60 ಕೋಟಿ ವೆಚ್ಚದಲ್ಲಿ ಕಲಾಸಿಪಾಳ್ಯದಲ್ಲಿ ಬಸ್ ನಿಲ್ದಾಣ ನಿರ್ಮಾಣ
ಬೆಂಗಳೂರು, ಆಗಸ್ಟ್ 18 : ಸದಾ ಜನಜಂಗುಳಿಯಿಂದ ತುಂಬಿರುವ ಕಲಾಸಿಪಾಳ್ಯದಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ ಸ್ಥಾಪನೆಯಾಗಲಿದೆ. 60 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಬಸ್ ನಿಲ್ದಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ಮಾಡಿದರು.
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಮುಂಭಾಗದಲ್ಲಿ ಕಲಾಸಿಪಾಳ್ಯ ಬಸ್ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದರು. 4 ಎಕರೆ 13 ಗುಂಟೆ ಜಾಗದಲ್ಲಿ 60 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಾಣಗೊಳ್ಳಲಿದೆ.[ಕಲಾಸಿಪಾಳ್ಯದಲ್ಲಿ ಬಸ್ ನಿಲ್ದಾಣ ಕಟ್ಟತ್ತಂತೆ ಸರ್ಕಾರ!]

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ ನಿಲ್ದಾಣ ನಿರ್ಮಾಣ ಮಾಡುವ ಟೆಂಡರ್ ಅನ್ನು ಕೆಎಂವಿ ಪ್ರಾಜೆಕ್ಟ್ ಸಂಸ್ಥೆಗೆ ನೀಡಿದೆ. ನಿಲ್ದಾಣ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿ ಬಿಬಿಎಂಪಿಯ ಬಳಿ ಇದ್ದು, ಅದನ್ನು ಬಿಎಂಟಿಸಿಗೆ ಹಸ್ತಾಂತರ ಮಾಡಲಾಗುತ್ತದೆ.
ನಗರ ಸಾರಿಗೆ ಬಸ್ಸುಗಳ ಫ್ಲಾಟ್ ಫಾರಂ, ಹೊರ ರಾಜ್ಯಗಳ ಬಸ್ಸುಗಳ ಫ್ಲಾಟ್ ಫಾರಂ, ಕೆ.ಆರ್.ಮಾರುಕಟ್ಟೆ ಮೆಟ್ರೋ ನಿಲ್ದಾಣಕ್ಕೆ ಸಬ್ ವೇ ನಿರ್ಮಾಣ, ಫುಡ್‌ಕೋರ್ಟ್, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ವಿವಿಧ ವ್ಯವಸ್ಥೆಗಳು ಬಸ್ ನಿಲ್ದಾಣದಲ್ಲಿರಲಿವೆ.
ಮೆಟ್ರೋ ನಿಲ್ದಾಣಕ್ಕೆ ಸಬ್ ವೇ : ಕಲಾಸಿಪಾಳ್ಯದ ನೂತನ ಬಸ್ ನಿಲ್ದಾಣದಿಂದ ವಿಕ್ಟೋರಿಯಾ ಆಸ್ಪತ್ರೆ ಸಮೀಪದಲ್ಲಿರುವ ನಮ್ಮ ಮೆಟ್ರೋ ನಿಲ್ದಾಣಕ್ಕೆ ಸಬ್ ವೇ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಬೆಂಗಳೂರಿನ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಬಸ್ ನಿಲ್ದಾಣದಿಂದ ಸಂಪರ್ಕವಿಲ್ಲ. ಕಲಾಸಿಪಾಳ್ಯದಿಂದ ನಿರ್ಮಾಣವಾದರೆ, ಇದೇ ಮೊದಲ ನಿಲ್ದಾಣವಾಗಲಿದೆ.












Click it and Unblock the Notifications