ಜೇಬು ಸುಡಲಿದೆ ಕಾಫಿ: ಬೆಂಗಳೂರು ನಗರದಲ್ಲಿ ಕಾಫಿ, ಟೀ ದರ ಏರಿಕೆ
ಬೆಂಗಳೂರು, ಅಕ್ಟೋಬರ್ 21: ಉದ್ಯಾನ ನಗರಿ ಬೆಂಗಳೂರಿನಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಮಳೆಯ ನಡುವೆ ಕಾಫಿ, ಟೀ ಇಲ್ಲದಿದ್ದರೆ ಕಷ್ಟ ಕಷ್ಟ. ಆದರೆ ದೀಪಾವಳಿ ಹಬ್ಬದ ಬಳಿಕ ಅಂದರೆ ನವೆಂಬರ್ ತಿಂಗಳಿನಲ್ಲಿ ಬೆಂಗಳೂರು ನಗರದಲ್ಲಿ ಬಿಸಿ ಬಿಸಿ ಕಾಫಿ, ಟೀ ನಾಲಿಗೆ ಜೊತೆಗೆ ಜೇಬು ಸುಡಲಿದೆ. ಹೋಟೆಲ್‌ಗಳಲ್ಲಿ ಬೆಲೆಗಳು ಏರಿಕೆಯಾಗಲಿವೆ.
ಕಾಫಿ ಪುಡಿ, ಟೀ ಪುಡಿ ದರ ಏರಿಕೆ, ಹಾಲಿನ ದರದ ಏರಿಕೆಯನ್ನು ಮುಂದಿಟ್ಟುಕೊಂಡು ನಗರದಲ್ಲಿ ಕಾಫಿ, ಟೀ ದರವನ್ನು ಏರಿಕೆ ಮಾಡಲು ಹೋಟೆಲ್‌ಗಳು ತೀರ್ಮಾನಿಸಿವೆ. ಎಷ್ಟು ಏರಿಕೆ ಮಾಡಬೇಕು? ಎಂದು ದೀಪಾವಳಿ ಬಳಿಕ ನಡೆಯುವ ಸಭೆಯಲ್ಲಿ ತೀರ್ಮಾನ ಮಾಡಲಾಗುತ್ತದೆ. ಈಗಲೇ ನಗರದಲ್ಲಿ 10 ರಿಂದ 20 ರೂ. ತನಕ ವಿವಿಧ ಮಾದರಿಯಲ್ಲಿ ಕಾಫಿ, ಟೀ ದರವಿದೆ.

ದರಗಳು ಏರಿಕೆ ಖಚಿತ: ಈ ಸಲ ಭಾರೀ ಮಳೆ ಸುರಿದಿದೆ. ಆದ್ದರಿಂದ ಕಾಫಿ ಬೆಳೆ ಮೇಲೆ ಪರಿಣಾಮ ಉಂಟಾಗಿದ್ದು, ಕಾಫಿ ಪುಡಿ ಬೆಲೆಗಳು ಏರಿಕೆಯಾಗಿವೆ. ಮಾರುಕಟ್ಟೆಗೆ ಅಗತ್ಯ ಇರುವುಷ್ಟು ಕಾಫಿ ಪೂರೈಕೆಯಾಗುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಆದ್ದರಿಂದ ದರಗಳು ದುಪ್ಪಟ್ಟಾಗಿವೆ.
ಜನವರಿಯಲ್ಲಿ ಚಿಕೋರಿ ಮಿಶ್ರಿತ ಕಾಫಿ ಪುಡಿ ದರ ಕೆಜಿ 220-250 ರೂ. ಇತ್ತು. ಆದರೆ ಈಗ ಕಾಫಿಪುಡಿ ಬೆಲೆಗಳು ದುಬಾರಿಯಾಗಿವೆ. ಸದ್ಯ ರೊಬೊಸ್ಟಾ ಕಾಫಿ ಪುಡಿ ಬೆಲೆ ಕೆಜಿಗೆ 200 ರಿಂದ 420 ರೂ. ಮತ್ತು ಅರೇಬಿಕಾ ಕೆಜಿಗೆ 290 ರಿಂದ 465 ರ ತನಕ ಏರಿಕೆಯಾಗಿದೆ. ಚಿಕೋರಿ ರಹಿತ ಕಾಫಿ ಪುಡಿ ಬೆಲೆ 750 ರೂ. ಆಗಿದೆ.
ಟೀ ಪುಡಿಯ ಬೆಲೆಯಲ್ಲಿಯೂ ಗಣನೀಯ ಏರಿಕೆಯಾಗಿದೆ. ಕೆಜಿಗೆ 40 ರಿಂದ 50 ರೂ. ಏರಿಕೆಯಾಗಿದೆ ಎಂದು ಹನುಮಂತನಗರದಲ್ಲಿ 360 ಕಾಫಿ ಶಾಪ್ ನಡೆಸುವ ಪಲ್ಲವಿ ಮಾಹಿತಿ ನೀಡಿದ್ದಾರೆ. ಆದ್ದರಿಂದ ಈಗ ದರ ಏರಿಕೆ ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ. ನವೆಂಬರ್‌ನಲ್ಲಿ ದರ ಏರಿಕೆ ಮಾಡುತ್ತೇವೆ. 1 ರಿಂದ 3 ರೂ. ತನಕ ದರ ಏರಿಕೆಯಾಗಲಿದೆ ಎಂದು ಹೇಳಿದ್ದಾರೆ.
ಈ ವರ್ಷದಲ್ಲಿ ಎರಡು ಬಾರಿ ಸಿಲಿಂಡರ್ ಬೆಲೆಗಳು ಹೆಚ್ಚಾಗಿದೆ. ರಾಜ್ಯ ಸರ್ಕಾರ ಹಾಲಿನ ಬೆಲೆಯನ್ನು ಏರಿಸಿದೆ. ಆದ್ದರಿಂದ ನಮಗೆ ಆಗುವ ನಷ್ಟವನ್ನು ತಪ್ಪಿಸಲು ಕಾಫಿ, ಟೀ ಬೆಲೆಯನ್ನು ಏರಿಕೆ ಮಾಡುವುದು ಅನಿವಾರ್ಯ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ. ಸಾಮಾನ್ಯ ಹೋಟೆಲ್, ದರ್ಶಿನಿ, ಕೆಫೆಗಳಲ್ಲಿ ಕಾಫಿ, ಟೀ ದರಗಳಲ್ಲಿ ವ್ಯತ್ಯಾಸವಿದೆ. ಈಗ ನಗರದ ಎಲ್ಲಾ ಕಡೆ ಕಾಫಿ, ಟೀ ದರಗಳು ಏರಿಕೆಯಾಗಲಿವೆ.
ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ. ಸಿ. ರಾವ್ ಪ್ರಕಾರ ದೀಪಾವಳಿ ಬಳಿಕ ಕಾಫಿ, ಟೀ ದರಗಳು ಹೆಚ್ಚಳವಾಗಬಹುದು. ಗ್ರಾಹಕರಿಗೆ ಹೊರೆ ಆಗದಂತೆ, ಹೋಟೆಲ್‌ಗಳಿಗೆ ಅನುಕೂಲವಾಗುವಂತೆ ನಿರ್ಣಯ ಕೈಗೊಳ್ಳುತ್ತೇವೆ. ಕಾಫಿ, ಟೀ ಪುಡಿಗಳ ದರ ಏರಿಕೆ ಹಿನ್ನಲೆಯಲ್ಲಿ ಇದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.
ಈಗಾಗಲೇ ಎರಡು ಬಾರಿ ಕಾಫಿ, ಟೀ ದರಗಳನ್ನು ಹೆಚ್ಚಿಸಲಾಗಿದೆ. ಆದರೆ ಈಗ ಕಾಫಿ, ಟೀ ಪುಡಿಯ ಬೆಲೆ ಏರಿಕೆ ಹಿನ್ನಲೆಯಲ್ಲಿ ದರಗಳನ್ನು ಏರಿಕೆ ಮಾಡಲಾಗುತ್ತದೆ. ಸದ್ಯದ ಮಾಹಿತಿ ಪ್ರಕಾರ 1 ರಿಂದ 3 ರೂ. ತನಕ ದರಗಳು ಹೆಚ್ಚಾಗುವ ಸಾಧ್ಯತೆ ಇದೆ.












Click it and Unblock the Notifications