ಸಿದ್ದರಾಮಯ್ಯಗೆ ಸ್ವಕ್ಷೇತ್ರದ ಜನರ ತಿರಸ್ಕಾರದ ಭಯ ಕಾಡುತ್ತಿದೆ: ಆರ್ ಅಶೋಕ್ ಮುಂದಿಟ್ಟ ಪ್ರಶ್ನೆಗಳೇನು?
ಬೆಂಗಳೂರು, ಏಪ್ರಿಲ್ 02: ವಿಧಾನಸಭಾ ಚುನಾವಣೆ ವೇಳೆ ಸ್ವಕ್ಷೇತ್ರ ಬಿಟ್ಟು ಬೇರೆಡೆ ಪಲಾಯನ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರದ ಮತದಾರರ ತಿರಸ್ಕಾರದ ಭಯ ಕಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಕಾಲೆಳೆದಿದ್ದಾರೆ.
ಲೋಕಸಭಾ ಚುನಾವಣೆ ಅಂಗವಾಗಿ ಮೈಸೂರಿನಲ್ಲಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಈ ವೇಳೆ ಅವರು ವೇದಿಕೆಯಲ್ಲಿ ಸಿದ್ದರಾಮಯ್ಯನವರು, ನಾವೆಲ್ಲ ವೇದಿಕೆ ಮೇಲೆ ಇರುವಾಗ ಜನರು ಇಲ್ಲಿಂದ ಹೋಗಬಾರದು. ಹೋದರೆ ಬೇರೆಯ ಸಂದೇಶ ಹೋಗುತ್ತದೆ ಎಂದು, ಇಲ್ಲೇ ಇರುವಂತೆ ಮತದಾರರಿಗೆ ಮನವಿ ಮಾಡುತ್ತಾರೆ.

ಗ್ಯಾರೆಂಟಿಗಳು ಜನರಿಗೆ ತೃಪ್ತಿ ತಂದಿಲ್ಲ?
ಈ ವಿಡಿಯೋ ತುಣಕು ಪೋಸ್ಟ್ ಮಾಡಿರುವ ಆರ್.ಅಶೋಕ್ ಅವರು ಮುಖ್ಯಮಂತ್ರಿಗಳ ವಿರುದ್ಧ ಲೇವಡಿ ಮಾಡಿದ್ದಾರೆ. 2018 ರಲ್ಲಿ ಸೋಲಿನ ಭಯದಿಂದ ತಮ್ಮ ಸ್ವಕ್ಷೇತ್ರ ವರುಣಾದಿಂದ ಬಾದಾಮಿಗೆ ಪಲಾಯನ ಮಾಡಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಈಗ ಮತ್ತೊಮ್ಮೆ ಸ್ವಕ್ಷೇತ್ರದ ಜನರಿಂದ ತಿರಸ್ಕಾರದ ಭಯ ಕಾಡುತ್ತಿದೆ ಎಂದರು.
ನಿಮ್ಮ ಸರ್ಕಾರದ ಗ್ಯಾರೆಂಟಿಗಳು ಜನರಿಗೆ ತೃಪ್ತಿ ತಂದಿಲ್ಲ. ಸರ್ಕಾರದ ಬಿಟ್ಟಿ ಭಾಗ್ಯಗಳು ತಮ್ಮ ಕೈ ಹಿಡಿಯುವುದಿಲ್ಲ ಎಂದು ಗ್ಯಾರೆಂಟಿ ಆಗುತ್ತಿದ್ದಂತೆ ಸಿದ್ದರಾಮಯ್ಯನವರು ವರುಣಾದಲ್ಲಿ ಹೆಚ್ಚಿನ ಲೀಡ್ ಕೊಟ್ಟು ಕುರ್ಚಿ ಉಳಿಸುವಂತೆ ಜನರ ಬಳಿ ಅಂಗಲಾಚುತ್ತಿದ್ದಾರೆ ಎಂದು ಆರೋಪಿಸಿದರು.
ಪಕ್ಷದ ಠೇವಣಿ ಉಳಿಸಿಕೊಳ್ಳಿ
ಸಿಎಂ ತವರು ಕ್ಷೇತ್ರ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಹೀನಾಯ ಸೋಲಾದರೆ ಕುರ್ಚಿ ಬಿಟ್ಟು ಇಳಿಯಬೇಕಾತ್ತದೆ ಎಂದು ಸಿಕ್ಕಸಿಕ್ಕ ಸಣ್ಣ ಪುಟ್ಟ ವಿಪಕ್ಷಗಳ ಮುಖಂಡರನ್ನೆಲ್ಲ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡು ಕನಿಷ್ಠ ಪಕ್ಷ ಠೇವಣಿ ಉಳಿಸಿಕೊಳ್ಳಬೇಕು.

ಇಲ್ಲವಾದರೆ ಕೊನೆಯ ಪಕ್ಷದ ಸೋಲಿನ ಅಂತರವಾದರೂ ಕಡಿಮೆ ಮಾಡಿಕೊಳ್ಳಬೇಕು ಅಂತ ಸಿದ್ದರಾಮಯ್ಯನವರು ಮೂರು ದಿನ ಮೈಸೂರಿನಲ್ಲೇ ಠಿಕಾಣಿ ಹೂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿನ್ನೆ ವರುಣಾ ತಮ್ಮ ಬುರುಡೆ ಭಾಷಣ ಕೇಳಲು ಆಸಕ್ತಿ ಇಲ್ಲದೆ ಜನರು ಸ್ಥಳದಿಂದ ಜಾಗ ಖಾಲಿ ಮಾಡಿದ್ದಾರೆ. ತಮ್ಮ ಕ್ಷೇತ್ರದ ಜನರ ನಡೆ ನೋಡಿದ ಮೇಲೆ ಮತದಾರರ ಮನಸ್ಸಿನಲ್ಲಿ ಕೆಲವು ಪ್ರಶ್ನೆಗಳು ಮೂಡುತ್ತಿವೆ ಎಂದು ಹೇಳಿದರು.
ಈ ಪ್ರಶ್ನೆಗಳಿಗೆ ಉತ್ತರಿಸಲು ಆಗ್ರಹ
ಈ ಘಟನೆ ಕುರಿತು ಕೆಲವು ಪ್ರಶ್ನೆಗಳನ್ನು ಕೇಳಿರುವ ಆರ್.ಅಶೋಕ್ ಅವರು, ನಿಮ್ಮ ಗ್ಯಾರೆಂಟಿಗಳು ಜನರನ್ನು ತಲುಪಿದೆ ಎನ್ನುವ ವಿಶ್ವಾಸವಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಮೈಸೂರಿನಲ್ಲಿ ಹೀನಾಯವಾಗಿ ಸೋಲಿಸಿ ನಿಮ್ಮನ್ನ ಕುರ್ಚಿಯಿಂದ ಇಳಿಸಬೇಕು ಎನ್ನುವ ಹುನ್ನಾರದಿಂದ ಸ್ವಪಕ್ಷದವರೇ ಒಳೇಟು ನೀಡುವ ಭಯ ಕಾಡುತ್ತಿದೆಯೇ?
ವರುಣಾದಲ್ಲಿ 60,000 ಲೀಡ್ ಬರದಿದ್ದರೆ ಕುರ್ಚಿಯಿಂದ ಇಳಿಯಬೇಕು ಎಂದು ಹೈಕಮಾಂಡ್ ಈಗಾಗಲೇ ಫರ್ಮಾನು ಹೊರಡಿಸಿದೆಯೇ?. ಈ ಪ್ರಶ್ನೆಗಳಿಗೆ ತಮ್ಮ ಉತ್ತರಕ್ಕಾಗಿ ಕರ್ನಾಟಕದ ಜನತೆ ಕಾಯುತ್ತಿದ್ದಾರೆ ಎಂದು ಅವರು ಆಗ್ರಹಿಸಿದರು.












Click it and Unblock the Notifications