ ತುಂಬಾ ಕ್ರಿಯಾಶೀಲ ಮಹಿಳೆ. ಅವರು ತುಂಬಾ ಧೈರ್ಯಶಾಲಿಯಾಗಿದ್ದರು, ದಾಳಿಯಾಗಲಿ ಅಥವಾ ಯಾವುದೇ ಕ್ರಮವಾಗಲಿ ಮುಲಾಜಿಲ್ಲದೆ ತೆಗೆದುಕೊಳ್ಳುತ್ತಿದ್ದರು, ಇಲಾಖೆಯಲ್ಲಿ ಉತ್ತಮ ಖ್ಯಾತಿಯನ್ನು ಗಳಿಸಿದರು, ಇತ್ತೀಚೆಗೆ ಕೆಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದರು" ಎಂದು ಹಿರಿಯ ಅಧಿಕಾರಿ ದಿನೇಶ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರತಿಮಾ ಅವರಿಗೆ ಯಾವುದೇ ಶತ್ರುಗಳು ಇರಲಿಲ್ಲ, ಹೊಸ ನಿಯಮಗಳ ಪ್ರಕಾರ ಅವರು ತಮ್ಮ ಕೆಲಸವನ್ನು ಉತ್ತಮವಾಗಿ ಮಾಡಿದ್ದಾರೆ, ಇದರಿಂದಲೇ ಅವರು ಇಲಾಖೆಯಲ್ಲಿ ಉತ್ತಮ ಹೆಸರು ಗಳಿಸಿದ್ದರು ಎಂದು ದಿನೇಶ್ ಮಾಹಿತಿ ನೀಡಿದ್ದಾರೆ.
ಭಾನುವಾರ ಬೆಳಗ್ಗೆ ಕೊಲೆಯಾಗಿರುವುದು ಬೆಳಕಿಗೆ
ಬೆಂಗಳೂರು ಗ್ರಾಮಾಂತರದಲ್ಲಿ ಕೆಲಸ ಮಾಡುತ್ತಿದ್ದ ಪ್ರತಿಮಾ ಶಿವಮೊಗ್ಗದ ಕಾಲೇಜಿನಲ್ಲಿ ಎಂಎಸ್ಸಿ ಓದಿದ್ದಾರೆ. ಒಂದು ವರ್ಷದಿಂದ ಬೆಂಗಳೂರಿನ ರಾಮನಗರದಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರ ಕೆಲಸ ಮುಗಿಸಿದ ಬಳಿಕ ಪ್ರತಿಮಾರನ್ನು ಡ್ರೈವರ್ ಮನೆಗೆ ಡ್ರಾಪ್ ಮಾಡಿದ್ದಾನೆ, ಅಂದು ರಾತ್ರಿ 8.30ರ ಸುಮಾರಿಗೆ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ.
ಭಾನುವಾರ ಮುಂಜಾನೆ ಆಕೆಯ ಸಹೋದರ ಆಕೆಯ ಮನೆಗೆ ಬಂದು ನೋಡಿದಾಗ ಆಕೆ ಶವವಾಗಿ ಪತ್ತೆಯಾಗಿದ್ದಾಳೆ. ಹಿಂದಿನ ರಾತ್ರಿ ಆಕೆಗೆ ಕರೆ ಮಾಡಿದರೂ ಆಕೆ ಉತ್ತರಿಸಿರಲಿಲ್ಲ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ, ಫೋರೆನ್ಸಿಕ್ ಮತ್ತು ತಾಂತ್ರಿಕ ತಂಡಗಳು ಸ್ಥಳದಲ್ಲಿ ಸುಳಿವುಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ತನಿಖೆಗಾಗಿ ಮೂರು ತಂಡಗಳನ್ನು ರಚಿಸಲಾಗಿದೆ. ಏನಾಯಿತು ಎಂದು ನಿಖರವಾಗಿ ತಿಳಿದುಕೊಂಡ ನಂತರ ನಾವು ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಪೊಲೀಸ್ ಅಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್ ಹೇಳಿದ್ದಾರೆ
ಹತ್ಯೆಯ ಬಗ್ಗೆ ಕಟ್ಟುನಿಟ್ಟಿನ ತನಿಖೆ ನಡೆಸಲಾಗುವುದು ಮತ್ತು ಹೊಣೆಗಾರರನ್ನು ನ್ಯಾಯಾಂಗಕ್ಕೆ ತರಲಾಗುವುದು ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.












Click it and Unblock the Notifications